ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ವಾದ ತಳ್ಳಿ ಹಾಕಿದ ‘ಇಎಸಿ’

ಸುಬ್ರಮಣಿಯನ್‌ ಸಂಶೋಧನಾ ವರದಿಗೆ ಶೀಘ್ರವೇ ಸೂಕ್ತ ವಿವರಣೆ
Last Updated 12 ಜೂನ್ 2019, 17:12 IST
ಅಕ್ಷರ ಗಾತ್ರ

ನವದೆಹಲಿ: ದೇಶಿ ಆರ್ಥಿಕ ವೃದ್ಧಿ ದರದ ಅಂದಾಜನ್ನು ಉತ್ಪ್ರೇಕ್ಷಿತಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರ ವಾದ ಸರಣಿಯನ್ನು ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯು (ಇಎಸಿ) ಸ್ಪಷ್ಟವಾಗಿ ತಳ್ಳಿ ಹಾಕಿದೆ.

ಸುಬ್ರಮಣಿಯನ್‌ ಅವರ ಸಂಶೋಧನಾ ವರದಿಯನ್ನು ವಿವರವಾಗಿ ಪರಿಶೀಲಿಸಲಾಗುವುದು. ಶೀಘ್ರದಲ್ಲಿಯೇ ಈ ವರದಿಗೆ ಸೂಕ್ತ ವಿವರಣೆಯನ್ನೂ ನೀಡಲಾಗುವುದು ಎಂದು ‘ಇಎಸಿ’ಯು ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಷಯದ ಬಗ್ಗೆ ಅಕಾಡೆಮಿಕ್‌ ಚರ್ಚೆ ನಡೆಯಬೇಕಾಗಿರುವುದನ್ನು ಭಾವೋದ್ರೇಕದ ವಿಷಯವನ್ನಾಗಿ ಮಾಡುವುದು ಸರಿಯಲ್ಲ. ದೇಶಿ ಸಾಂಖ್ಯಿಕ ವ್ಯವಸ್ಥೆಯ ಸ್ವಾತಂತ್ರ್ಯ ಮತ್ತು ಗುಣಮಟ್ಟ ಕಾಯ್ದುಕೊಳ್ಳುವುದು ಅಪೇಕ್ಷಣೀಯವಾಗಿದೆ.

ಇದು ಅರವಿಂದ ಅವರಿಗೂ ಚೆನ್ನಾಗಿ ತಿಳಿದಿದೆ. ಅವರೇ ಒಪ್ಪಿಕೊಂಡಿರುವಂತೆ, ಭಾರತದ ವೃದ್ಧಿ ದರದ ಅಂಕಿ ಅಂಶಗಳನ್ನು ಅರ್ಥೈಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಆದರೂ ಅವರಿಗೆ ಈಗಲೂ ಈ ಬಗ್ಗೆ ಖಚಿತತೆ ಇಲ್ಲದಿರುವುದು ಅವರ ಸಂಶೋಧನಾ ವರದಿಯಲ್ಲಿಯೇ ಉಲ್ಲೇಖಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ವರಮಾನ ಅಂದಾಜು ಮಾಡಲು ಸ್ವೀಕಾರಾರ್ಹವಾದ ನಿಯಮ ಮತ್ತು ವಿಧಾನವನ್ನು ಉದ್ದಕ್ಕೂ ಅನುಸರಿಸಿಕೊಂಡು ಬರಲಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯ ತಿಳಿಸಿದೆ. ಅರವಿಂದ ಸುಬ್ರಮಣಿಯನ್‌ ಅವರ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದೂ ಹೇಳಿದೆ.

ಉತ್ಪಾದನೆ ಕೈಬಿಟ್ಟಿರುವ ಅಂದಾಜು: ಸಿಐಐ

ದೇಶಿ ಜಿಡಿಪಿ ದರವನ್ನು ಶೇ 2.5ರಷ್ಟು ಅತಿಯಾಗಿ ಅಂದಾಜು ಮಾಡಲಾಗಿದೆ ಎನ್ನುವ ಚರ್ಚೆಯಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟವೂ (ಸಿಐಐ) ಕೈಜೋಡಿಸಿದೆ.

ಅರವಿಂದ ಸುಬ್ರಮಣಿಯನ್‌ ಅವರು ಮಾಡಿರುವ ಬೆಳವಣಿಗೆ ದರದ ಅಂದಾಜಿನಲ್ಲಿ ಉತ್ಪಾದನೆ ಮತ್ತು ಗುಣಮಟ್ಟ ಕೈಬಿಡಲಾಗಿದೆ ಎಂದು ‘ಸಿಐಐ’ ಅಭಿಪ್ರಾಯಪಟ್ಟಿದೆ.

‘ದೇಶಿ ಆರ್ಥಿಕತೆಯು ತುಂಬ ಸಂಕೀರ್ಣವಾಗಿದೆ. ಸೀಮಿತ ಸಂಖ್ಯೆಯ ಮಾನದಂಡಗಳನ್ನು ಆಧರಿಸಿ ಅದರ ಸಾಧನೆಯನ್ನು ಕರಾರುವಾಕ್ಕಾಗಿ ಅಳೆಯಲು ಸಾಧ್ಯವಾಗಲಾರದು. ಜಿಡಿಪಿ ಅಂಕಿ ಅಂಶಗಳು ಸಮಗ್ರ ಸ್ವರೂಪದಲ್ಲಿ ಇರಬೇಕು. ಆರ್ಥಿಕ ಬೆಳವಣಿಗೆಗೆ ಕಾರಣವಾಗುವ ಸಂಗತಿಗಳನ್ನೆಲ್ಲ ಒಳಗೊಂಡಿರಬೇಕು’ ಎಂದು ಸಿಐಐ ಮಹಾ ನಿರ್ದೇಶಕ ಚಂದ್ರಜಿತ್‌ ಬ್ಯಾನರ್ಜಿ ಅವರು ವಿಶ್ಲೇಷಿಸಿದ್ದಾರೆ.

ಉದಾಹರಣೆಗೆ ಕೃಷಿ ರಂಗವು ದೇಶಿ ಆರ್ಥಿಕತೆಯ ಒಂದು ಆರಾಂಶದಷ್ಟು ಭಾಗವಾಗಿದ್ದರೂ ಅದನ್ನು ಅರವಿಂದ್‌ ಅವರ ಅಧ್ಯಯನದಲ್ಲಿ ಪರಿಗಣಿಸಲಾಗಿಲ್ಲ. ಜಿಡಿಪಿಯಲ್ಲಿ ಶೇ 50ಕ್ಕಿಂತ ಹೆಚ್ಚು ಪಾಲು ಹೊಂದಿರುವ ಸೇವಾ ವಲಯವನ್ನು ಅಸಮರ್ಪಕವಾಗಿ ಪರಿಗಣಿಸಲಾಗಿದೆ. ಐ.ಟಿ ಮತ್ತು ದೂರಸಂಪರ್ಕ ವಲಯಗಳು ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರೂ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಗ್ರಾಮೀಣ ಪ್ರದೇಶದಲ್ಲಿನ ರಸ್ತೆಗಳ ಅಭಿವೃದ್ಧಿಯಂತಹ ಮೂಲಸೌಕರ್ಯ ವಲಯಗಳನ್ನೂ ವರದಿಯಲ್ಲಿ ಪ್ರಸ್ತಾಪಿಸಿಲ್ಲ’ ಎಂದು ಬ್ಯಾನರ್ಜಿ ತಮ್ಮ ನಿಲುವಿಗೆ ಸಮರ್ಥನೆ ನೀಡಿದ್ದಾರೆ.

ಆರ್ಥಿಕ ಬೆಳವಣಿಗೆ ದರಕ್ಕೆ ಸಂಬಂಧಿಸಿದ ಸರ್ಕಾರಿ ಅಂಕಿ ಅಂಶಗಳ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ಸುಬ್ರಮಣಿಯನ್‌ ಅವರ ಸಂಶೋಧನಾ ವರದಿ ಪ್ರಕಟಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT