ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಎಸ್‌ಟಿ ಪರಿಹಾರ ಸೆಸ್‌: ಸಚಿವರ ಸಮಿತಿ ರಚನೆ

Published : 27 ಸೆಪ್ಟೆಂಬರ್ 2024, 14:35 IST
Last Updated : 27 ಸೆಪ್ಟೆಂಬರ್ 2024, 14:35 IST
ಫಾಲೋ ಮಾಡಿ
Comments

ನವದೆಹಲಿ: ಜಿಎಸ್‌ಟಿ ಪರಿಹಾರ ಸೆಸ್‌ಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್‌ ಚೌಧರಿ ಅವರ ಅಧ್ಯಕ್ಷತೆಯಲ್ಲಿ 10 ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ.

ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳು ಮತ್ತು ಐಷಾರಾಮಿ ಸರಕುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಡಿ ವಿಧಿಸುವ ಪರಿಹಾರ ಸೆಸ್‌ ಅವಧಿಯು 2026ರ ಮಾರ್ಚ್‌ಗೆ ಮುಕ್ತಾಯವಾಗಲಿದೆ. ಸಮಿತಿಯು ಈ ಬಗ್ಗೆ ಪರಿಶೀಲನೆ ನಡೆಸಿ ಈ ವರ್ಷದ ಡಿಸೆಂಬರ್‌ 31ರೊಳಗೆ ವರದಿ ಸಲ್ಲಿಸಲಿದೆ.

ಅಸ್ಸಾಂ, ಛತ್ತೀಸಗಢ, ಗುಜರಾತ್‌, ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್‌, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಸಚಿವರು ಈ ಸಮಿತಿ ಸದಸ್ಯರಾಗಿದ್ದಾರೆ.

‘ಪರಿಹಾರ ಸೆಸ್‌ ಅವಧಿ ಮುಗಿದ ಬಳಿಕ ಯಾವ ರೀತಿ ತೆರಿಗೆ ಹಂಚಿಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆಯೂ ಸಮಿತಿ ಶಿಫಾರಸು ಮಾಡಲಿದೆ’ ಎಂದು ಜಿಎಸ್‌ಟಿ ಮಂಡಳಿಯ ಕಾರ್ಯದರ್ಶಿ ತಿಳಿಸಿದ್ದಾರೆ.

ತೆರಿಗೆ ಎಷ್ಟು?

ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳು ಮತ್ತು ಐಷಾರಾಮಿ ಸರಕುಗಳ ಮೇಲೆ ಶೇ 28ರಷ್ಟು ಹಾಗೂ ಅದಕ್ಕೂ ಹೆಚ್ಚು ಜಿಎಸ್‌ಟಿ ವಿಧಿಸಲಾಗುತ್ತದೆ. ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೊಂಡ ವೇಳೆ ರಾಜ್ಯಗಳಿಗೆ ಆಗುವ ವರಮಾನದ ನಷ್ಟವನ್ನು ಐದು ವರ್ಷದವರೆಗೆ ತುಂಬಿಕೊಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. 

ಹಾಗಾಗಿ, 2022ರ ಜೂನ್‌ವರೆಗೆ ಜಿಎಸ್‌ಟಿ ಪರಿಹಾರ ವ್ಯವಸ್ಥೆ ಜಾರಿಯಲ್ಲಿತ್ತು. ಬಳಿಕ ಇದನ್ನು 2026ರ ವರೆಗೆ ವಿಸ್ತರಿಸಲಾಗಿದೆ. 

ಕೋವಿಡ್‌ನಿಂದಾಗಿ 2021 ಮತ್ತು 2022ರಲ್ಲಿ ವರಮಾನ ಸಂಗ್ರಹದಲ್ಲಿ ಕೊರತೆಯಾಗಿತ್ತು. ಇದನ್ನು ಸರಿದೂಗಿಸಲು ಕೇಂದ್ರವು ₹2.69 ಲಕ್ಷ ಕೋಟಿ ಸಾಲ ಪಡೆದಿದೆ. ಸಾಲದ ಅಸಲು ಮತ್ತು ಬಡ್ಡಿ ಪಾವತಿಸಲು ಈ ವಿಸ್ತರಣೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT