ನವದೆಹಲಿ: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್‌ವಿಬಿ) ದಿವಾಳಿ ಆಗಿರುವುದರ ಪರಿಣಾಮವು ದೇಶದ ಷೇರುಪೇಟೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಕಂಡುಬರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಇದರ ಜೊತೆಗೆ ಹಣದುಬ್ಬರ ಮತ್ತು ವಿದೇಶಿ ಬಂಡವಾಳ ಒಳಹರಿವು ಸಹ ವಹಿವಾಟಿನಲ್ಲಿ ಏರಿಳಿತ ಸೃಷ್ಟಿಸುವ ನಿರೀಕ್ಷೆ ಮಾಡಲಾಗಿದೆ. ಫೆಬ್ರುವರಿ ತಿಂಗಳ ಗ್ರಾಹಕ ದರ ಸೂಚ್ಯಂಕ ಆಧರಿಸಿದ ಹಣದುಬ್ಬರವು ಸೋಮವಾರ ಬಿಡುಗಡೆ ಆಗಲಿದೆ.
ಜಾಗತಿಕ ವಿದ್ಯಮಾನಗಳು ದುರ್ಬಲ ಆಗಿರುವುದರಿಂದ ಭಾರತದ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಆಗುತ್ತಿದೆ. ಮುಂದಿನವಾರವೂ ಇದೇ ಸ್ಥಿತಿ ಇರಲಿದೆ ಎಂದು ಸ್ವಸ್ತಿಕ್ ಇನ್‌ವೆಸ್ಟ್‌ಮಾರ್ಟ್ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ ಹೇಳಿದ್ದಾರೆ.
ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಳ ಮಾಡುತ್ತಿವೆ. ಈ ನಡುವೆ, ನವೋದ್ಯಮಗಳಿಗೆ ಹಣಕಾಸಿನ ನೆರವು ನೀಡುವ ಎಸ್‌ವಿಬಿ ವೈಫಲ್ಯವು ಜಾಗತಿಕ ಹಣಕಾಸು ವ್ಯವಸ್ಥೆಯ ಸ್ಥಿತಿಯ ಬಗ್ಗೆ ಆತಂಕ ಮೂಡಿಸಿದೆ.
ಇನ್ನೂ ಹೆಚ್ಚಿನ ಸಮಯದವರೆಗೆ ಮತ್ತು ತ್ವರಿತವಾಗಿ ಬಡ್ಡಿದರ ಹೆಚ್ಚಳ ಮಾಡುವ ಬಗ್ಗೆ ಅಮೆರಿಕದ ಫೆಡರಲ್ ರಿಸರ್ವ್ ಸೂಚನೆ ನೀಡಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತ ಸ್ಥಿತಿ ನಿರ್ಮಾಣವಾಗಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.