ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ ತೃತೀಯ: ಉತ್ತಮ ಮಾರಾಟದ ನಿರೀಕ್ಷೆ

Published 22 ಏಪ್ರಿಲ್ 2023, 20:54 IST
Last Updated 22 ಏಪ್ರಿಲ್ 2023, 20:54 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಅಕ್ಷಯ ತೃತೀಯದ ದಿನ, ಚಿನ್ನಾಭರಣ ಮತ್ತು ಚಿನ್ನದ ನಾಣ್ಯ ಮಾರಾಟವು ಕಳೆದ ವರ್ಷಕ್ಕಿಂತಲೂ ಉತ್ತಮವಾಗಿರಲಿದೆ ಎಂದು ಇಂಡಿಯನ್‌ ಬುಲಿಯನ್ ಆ್ಯಂಡ್ ಜುವೆಲರಿ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಜೈನ್ ಹೇಳಿದರು.

ಚಿನ್ನದ ದರ ಗರಿಷ್ಠ ಮಟ್ಟದಲ್ಲಿ ಇದ್ದಮಾತ್ರಕ್ಕೆ‌ ಜನರು ಚಿನ್ನ ಖರೀದಿಸುವುದೇ ಇಲ್ಲ ಎಂದಲ್ಲ. ಚಿನ್ನ ಖರೀದಿಗೆ‌ ಅಕ್ಷಯ ತೃತೀಯ ಶುಭದಿನ ಎನ್ನುವ ಭಾವನೆ ಭಾರತೀಯರಲ್ಲಿ ಅದರಲ್ಲೂ ದಕ್ಷಿಣ ಭಾರತದ ಜನರಲ್ಲಿ ಇದೆ. ಹೀಗಾಗಿ ಜನರು ಹೆಚ್ಚಿನ ಪ್ರಮಾಣದಲ್ಲಿ‌‌ ಖರೀದಿಸದೇ ಇದ್ದರೂ, ಒಂದಿಷ್ಟು ಖರೀದಿಯಂತೂ ನಡೆಯಲಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

2022ರ ಅಕ್ಷಯ ತೃತೀಯದ ದಿನ ಚಿನ್ನದ ದರ 10 ಗ್ರಾಂಗೆ ₹50,986ರಷ್ಟು ಇತ್ತು. ಈ ಬಾರಿಯ ಅಕ್ಷಯ ತೃತೀಯದ ದಿನ ಚಿನ್ನದ ದರ ₹60,800 ಇರಬಹುದೆಂದು ಅಂದಾಜು ಮಾಡಲಾಗಿದೆ. ಅಂದರೆ ₹9,814ರಷ್ಟು ಹೆಚ್ಚಾಗಬಹುದು. ಇದು ಖರೀದಿಯ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರಬಹುದು. ಆದರೆ, ಜಾಗತಿಕವಾಗಿ ಆರ್ಥಿಕ ಅನಿಶ್ಚಿತತೆ ಇರುವುದರಿಂದ ತಮ್ಮ ಹಣವನ್ನು ತೊಡಗಿಸಲು ಚಿನ್ನಕ್ಕಿಂತ ಸುರಕ್ಷಿತ ಮಾರ್ಗ ಬೇರೆ ಇಲ್ಲ ಎನ್ನುವುದು ಜನರಿಗೆ ತಿಳಿದಿದೆ. ಮದುವೆ ಸಮಾರಂಭಗಳು ಸಹ ಜೋರಾಗಿ ನಡೆದಿವೆ. ಹೀಗಾಗಿ ಖರೀದಿ ವಹಿವಾಟು ಕಳೆದ ವರ್ಷದ ಅಕ್ಷಯ ತೃತೀಯಕ್ಕಿಂತಲೂ ಉತ್ತಮವಾಗಿರುವ ನಿರೀಕ್ಷೆ ಇದೆ ಎಂದು ಹೇಳಿದರು.

ಚಿನ್ನದ ದರ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಸದ್ಯ ಚಿನಿವಾರ ಪೇಟೆಯಲ್ಲಿ ಲಾಭಗಳಿಕೆಯ ವಹಿವಾಟು ನಡೆಯುತ್ತಿದೆ. ಜನರು ತಮ್ಮ ಬಳಿ ಇರುವ ಚಿನ್ನವನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಲವು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

2022–23ನೇ ಹಣಕಾಸು ವರ್ಷದಲ್ಲಿ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಂದಾಗಿದ್ದರಿಂದ ಚಿನ್ನದ ಇಟಿಎಫ್‌ನಲ್ಲಿ ಹೂಡಿಕೆ ಶೇ 74ರಷ್ಟು ಇಳಿಕೆ ಕಂಡಿದ್ದು ₹653 ಕೋಟಿಯಷ್ಟಾಗಿದೆ. 2021–22ರಲ್ಲಿ ₹2,541 ಕೋಟಿ ಹೂಡಿಕೆ ಆಗಿತ್ತು.

ಚಿನ್ನದ ದರ ಗರಿಷ್ಠ ಮಟ್ಟದಲ್ಲಿ ಇರುವುದು ಖರೀದಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಆದಾಗ್ಯೂ ಆರ್ಥಿಕ ಚಟುವಟಿಕೆಗಳು ಹಳಿಗೆ ಮರಳಿರುವುದರಿಂದ ಅಕ್ಷಯ ತೃತೀಯದಲ್ಲಿ ಚಿನ್ನದ ಮೇಲಿನ ಹೂಡಿಕೆ ಮತ್ತು ಆಭರಣಕ್ಕೆ ಬೇಡಿಕೆ ಉತ್ತಮವಾಗಿರುವ ನಿರೀಕ್ಷೆ ಇದೆ ಎಂದು ಮಲಬಾರ್‌ ಸಮೂಹದ ಅಧ್ಯಕ್ಷ ಎಂ.ಪಿ. ಅಹಮದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT