ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 ಲಕ್ಷ ಟನ್‌ ಈರುಳ್ಳಿ ಕಾಪು ದಾಸ್ತಾನು: ಬೆಲೆ ಏರಿಕೆ ಪುನರಾವರ್ತನೆ ತಡೆಗೆ ಕ್ರಮ

Last Updated 30 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಸದ್ಯಕ್ಕೆ ಉದ್ಭವಿಸಿರುವ ಈರುಳ್ಳಿ ಬೆಲೆ ಏರಿಕೆ ಬಿಕ್ಕಟ್ಟು ಮುಂದಿನ ವರ್ಷವೂ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಕಾಪು ದಾಸ್ತಾನು ಮಿತಿಯನ್ನು 1 ಲಕ್ಷ ಟನ್‌ಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರಸಕ್ತ ವರ್ಷ 56 ಸಾವಿರ ಟನ್‌ಗಳಷ್ಟು ಕಾಪು ದಾಸ್ತಾನು ಮಾಡಲಾಗಿತ್ತು. ಗರಿಷ್ಠ ಮಟ್ಟದಲ್ಲಿ ಇರುವ ದರಗಳನ್ನು ತಗ್ಗಿಸಲು ಇದರಿಂದ ಸಾಧ್ಯವಾಗಿಲ್ಲ. ದೇಶದಾದ್ಯಂತ ಇರುವ ಪ್ರಮುಖ ನಗರಗಳಲ್ಲಿ ಈಗಲೂ ಈರುಳ್ಳಿ ದರ ಪ್ರತಿ ಕೆಜಿಗೆ ₹ 100ಕ್ಕಿಂತ ಹೆಚ್ಚಿಗೆ ಇದೆ.

ಮುಂದಿನ ವರ್ಷವೂ ಬೆಲೆ ಏರಿಕೆ ಸಮಸ್ಯೆ ಉದ್ಭವಗೊಳ್ಳುವ ಸಾಧ್ಯತೆ ತಡೆಗಟ್ಟುವ ಮಾರ್ಗೋಪಾಯಗಳನ್ನು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿನ ಸಚಿವರ ತಂಡದ ಸಭೆಯಲ್ಲಿ ಇತ್ತೀಚಿಗೆ ವಿವರವಾಗಿ ಚರ್ಚಿಸಲಾಗಿದೆ. ಕಾಪು ದಾಸ್ತಾನು ಹೆಚ್ಚಿಸಿದರೆ ಬೆಲೆ ಏರಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಲಿದೆ ಎನ್ನುವ ತೀರ್ಮಾನಕ್ಕೆ ಬರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಹಕಾರಿ ಕ್ಷೇತ್ರದ, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟವು (ನಾಫೆಡ್‌) ಕೇಂದ್ರ ಸರ್ಕಾರದ ಪರವಾಗಿ ಕಾಪು ದಾಸ್ತಾನು ನಿರ್ವಹಿಸಲಿದೆ. ಹಿಂಗಾರಿನ ಈರುಳ್ಳಿ ಫಸಲನ್ನು ಹೆಚ್ಚು ದಿನಗಳ ಕಾಲ ಸಂಗ್ರಹಿಸಿ ಇಡಬಹುದು. ಇದರಿಂದ ಪೂರೈಕೆಯಲ್ಲಿ ಸಮಸ್ಯೆ ಕಂಡು ಬರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.

ಬೆಲೆ ಏರಿಕೆಗೆ ಕಡಿವಾಣ ಹಾಕಲು ಸರ್ಕಾರ ರಫ್ತು ನಿಷೇಧಿಸಿ, ದಾಸ್ತಾನು ಮಿತಿ ಹೇರಿ, ಸಬ್ಸಿಡಿ ದರದಲ್ಲಿ ಮಾರಾಟಕ್ಕೆ ಕ್ರಮ ಕೈಗೊಂಡಿತ್ತು. ಆನಂತರ ಆಮದು ಮಾಡಿಕೊಳ್ಳಲೂ ಆದೇಶಿಸಿತ್ತು. ಸದ್ಯಕ್ಕೆ ಸರ್ಕಾರದ ಕಾಪು ದಾಸ್ತಾನು ಕರಗಿದೆ. ಈಗ ಆಮದು ಮಾಡಿಕೊಂಡ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಸರ್ಕಾರದ ಪರವಾಗಿ ಲೋಹ ಮತ್ತು ಖನಿಜಗಳ ಟ್ರೇಡಿಂಗ್‌ ಕಾರ್ಪೊರೇಷನ್‌ (ಎಂಎಂಟಿಸಿ) 45 ಸಾವಿರ ಟನ್‌ಗಳಷ್ಟು ಈರುಳ್ಳಿ ಆಮದು ಮಾಡಿಕೊಳ್ಳಲು ಮುಂದಾಗಿದೆ. ಟರ್ಕಿ, ಆಫ್ಗಾನಿಸ್ತಾನ ಮತ್ತು ಈಜಿಪ್ಟ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT