ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಮೀರಲಿದೆ ಕೇಂದ್ರದ ತೆರಿಗೆ ವರಮಾನ

Last Updated 21 ನವೆಂಬರ್ 2021, 14:38 IST
ಅಕ್ಷರ ಗಾತ್ರ

ನವದೆಹಲಿ: ಅಕ್ಟೋಬರ್‌ವರೆಗೆ ದೇಶದಲ್ಲಿ ಸಂಗ್ರಹ ಆಗಿರುವ ನೇರ ತೆರಿಗೆಗಳ ಮೊತ್ತವು ₹ 6 ಲಕ್ಷ ಕೋಟಿಯನ್ನು ಮೀರಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಸಿಕ ಸರಾಸರಿ ಜಿಎಸ್‌ಟಿ ಸಂಗ್ರಹವು ₹ 1.15 ಲಕ್ಷ ಕೋಟಿ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಹೀಗಾಗಿ, 2021–22ರಲ್ಲಿ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ಪ್ರಮಾಣವು ಬಜೆಟ್ ಅಂದಾಜನ್ನು ಮೀರಲಿದೆ.

ಇವು ಕೇಂದ್ರ ರೆವಿನ್ಯು ಕಾರ್ಯದರ್ಶಿ ತರುಣ್ ಬಜಾಜ್ ಅವರು ಹೇಳಿರುವ ಮಾತುಗಳು. ‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ತಗ್ಗಿಸಿದ್ದರ ಹಾಗೂ ಅಡುಗೆ ಎಣ್ಣೆ ಮೇಲಿನ ಸೀಮಾ ಸುಂಕವನ್ನು ಕಡಿಮೆ ಮಾಡಿದ್ದರ ಪರಿಣಾಮವಾಗಿ ಕೇಂದ್ರದ ಬೊಕ್ಕಸಕ್ಕೆ ಈ ವರ್ಷದಲ್ಲಿ ಅಂದಾಜು ₹ 80 ಸಾವಿರ ಕೋಟಿ ನಷ್ಟ ಆಗಲಿದೆ’ ಎಂದು ಬಜಾಜ್ ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಹಾಲಿ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹದ ಮೂಲಕ ಒಟ್ಟು ₹ 22.2 ಲಕ್ಷ ಕೋಟಿ ವರಮಾನ ಬರುವ ಅಂದಾಜನ್ನು ಕೇಂದ್ರವು ಹೊಂದಿದೆ. ತೆರಿಗೆ ಸಂಗ್ರಹದಲ್ಲಿ ಶೇಕಡ 9.5ರಷ್ಟು ಹೆಚ್ಚಳ ಆಗುತ್ತದೆ ಎಂಬ ನಿರೀಕ್ಷೆಯನ್ನು ಕೂಡ ಕೇಂದ್ರ ಹೊಂದಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ತೆರಿಗೆ ಮೂಲಕ ₹ 20.2 ಲಕ್ಷ ಕೋಟಿ ಸಂಗ್ರಹ ಆಗಿತ್ತು.

ನೇರ ತೆರಿಗೆಗಳ ಮೂಲಕ ಈ ವರ್ಷದಲ್ಲಿ ಒಟ್ಟು ₹ 11 ಲಕ್ಷ ಕೋಟಿ ವರಮಾನ ಸಂಗ್ರಹ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಕಾರ್ಪೊರೇಟ್ ತೆರಿಗೆ ಮೂಲಕ ಬರಬಹುದಾದ ₹ 5.47 ಲಕ್ಷ ಕೋಟಿ ಹಾಗೂ ಆದಾಯ ತೆರಿಗೆ ಮೂಲಕ ಬರಬಹುದಾದ ₹ 5.61 ಲಕ್ಷ ಕೋಟಿ ಸೇರಿವೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹ ಆಗುವ ವರಮಾನವು ನವೆಂಬರ್‌ ತಿಂಗಳಿನಲ್ಲಿಯೂ ದೊಡ್ಡ ಪ್ರಮಾಣದಲ್ಲಿಯೇ ಇರಲಿದೆ. ಆದರೆ ಇದು ಡಿಸೆಂಬರ್‌ನಲ್ಲಿ ತುಸು ಕಡಿಮೆ ಆಗಬಹುದು. ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ಜಿಎಸ್‌ಟಿ ವರಮಾನ ಸಂಗ್ರಹ ಮತ್ತೆ ಹೆಚ್ಚಳ ಆಗಲಿದೆ ಎಂದು ಕೇಂದ್ರವು ಅಂದಾಜು ಮಾಡಿರುವುದಾಗಿ ಬಜಾಜ್ ಅವರು ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸೀಮಾ ಸುಂಕದ ಮೂಲಕ ₹ 1.36 ಲಕ್ಷ ಕೋಟಿ, ಎಕ್ಸೈಸ್ ಸುಂಕದ ಮೂಲಕ ₹ 3.35 ಲಕ್ಷ ಕೋಟಿ ಹಾಗೂ ಜಿಎಸ್‌ಟಿ ಮೂಲಕ (ಸೆಸ್ ಸೇರಿ) ₹ 6.30 ಲಕ್ಷ ಕೋಟಿ ವರಮಾನ ಸಂಗ್ರಹ ಆಗಲಿದೆ ಎಂದು ಕೇಂದ್ರವು ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT