ನವದೆಹಲಿ: ಆರೋಗ್ಯ ಮತ್ತು ಜೀವ ವಿಮೆ ಕಂತಿನ ಮೇಲೆ ವಿಧಿಸಿರುವ ಜಿಎಸ್‌ಟಿ ಕಡಿಮೆಗೊಳಿಸುವುದಕ್ಕೆ ಸಂಬಂಧಿಸಿದಂತೆ ರಚಿಸಿರುವ 13 ಸಚಿವರ ಸಮಿತಿ ಸಭೆಯು, ಅಕ್ಟೋಬರ್ 19ರಂದು ದೆಹಲಿಯಲ್ಲಿ ನಡೆಯಲಿದೆ.
ಪ್ರಸ್ತುತ ವಿಮೆ ಕಂತಿನ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ರದ್ದುಪಡಿಸಬೇಕು ಅಥವಾ ಕಡಿಮೆಗೊಳಿಸಲು ಕ್ರಮಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಿದೆ. ಇತ್ತೀಚೆಗೆ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ವರದಿ ಸಲ್ಲಿಸಲು ಸಮಿತಿ ರಚಿಸಲಾಗಿತ್ತು.
ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಇದರ ಅಧ್ಯಕ್ಷರಾಗಿದ್ದಾರೆ. ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಗೋವಾ, ಗುಜರಾತ್, ಮೇಘಾಲಯ, ಪಂಜಾಬ್, ತಮಿಳುನಾಡು ಮತ್ತು ತೆಲಂಗಾಣದ ಸಚಿವರು ಸಮಿತಿಯಲ್ಲಿದ್ದಾರೆ.
ಅಕ್ಟೋಬರ್ ಅಂತ್ಯಕ್ಕೆ ವರದಿ ಸಲ್ಲಿಸಲು ಮಂಡಳಿಯು ಸೂಚಿಸಿದೆ. ಈ ವರದಿ ಆಧಾರದ ಮೇಲೆ ನವೆಂಬರ್‌ನಲ್ಲಿ ನಡೆಯುವ ಸಭೆಯಲ್ಲಿ ಮಂಡಳಿಯು ಅಂತಿಮ ನಿರ್ಧಾರ ಕೈಗೊಳ್ಳಲಿದೆ.
2023–24ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯಗಳು ಆರೋಗ್ಯ ವಿಮೆ ಕಂತಿನ ಮೇಲೆ ₹8,262 ಕೋಟಿ ಹಾಗೂ ಮರುವಿಮೆ ಕಂತಿನ ರೂಪದಲ್ಲಿ ₹1,484 ಕೋಟಿ ಜಿಎಸ್‌ಟಿ ಸಂಗ್ರಹಿಸಿವೆ.