ಗುರುವಾರ , ಸೆಪ್ಟೆಂಬರ್ 23, 2021
21 °C
ವೊಡಾಫೋನ್ ಸಮೂಹ ಮತ್ತು ಕೇನ್ ಎನರ್ಜಿ ಕಂಪನಿಗಳಿಗೆ ಪ್ರಯೋಜನ

ಪೂರ್ವಾನ್ವಯ ತೆರಿಗೆ ಕೊನೆಗೊಳಿಸಲು ಮುಂದಾದ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

DH Photo

ನವದೆಹಲಿ: ಪೂರ್ವಾನ್ವಯ ತೆರಿಗೆ ವ್ಯವಸ್ಥೆಯ ಸಮಸ್ಯೆ ಕೊನೆಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಸೂದೆಯೊಂದನ್ನು ಲೋಕಸಭೆಯಲ್ಲಿ ಗುರುವಾರ ಮಂಡಿಸಿದೆ. ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದರೆ, ವೊಡಾಫೋನ್‌ ಹಾಗೂ ಕೇನ್‌ ಎನರ್ಜಿಯಂತಹ ಕಂಪನಿಗಳ ಮುಂದಿರಿಸಿದ್ದ ಪೂರ್ವಾನ್ವಯ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಸಾಧ್ಯವಾಗಲಿದೆ.

ಮಸೂದೆಯು ಕಾಯ್ದೆಯಾದರೆ, ಕಂಪನಿಗಳಿಂದ ಈ ಹಿಂದೆ ಸಂಗ್ರಹಿಸಿದ್ದ ಹಣವನ್ನು ಹಿಂದಿರುಗಿಸಲಾಗುವುದು ಎಂದೂ ಕೇಂದ್ರ ಸರ್ಕಾರವು ಹೇಳಿದೆ. ‘ತೆರಿಗೆ ಕಾನೂನು (ತಿದ್ದುಪಡಿ) ಮಸೂದೆ – 2021’ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದರು. ದೇಶದ ಆಸ್ತಿಗಳ ಪರೋಕ್ಷ ವರ್ಗಾವಣೆಗೆ 2012ರ ಕಾನೂನನ್ನು ಬಳಸಿಕೊಂಡು ತೆರಿಗೆ ವಿಧಿಸಿದ್ದನ್ನು ಹಿಂದಕ್ಕೆ ಪಡೆಯಲು ಈ ಮಸೂದೆ ಅನುವು ಮಾಡಿಕೊಡಲಿದೆ.

ಬ್ರಿಟಿಷ್ ಕಂಪನಿಗಳಾದ ಕೇನ್ ಎನರ್ಜಿ ಮತ್ತು ವೊಡಾಫೋನ್‌ ಸಮೂಹದ ಜೊತೆಗೆ ಬಹುಕಾಲದಿಂದ ಇರುವ ತೆರಿಗೆ ಸಂಬಂಧಿ ವ್ಯಾಜ್ಯಗಳ ಮೇಲೆ ಈ ಮಸೂದೆಯು ನೇರ ಪರಿಣಾಮ ಉಂಟುಮಾಡಲಿದೆ. ಪೂರ್ವಾನ್ವಯ ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಕೇನ್ ಎನರ್ಜಿ ಹಾಗೂ ವೊಡಾಫೋನ್ ಜೊತೆಗಿನ ಎರಡು ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಸೋಲು ಕಂಡಿದೆ.

ವೊಡಾಫೋನ್ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಪಾವತಿ ಮಾಡಬೇಕಿರುವುದು ಏನೂ ಇಲ್ಲ. ಆದರೆ, ಕೇನ್ ಎನರ್ಜಿ ಕಂಪನಿಗೆ ಕೇಂದ್ರವು ₹ 8,900 ಕೋಟಿ (1.2 ಬಿಲಿಯನ್ ಡಾಲರ್) ಮೊತ್ತವನ್ನು ಪಾವತಿಸಬೇಕಾಗುತ್ತದೆ.

ವಿದೇಶಿ ಕಂಪನಿಗಳು ಭಾರತದಲ್ಲಿ ಹೊಂದಿರುವ ಆಸ್ತಿಯ ಪರೋಕ್ಷ ವರ್ಗಾವಣೆ, ಅದಕ್ಕೆ ಸಂಬಂಧಿಸಿದ ತೆರಿಗೆ ವಿಚಾರವು ಬಹುಕಾಲದಿಂದ ವ್ಯಾಜ್ಯದಲ್ಲಿ ಇದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಇಂತಹ ಆಸ್ತಿಯ ವರ್ಗಾವಣೆಗೆ ತೆರಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ 2012ರಲ್ಲಿ ತೀರ್ಪು ನೀಡಿತ್ತು. ಆದರೆ, 2012ರ ಹಣಕಾಸು ಕಾಯ್ದೆಯ ಮೂಲಕ ಆದಾಯ ತೆರಿಗೆ ಕಾಯ್ದೆ – 1961ರ ಕೆಲವು ಅಂಶಗಳಿಗೆ ತಿದ್ದುಪಡಿ ತಂದ ಕೇಂದ್ರವು, ವಿದೇಶಿ ಕಂಪನಿಗಳ ಷೇರುಗಳು ಗಮನಾರ್ಹ ಮೌಲ್ಯ ಪಡೆದುಕೊಂಡಿದ್ದು ಭಾರತದಲ್ಲಿನ ಆಸ್ತಿಯ ಕಾರಣದಿಂದಾಗಿದ್ದರೆ, ಅಂತಹ ಷೇರುಗಳ ಮಾರಾಟದಿಂದ ಬರುವ ಲಾಭವು ತೆರಿಗೆ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿತು. ಈ ತಿದ್ದುಪಡಿಯು ಪೂರ್ವಾನ್ವಯ ಆಗುತ್ತದೆ ಎಂದೂ ಹೇಳಿತು.

‘2012ರ ಹಣಕಾಸು ಕಾಯ್ದೆಯ ಮೂಲಕ ತರಲಾದ ತಿದ್ದುಪಡಿಗಳ ವಿಚಾರವಾಗಿ ಟೀಕೆಗಳು ಬಂದಿವೆ. ತಿದ್ದುಪಡಿಗಳು ಪೂರ್ವಾನ್ವಯ ಆಗುವಂತೆ ಮಾಡಿದ್ದು ಟೀಕೆಗಳಿಗೆ ಪ್ರಮುಖ ಕಾರಣ. ಇಂತಹ ತಿದ್ದುಪಡಿಗಳು ಹೂಡಿಕೆದಾರರ ನೆಚ್ಚಿನ ತಾಣ ಭಾರತ ಎಂಬ ಹೆಸರಿಗೆ ಕುಂದು ತರುತ್ತವೆ ಎಂಬ ವಾದ ಇದೆ’ ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಈ ಸಂದರ್ಭದಲ್ಲಿ ದೇಶವು ತ್ವರಿತಗತಿಯಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಬೇಕಿದೆ. ಅರ್ಥ ವ್ಯವಸ್ಥೆಯ ವೇಗದ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ವಿದೇಶಿ ಹೂಡಿಕೆಯ ಪಾತ್ರ ಮಹತ್ವದ್ದು ಎಂದೂ ಮಸೂದೆಯಲ್ಲಿ ವಿವರಣೆ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.