ಶನಿವಾರ, ಜುಲೈ 2, 2022
25 °C

ಚಿನ್ನದ ಬಾಂಡ್‌ ಬೆಲೆ ನಿಗದಿ: 7ರಿಂದ 11ರವರೆಗೆ ಖರೀದಿಗೆ ಲಭ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಬ್ಬದ ದಿನಗಳಲ್ಲಿನ ಖರೀದಿ ಉತ್ಸಾಹವನ್ನು ಸದ್ಬಳಕೆ ಮಾಡಿಕೊಳ್ಳಲು ಉದ್ದೇಶಿಸಿರುವ ಕೇಂದ್ರ ಸರ್ಕಾರವು ಚಿನ್ನದ ಬಾಂಡ್‌ನ ಹೊಸ ಕಂತನ್ನು ಇದೇ 7ರಂದು  ಬಿಡುಗಡೆ ಮಾಡಲಿದೆ.

2019–20ನೆ ಸಾಲಿನ ಚಿನ್ನದ ಬಾಂಡ್‌ನ ಹೊಸ ಕಂತು ಇದೇ 7ರಿಂದ 11ರವರೆಗೆ ಖರೀದಿಗೆ ಲಭ್ಯ ಇರಲಿದೆ. ಬಾಂಡ್ ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹ 3,788ರಂತೆ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ಬಾಂಡ್‌ ಖರೀದಿಸುವ ಮತ್ತು ಬಾಂಡ್‌ ಖರೀದಿಗೆ ಡಿಜಿಟಲ್‌ ರೂಪದಲ್ಲಿ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ₹ 50ರಂತೆ (₹ 3,738) ರಿಯಾಯ್ತಿ ನೀಡಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸಾರ್ವಜನಿಕರು ಚಿನ್ನವನ್ನು ಭೌತಿಕ ಸ್ವರೂಪದಲ್ಲಿ ತಮ್ಮ ಬಳಿ ಇಟ್ಟುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಲು ಮತ್ತು ಉಳಿತಾಯದ ಹಣವನ್ನು ಚಿನ್ನದ ಬಾಂಡ್‌ಗಳಲ್ಲಿ ತೊಡಗಿಸಲು ಉತ್ತೇಜನ ನೀಡಲು 2015ರ ನವೆಂಬರ್‌ನಲ್ಲಿ ಚಿನ್ನದ ಬಾಂಡ್ ಯೋಜನೆ ಜಾರಿಗೆ ತರಲಾಗಿತ್ತು. ಜನರು ತಮ್ಮ ಉಳಿತಾಯದ ಹಣವನ್ನು ಕೇವಲ ಚಿನ್ನ ಖರೀದಿಗೆ ಬಳಸದೇ, ಹಣಕಾಸಿನ ಇತರ ಮೂಲಗಳಲ್ಲಿ ತೊಡಗಿಸುವಂತೆ ಪ್ರೇರಣೆ ನೀಡುವ ಮೂಲಕ ಅವರ ಉಳಿತಾಯ ಪ್ರವೃತ್ತಿಯಲ್ಲಿ ಆಮೂಲಾಗ್ರ ಬದಲಾವಣೆ ತರುವುದೂ ಸರ್ಕಾರದ ಉದ್ದೇಶವಾಗಿದೆ.

ಚಿನ್ನದ ಬಾಂಡ್‌ಗಳಲ್ಲಿ ಕನಿಷ್ಠ ಹೂಡಿಕೆಯು ಒಂದು ಗ್ರಾಂ ಆಗಿರುತ್ತದೆ. ವ್ಯಕ್ತಿಯೊಬ್ಬ ಒಂದು ವರ್ಷದ ಅವಧಿಯಲ್ಲಿ ಗರಿಷ್ಠ 500 ಗ್ರಾಂಗಳಷ್ಟು ಬಾಂಡ್‌ ಖರೀದಿಸಬಹುದಾಗಿದೆ. ಹಿಂದೂ ಅವಿಭಕ್ತ ಕುಟುಂಬವು ಗರಿಷ್ಠ 4 ಕೆ.ಜಿ ಮತ್ತು ಟ್ರಸ್ಟ್‌ಗಳು 20 ಕೆ.ಜಿಯಷ್ಟು ಬಾಂಡ್‌ ಖರೀದಿಸಲು ಅವಕಾಶ ಇದೆ.

ಚಿನ್ನದ ಬಾಂಡ್‌ ವಿವರ

-₹ 3,788; ಪ್ರತಿ ಗ್ರಾಂ ಬೆಲೆ

-1 ಗ್ರಾಂ; ಕನಿಷ್ಠ ಹೂಡಿಕೆ

-500 ಗ್ರಾಂ; ಗರಿಷ್ಠ ಹೂಡಿಕೆ

-4 ಕೆ.ಜಿ; ಹಿಂದೂ ಅವಿಭಕ್ತ ಕುಟುಂಬದ ಖರೀದಿ ಮಿತಿ

-20 ಕೆ.ಜಿ; ಟ್ರಸ್ಟ್‌ಗಳು ಖರೀದಿಸಬಹುದಾದ ಮಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು