ಮಂಗಳವಾರ, ಡಿಸೆಂಬರ್ 1, 2020
18 °C

ದೇಶದಲ್ಲಿ ಆರ್ಥಿಕ ಹಿಂಜರಿತ: ಆರ್‌ಬಿಐ ಅಧಿಕಾರಿಗಳ ಹೇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಸತತ ಎರಡನೆಯ ತ್ರೈಮಾಸಿಕದಲ್ಲಿಯೂ ಶೂನ್ಯಕ್ಕಿಂತ ಕಡಿಮೆ ಇರಲಿದ್ದು, ದೇಶವು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರ್ಥಿಕ ಹಿಂಜರಿತದ ಸ್ಥಿತಿಗೆ ಕಾಲಿಡಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇಕಡ (–) 23.9ರಷ್ಟು ಆಗಿತ್ತು. ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅದು ಶೇಕಡ (–) 8.6ರಷ್ಟು ಕುಸಿತ ಕಾಣಲಿದೆ ಎಂದು ಆರ್‌ಬಿಐನ ಹಣಕಾಸು ನೀತಿ ವಿಭಾಗದ ಅಧಿಕಾರಿ ಪಂಕಜ್ ಕುಮಾರ್ ಅವರು ಬರೆದ ಲೇಖನದಲ್ಲಿ ಹೇಳಲಾಗಿದೆ. ಇದನ್ನು ಆರ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಬುಧವಾರ ಆರ್‌ಬಿಐನ ತಿಂಗಳ ವರದಿ ಬಿಡುಗಡೆ ಆಗಿದ್ದು, ಆರ್ಥಿಕ ಬೆಳವಣಿಗೆಯನ್ನು ನಿರ್ಧರಿಸುವ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಆರ್‌ಬಿಐನ ಸಂಶೋಧಕರು ತಮ್ಮ ಅಂದಾಜುಗಳನ್ನು ಅದರಲ್ಲಿ ದಾಖಲಿಸಿದ್ದಾರೆ. ಆರ್ಥಿಕ ಬೆಳವಣಿಗೆಯ ಬಗ್ಗೆ ಸರ್ಕಾರ ಅಧಿಕೃತ ಮಾಹಿತಿ ಪ್ರಕಟಿಸುವುದಕ್ಕೂ ಮೊದಲೇ ಈ ಅಂದಾಜು ಮಾಡಿದ್ದಾರೆ. ಈ ಲೇಖನದಲ್ಲಿ ಇರುವ ಅಭಿಪ್ರಾಯವು ಆರ್‌ಬಿಐನ ಅಧಿಕೃತ ಅಭಿಪ್ರಾಯ ಅಲ್ಲ.

‘ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯು ಶೂನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರಲಿದೆ. ಅಂದರೆ, ಸತತ ಎರಡನೆಯ ಬಾರಿ ನಕಾರಾತ್ಮಕ ಮಟ್ಟದಲ್ಲಿ ಇರಲಿದೆ. 2020–21ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತವು ತಾಂತ್ರಿಕ ಹಿಂಜರಿತದ ಸ್ಥಿತಿಯನ್ನು ಪ್ರವೇಶಿಸಲಿದೆ’ ಎಂದು ಪಂಕಜ್‌ ಕುಮಾರ್‌ ಅವರು ತಮ್ಮ ‘ಎಕನಾಮಿಕ್‌ ಆ್ಯಕ್ಟಿವಿಟಿ ಇಂಡೆಕ್ಸ್‌’ ಲೇಖನದಲ್ಲಿ ಬರೆದಿದ್ದಾರೆ. ಸತತವಾಗಿ ಎರಡು ತ್ರೈಮಾಸಿಕಗಳಲ್ಲಿ ಆರ್ಥಿಕ ಬೆಳವಣಿಗೆಯು ನಕಾರಾತ್ಮಕವಾಗಿದ್ದರೆ ಅದನ್ನು ‘ತಾಂತ್ರಿಕ ಹಿಂಜರಿತ’ ಎನ್ನಲಾಗುತ್ತದೆ.

ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಜಿಡಿಪಿ ಕುಸಿತದ ಪ್ರಮಾಣ ಕಡಿಮೆ ಆಗಲಿದ್ದು, ಕುಸಿತವು ಅಲ್ಪಕಾಲಕ್ಕೆ ಸೀಮಿತವಾಗಿರುವ ನಿರೀಕ್ಷೆ ಇದೆ. ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿರುವುದು, ಸೇವಾ ವಲಯದ ಚೇತರಿಕೆಯಿಂದಾಗಿ ಆರ್ಥಿಕತೆಯು 2020ರ ಮೇ/ಜೂನ್‌ನಲ್ಲಿ ಇದ್ದಂತಹ ಸ್ಥಿತಿಗಿಂತಲೂ ವೇಗವಾಗಿ ಬೆಳವಣಿಗೆ ಹಾದಿಗೆ ಮರಳಲಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.

ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದರೂ ಕೌಟುಂಬಿಕ ಹಣಕಾಸು ಉಳಿತಾಯದ ಪ್ರಮಾಣ 2020ರ ಜೂನ್‌ ತ್ರೈಮಾಸಿಕದಲ್ಲಿ ಶೇ 2.14ಕ್ಕೆ ಏರಿಕೆಯಾಗಿದೆ ಎನ್ನುವುದನ್ನು ಪ್ರಾಥಮಿಕ ಅಂದಾಜುಗಳು ತಿಳಿಸಿವೆ. 2019ರ ಜೂನ್‌ ತ್ರೈಮಾಸಿಕದಲ್ಲಿ ಕೌಟುಂಬಿಕ ಉಳಿತಾಯ ಶೇ 7.9ರಷ್ಟು ಇತ್ತು. 2020ರ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 10ರಷ್ಟಿತ್ತು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು