ಶನಿವಾರ, ಡಿಸೆಂಬರ್ 5, 2020
21 °C

ಪೆಟ್ರೋಲ್‌, ಡೀಸೆಲ್‌ ಮೇಲೆ ₹ 5 ಸುಂಕ ಏರಿಕೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹5ರವರೆಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಕೋವಿಡ್ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಆದರೆ ತೆರಿಗೆ ಏರಿಕೆಯು ತಕ್ಷಣದಿಂದಲೇ ಗ್ರಾಹಕರಿಗೆ ವರ್ಗವಾಗುವುದಿಲ್ಲ ಎಂದು ಮೂಲಗಳು ಹೇಳಿವೆ.

ಈಗ ₹5ರಷ್ಟು ಏರಿಕೆಯಾದರೆ ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ₹37.98 ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲಿನ ಅಬಕಾರಿ ಸುಂಕ ₹36.98ರಷ್ಟಾಗಲಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ₹18 ಮತ್ತು ₹12ರಷ್ಟು ಏರಿಕೆ ಮಾಡಲು ಇದೇ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ಸಂಸತ್ತಿನ ಒಪ್ಪಿಗೆ ಪಡೆದಿತ್ತು. ಅದರಲ್ಲಿ ಪೆಟ್ರೋಲ್‌ನ ಸುಂಕವನ್ನು ₹12 ಮತ್ತು ಡೀಸೆಲ್ ಮೇಲಿನ ಸುಂಕವನ್ನು ₹9 ಏರಿಕೆ ಮಾಡಿತ್ತು. ಹೀಗಾಗಿ ಪೆಟ್ರೋಲ್‌ ಮೇಲೆ ಇನ್ನೂ ₹5 ಮತ್ತು ಡೀಸೆಲ್ ಮೇಲೆ ಇನ್ನೂ ₹3ರಷ್ಟು ಸುಂಕವನ್ನು ಏರಿಕೆ ಮಾಡಲು ಅವಕಾಶವಿದೆ.

2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರಚನೆಯಾದಾಗ ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವು ಕ್ರಮವಾಗಿ ₹9.48 ಮತ್ತು ₹3.56 ಇತ್ತು. ಭಾರತದಲ್ಲಿ ಈಗ ಎರಡೂ ಇಂಧನಗಳ ಚಿಲ್ಲರೆ ಮಾರಾಟ ಬೆಲೆಯಲ್ಲಿ ಸುಂಕದ ಪ್ರಮಾಣ ಶೇ 70ರಷ್ಟು. ಇದು ಜಗತ್ತಿನಲ್ಲೇ ಅತ್ಯಧಿಕ.

‘ಅರ್ಥ ವ್ಯವಸ್ಥೆಯ ಪುನಶ್ಚೇತನದ ಸ್ಥಿತಿಯು ಈಗಲೂ ಬಹಳ ನಾಜೂಕಾಗಿಯೇ ಇದೆ. ಅಬಕಾರಿ ಸುಂಕ ಹೆಚ್ಚಳ ಮಾಡದಿರಲು ಕೇಂದ್ರವು ಪ್ರಯತ್ನಿಸಬಹುದು. ಆದರೆ, ಕೋವಿಡ್‌ನಿಂದಾದ ನಷ್ಟ ಪರಿಹಾರಕ್ಕೆ ಇನ್ನೊಂದು ಪ್ಯಾಕೇಜ್‌ ನೀಡಲೇಬೇಕು ಎಂಬ ಸ್ಥಿತಿ ನಿರ್ಮಾಣವಾದರೆ ಸುಂಕ ಹೆಚ್ಚಳ ಅನಿವಾರ್ಯ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು