ಶನಿವಾರ, ನವೆಂಬರ್ 23, 2019
18 °C

ಈರುಳ್ಳಿ ರಫ್ತು ನಿರ್ಬಂಧಕ್ಕೆ ಕ್ರಮ

Published:
Updated:
Prajavani

ನವದೆಹಲಿ: ಈರುಳ್ಳಿ ರಫ್ತಿಗೆ ಕಡಿವಾಣ ಹಾಕಿ, ಹೆಚ್ಚುತ್ತಿರುವ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರವು ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಪ್ರತಿ ಟನ್‌ಗೆ ₹ 59,500ರಂತೆ ಹೆಚ್ಚಿಸಿದೆ.

ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜಿಗೆ ₹ 40ರಿಂದ ₹ 50ರವರೆಗೆ ಏರಿಕೆ ಕಂಡಿದೆ. ಕೆಲದಿನಗಳ ಹಿಂದೆ ಈ ದರ ಪ್ರತಿ ಕೆಜಿಗೆ ₹ 20ರಿಂದ ₹ 30ರ ಆಸುಪಾಸಿನಲ್ಲಿತ್ತು. ಉತ್ತಮ ದರ್ಜೆಯ ಈರುಳ್ಳಿಯ ಮಾರಾಟ ದರವನ್ನು ದೆಹಲಿಯಲ್ಲಿ ಪ್ರತಿ ಕೆಜಿಗೆ ₹ 23.90ರಂತೆ ನಿಗದಿಪಡಿಸಲಾಗಿದೆ.

ಕನಿಷ್ಠ ರಫ್ತು ಬೆಲೆ ಎಂದರೆ (ಎಂಇಪಿ), ಈ ಬೆಲೆಗಿಂತ ಕಡಿಮೆ ದರಕ್ಕೆ ಈರುಳ್ಳಿ ರಫ್ತು ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಎಲ್ಲ ಬಗೆಯ ಈರುಳ್ಳಿಯನ್ನು ಈ ‘ಎಂಇಪಿ’ ದರದಂತೆ ಮಾತ್ರ ರಫ್ತು ಮಾಡಲು ಮುಂದಿನ ಆದೇಶದವರೆಗೆ ಅವಕಾಶ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯವು (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದಾಗಿ ಈರುಳ್ಳಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು. ಈ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು ಈರುಳ್ಳಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿತ್ತು.

ಪ್ರತಿಕ್ರಿಯಿಸಿ (+)