ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ವಾಣಿಜ್ಯ ಬಳಕೆಯ ವಿಮಾನ ತಯಾರಿಕೆಯನ್ನು ಆರಂಭಿಸಲಾಗುವುದು. ಇದಕ್ಕಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಬುಧವಾರ ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಣ್ಣ ಪ್ರಮಾಣದಲ್ಲಿ, ಸಣ್ಣ ನಾಗರಿಕ ವಿಮಾನಗಳನ್ನು ತಯಾರಿಸುತ್ತಿದೆ. ನಾವು ವಿಮಾನಗಳನ್ನು ತಯಾರಿಸಲು ಮತ್ತು ಅವುಗಳನ್ನು ರಫ್ತು ಮಾಡುವ ದೊಡ್ಡ ತಯಾರಕರಾಗಲು ಬಯಸುತ್ತಿದ್ದೇವೆ ಎಂದು ಹೇಳಿದರು.
ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ ಮತ್ತು ಮರುಜೋಡಣೆ ಚಟುವಟಿಕೆಗಳಿಗೆ ದೇಶದಲ್ಲಿ ಭಾರಿ ಬೇಡಿಕೆಯಿದೆ. ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.