ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಕಂಡಕ್ಟರ್ ಕೊರತೆ: ವಾಹನ, ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಪೆಟ್ಟು

Last Updated 6 ಅಕ್ಟೋಬರ್ 2021, 16:31 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್‌ಗಳಿಗೆ ಉಂಟಾಗಿರುವ ಕೊರತೆಯು ದೇಶದ ಮೊಬೈಲ್‌, ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ವಾಹನ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಿದೆ.

ಹಬ್ಬಗಳ ಸಂದರ್ಭದಲ್ಲಿ ಗ್ರಾಹಕರಿಗೆ ಇಂತಹ ಉತ್ಪನ್ನಗಳ ಮೇಲೆ ಕೊಡುಗೆಗಳು, ರಿಯಾಯಿತಿಗಳು ದೊರೆಯುತ್ತವೆ. ಆದರೆ, ಈ ಬಾರಿ ಸೆಮಿಕಂಡಕ್ಟರ್ ಕೊರತೆಯ ಕಾರಣದಿಂದಾಗಿ ಗ್ರಾಹಕರು ಮೊಬೈಲ್‌, ಟಿ.ವಿ. ಹಾಗೂ ಕಾರುಗಳಿಗೆ ಹೆಚ್ಚಿನ ಮೊತ್ತ ಪಾವತಿಸುತ್ತಿದ್ದಾರೆ. ‘ಬೇಡಿಕೆ ಬಹಳ ಉತ್ತಮವಾಗಿದೆ. ಆದರೆ, ಸೆಮಿಕಂಡಕ್ಟರ್ ಕೊರತೆಯ ಕಾರಣದಿಂದಾಗಿ ಪೂರೈಕೆ ತುಸು ಮಂದವಾಗಿದೆ. ಹೀಗಾಗಿ, ಬುಕಿಂಗ್ ಸಂಖ್ಯೆಗಳು ಜಾಸ್ತಿ ಆಗಿದ್ದರೂ ಪೂರೈಕೆ ಆ ಪ್ರಮಾಣದಲ್ಲಿ ಆಗುತ್ತಿಲ್ಲ’ ಎಂದು ಮಾರುತಿ ಸುಜುಕಿ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ತಿಳಿಸಿದರು.

ಮಾರುತಿ ಸುಜುಕಿ ಕಂಪನಿಯಲ್ಲಿ 2.15 ಲಕ್ಷದಿಂದ 2.2 ಲಕ್ಷದಷ್ಟು ವಾಹನಗಳ ಬುಕಿಂಗ್ ಬಾಕಿ ಇದೆ. ಇಡೀ ಆಟೊಮೊಬೈಲ್‌ ಉದ್ದಿಮೆಯಲ್ಲಿ ಅಂದಾಜು 4.5 ಲಕ್ಷದಿಂದ 5 ಲಕ್ಷದಷ್ಟು ಬುಕಿಂಗ್‌ಗಳು ಬಾಕಿ ಇವೆ ಎಂದು ಅವರು ಹೇಳಿದರು. ಪೂರೈಕೆಯಲ್ಲಿನ ಸಮಸ್ಯೆಯ ಕಾರಣದಿಂದಾಗಿ ದೊಡ್ಡ ಪ್ರಮಾಣದ ರಿಯಾಯಿತಿಗಳು ಈ ಬಾರಿ ಇರಲಿಕ್ಕಿಲ್ಲ ಎಂದರು.

‘ನಮ್ಮ ಉದ್ಯಮದ ಮುಂದಿರುವ ಅತಿದೊಡ್ಡ ಸವಾಲು ಸೆಮಿಕಂಡಕ್ಟರ್ ಕೊರತೆ’ ಎಂದು ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘದ (ಸಿಇಎಎಂಎ) ಅಧ್ಯಕ್ಷ ಎರಿಕ್ ಬ್ರಗ್ಯಾಂಜಾ ತಿಳಿಸಿದರು. ಆದರೆ, ಸದ್ಯಕ್ಕೆ ಉತ್ಪನ್ನಗಳ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿಲ್ಲ ಎಂದರು. 2022ರಲ್ಲಿ ಉತ್ಪನ್ನಗಳ ಪೂರೈಕೆಯಲ್ಲಿ ತೊಂದರೆ ಆಗುವ ಸಾಧ್ಯತೆ ಇದೆ, ಆಗ ಉತ್ಪನ್ನಗಳ ಬೆಲೆ ಹೆಚ್ಚಳ ಕೂಡ ಆಗಬಹುದು ಎಂದು ಹೇಳಿದರು.

ಸೆಮಿಕಂಡಕ್ಟರ್ ಕೊರತೆಯಿಂದಾಗಿ 4ಕೆ ಟಿ.ವಿ.ಗಳ ಬೆಲೆಯಲ್ಲಿ ಶೇಕಡ 50ರಷ್ಟು ಏರಿಕೆ ಆಗಿದೆ ಎಂದು ಸುಪರ್‌ ಪ್ಲಾಸ್ಟ್ರಾನಿಕ್ಸ್ ಪ್ರೈ.ಲಿ. ಕಂಪನಿಯ ಸಿಇಒ ಅವನೀತ್ ಸಿಂಗ್ ಮಾರ್ವಾ ತಿಳಿಸಿದರು. ಉತ್ಪಾದನೆಯಲ್ಲಿ ಆಗಿರುವ ಅಡಚಣೆಯು 2022ರ ಕೊನೆಯವರೆಗೂ ಮುಂದುವರಿಯಬಹುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT