ಮುಂಬೈ (ರಾಯಿಟರ್ಸ್): ಹಬ್ಬದ ಋತುವಿನ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಆಗದೇ ಇರುವುದರಿಂದ ದೇಶಿ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯು 8 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಗೋಧಿ ಬೆಲೆಯು ಶೇ 1.6ರಷ್ಟು ಹೆಚ್ಚಾಗಿ ಟನ್‌ಗೆ ₹27390ಕ್ಕೆ ತಲುಪಿದೆ. ಫೆಬ್ರುವರಿ 10ರ ನಂತರದ ಗರಿಷ್ಠ ದರ ಇದಾಗಿದೆ. ಕಳೆದ ಆರು ತಿಂಗಳಿನಲ್ಲಿ ದರವು ಶೇ 22ರಷ್ಟು ಹೆಚ್ಚಾಗಿದೆ. ಹಬ್ಬದ ಬೇಡಿಕೆಯು ಗೋಧಿ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಬೆಲೆ ಕಡಿಮೆ ಆಗಬೇಕಾದರೆ ಸರ್ಕಾರವು ಸುಂಕ ಇಲ್ಲದೇ ಆಮದು ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡರೇಷನ್‌ನ ಅಧ್ಯಕ್ಷ ಪ್ರಮೋದ್ ಕುಮಾರ್ ಎಸ್. ಹೇಳಿದ್ದಾರೆ. ಗೋಧಿ ಆಮದು ಸುಂಕವು ಸದ್ಯ ಶೇ 40ರಷ್ಟು ಇದೆ. ಸದ್ಯದ ಮಟ್ಟಿಗೆ ಸರ್ಕಾರವು ಆಮದು ಸುಂಕ ಕೈಬಿಡುವ ಸಾಧ್ಯತೆ ಇಲ್ಲ ಎಂದು ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಕಳೆದ ತಿಂಗಳು ಹೇಳಿದ್ದರು.