ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ಯೋಜನೆ ಐಚ್ಛಿಕ: ಕೇಂದ್ರ ಸಚಿವ ಸಂಪುಟದ ನಿರ್ಧಾರ

Last Updated 19 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ರೈತರು ತಮ್ಮ ಬೆಳೆ ಸಾಲದ ಜತೆ ಪಡೆಯುವ ಬೆಳೆ ವಿಮೆ ಯೋಜನೆಯನ್ನು ಕೇಂದ್ರ ಸರ್ಕಾರ ಐಚ್ಛಿಕಗೊಳಿಸಿದೆ.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ (ಪಿಎಂಎಫ್‌ಬಿವೈ) ಹೊಸ ರೂಪ ನೀಡುವ ಮತ್ತು ಪುನರ್‌ರಚಿಸಿದ ಹವಾಮಾನ ಆಧರಿಸಿದ ಬೆಳೆ ವಿಮೆ ಯೋಜನೆಗೆ (ಆರ್‌ಡಬ್ಲ್ಯುಬಿಸಿಐಎಸ್‌) ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಸದ್ಯದ ಬೆಳೆ ವಿಮೆ ಯೋಜನೆ ಜಾರಿಯಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಈ ನಿರ್ಧಾರಕ್ಕೆ ಬರಲಾಗಿದೆ. ಈ ಯೋಜನೆ ಬಗ್ಗೆ ರೈತರು ಮತ್ತು ಯೋಜನೆಗಳನ್ನು ಜಾರಿಗೆ ತರುವ ರಾಜ್ಯ ಸರ್ಕಾರಗಳು ವ್ಯಕ್ತಪಡಿಸಿದ್ದ ಆತಂಕ ಪರಿಗಣಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

2016ರ ಫೆಬ್ರುವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪಿಎಂಎಫ್‌ಬಿವೈ’ಗೆ ಚಾಲನೆ ನೀಡಿದ್ದರು. ಬೆಳೆ ಸಾಲ ಪಡೆದ ರೈತರು ಈ ಯೋಜನೆಯಡಿ ವಿಮೆ ಸೌಲಭ್ಯ ಪಡೆಯುವುದು ಕಡ್ಡಾಯವಾಗಿತ್ತು. ಇದು ಬಿತ್ತನೆ ಮುಂಚಿನ ಅವಧಿಯಿಂದ ಹಿಡಿದು ಫಸಲು ಕಟಾವು ಮಾಡಿದ ನಂತರದ ಅವಧಿಗೆ ನೈಸರ್ಗಿಕ ಪ್ರಕೋಪಗಳ ವಿರುದ್ಧ ಅಗ್ಗದ ದರದಲ್ಲಿ ವಿಮೆ ಒದಗಿಸುತ್ತಿತ್ತು.

‘ಕೇಂದ್ರ ಸರ್ಕಾರವು ಈಗ ಜಾರಿಯಲ್ಲಿ ಇರುವ ‘ಪಿಎಂಎಫ್‌ಬಿವೈ’ ಮತ್ತು ‘ಆರ್‌ಡಬ್ಲ್ಯುಬಿಸಿಐಎಸ್‌’ ಯೋಜನೆಗಳಲ್ಲಿನ ಕೆಲ ನಿಯಮ ಮತ್ತು ಪ್ರಸ್ತಾವಗಳಲ್ಲಿ ಬದಲಾವಣೆ ಮಾಡಿದೆ. ಎಲ್ಲ ರೈತರು ಈ ಯೋಜನೆಗಳ ಪ್ರಯೋಜನ ಪಡೆಯುವುದನ್ನು ಈಗ ಐಚ್ಛಿಕಗೊಳಿಸಲಾಗಿದೆ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ.

‘ಸದ್ಯಕ್ಕೆ ದೇಶದಲ್ಲಿನ ಶೇ 58ರಷ್ಟು ರೈತರು ಬೆಳೆಸಾಲ ಪಡೆದಿದ್ದಾರೆ. ಶೇ 42ರಷ್ಟು ರೈತರು ಸಾಲ ಪಡೆದಿಲ್ಲ. ಬೆಳೆ ಸಾಲ ಯೋಜನೆ ಆಯ್ಕೆ ಮಾಡಿಕೊಳ್ಳುವ ರೈತರ ಸಂಖ್ಯೆಯು ತಕ್ಷಣಕ್ಕೆ ಕಡಿಮೆಯಾಗಲಿದೆ. ಕ್ರಮೇಣ ಸೇರ್ಪಡೆಯಾಗುವವರ ಸಂಖ್ಯೆ ಏರಿಕೆಯಾಗಲಿದೆ. ಬೆಳೆ ವಿಮೆ ಪಡೆಯುವುದರ ಪ್ರಯೋಜನಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಸರ್ಕಾರ ಪ್ರಚಾರ ಅಭಿಯಾನ ಆರಂಭಿಸಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT