ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ ಸಮಾಧಾನ ‘ಸಬ್‌ಕಾ ವಿಶ್ವಾಸ್ ’

Last Updated 24 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ದೇಶದಾದ್ಯಂತ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದು ಎರಡು ವರ್ಷಗಳ ನಂತರವೂ ಅನೇಕ ಏಳು ಬೀಳುಗಳನ್ನು ಕಾಣುತ್ತಿದೆ. ಈ ಹೊಸ ತೆರಿಗೆ ನೀತಿಯು ಅನೇಕ ಕಾರಣಗಳಿಂದ ಇನ್ನೂ ಸಾಕಷ್ಟು ಪರಿಪಕ್ವವಾಗಬೇಕಾಗಿದೆ ಎನ್ನುವುದು ಸರ್ಕಾರ ಮತ್ತು ತೆರಿಗೆದಾರರಿಗೆ ವೇದ್ಯವಾದ ವಿಚಾರ. ಹೊಸ ತೆರಿಗೆಯ ಪರಿಸ್ಥಿತಿ ಹೀಗಿರುವಾಗ, ಈ ಹಿಂದೆ ಪರೋಕ್ಷ ತೆರಿಗೆಯ ಪ್ರಮುಖ ಭಾಗವಾಗಿದ್ದ ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ ಕಾನೂನಿನಡಿ ಹೂಡಲಾಗಿದ್ದ ಲಕ್ಷಾಂತರ ವ್ಯಾಜ್ಯಗಳು ಇತ್ಯರ್ಥಗೊಳ್ಳದೆ ಹಾಗೇ ಉಳಿದಿವೆ. ಇಂತಹ ಸನ್ನಿವೇಶದಲ್ಲಿ ಜಿಎಸ್‌ಟಿ ಕಾನೂನಿನಡಿ ಸೃಷ್ಟಿಯಾಗಲಿರುವ ಹೊಸ ವ್ಯಾಜ್ಯಗಳ ಇತ್ಯರ್ಥ ಹೇಗೆ ಸಾಧ್ಯ ಎನ್ನುವುದು ಕೇಂದ್ರ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲು.

ಇದಕ್ಕೆ ಅಣಿಯಾಗುವ ಉದ್ದೇಶದಿಂದ ಈಗಾಗಲೇ ವಿಲೇವಾರಿಯಾಗದೆ ಬಾಕಿ ಇರುವ ಖಟ್ಲೆಗಳನ್ನು ‘ಸಬ್‍ಕಾ ವಿಶ್ವಾಸ್’ ಎಂಬ ಕರಸಮಾಧಾನ ಯೋಜನೆಯಡಿ ಪರಿಹರಿಸಿಕೊಳ್ಳುವ ಅವಕಾಶಗಳನ್ನು ಸರ್ಕಾರ ಬಜೆಟ್‍ನಲ್ಲಿ ಪ್ರಕಟಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈಗಾಗಲೇ ಚಾಲನೆ ಪಡೆದಿರುವ ಈ ಯೋಜನೆ ಡಿಸೆಂಬರ್ ತಿಂಗಳಿಗೆ ಅಂತ್ಯವಾಗಲಿದೆ. 120 ದಿನಗಳ ಅವಧಿಗೆ ಈ ಯೋಜನೆ ತೆರಿಗೆದಾರರಿಗೆ ಮುಕ್ತವಾಗಿದೆ. ತೆರಿಗೆ ಮನ್ನಾ, ಬಡ್ಡಿ ಹಾಗೂ ದಂಡ ವಿನಾಯಿತಿಯೂ ಸೇರಿದಂತೆ ತೆರಿಗೆದಾರರ ಮೇಲೆ ಕಾನೂನು ಕ್ರಮ ಜರಗಿಸುವುದರಿಂದಲೂ ಮುಕ್ತಿ ನೀಡಲಾಗಿದೆ. ಈ ಯೋಜನೆಯ ಒಟ್ಟು ಸ್ವರೂಪ ಹಾಗೂ ಉದ್ದೇಶ ಏನೆಂಬುದನ್ನು ವಿವರಿಸುವ ಅಂಶಗಳು ಇಲ್ಲಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಬಜೆಟ್ ಭಾಷಣದಲ್ಲಿ ಜಿಎಸ್‌ಟಿ ಪೂರ್ವದ ಅವಧಿಯಲ್ಲಿ ವಿಲೇವಾರಿಯಾಗದೆ ಉಳಿದಿರುವ ಪ್ರಕರಣಗಳ ಒಟ್ಟು ತೆರಿಗೆ ಮೌಲ್ಯ ₹ 3.75 ಲಕ್ಷ ಕೋಟಿ ಇದೆ ಎಂದು ತಿಳಿಸಿದ್ದರು. ಇಷ್ಟೊಂದು ದೊಡ್ಡ ಹೊರೆಯನ್ನು ಇಳಿಸುವ ಮತ್ತು ದೈನಂದಿನ ವಾಣಿಜ್ಯ ವ್ಯವಹಾರ ಮುಂದುವರಿಸುವ ಸದುದ್ದೇಶದಿಂದ ‘ಸಬ್‍ಕಾ ವಿಶ್ವಾಸ್’ ಯೋಜನೆ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಇದರ ಪರಿಣಾಮವಾಗಿ ನನೆಗುದಿಗೆ ಬಿದ್ದಿರುವ ಸುಮಾರು 1.30 ಲಕ್ಷ ಖಟ್ಲೆಗಳನ್ನು ಇತ್ಯರ್ಥಗೊಳಿಸುವ ಅವಕಾಶ ಕಲ್ಪಿಸಿಕೊಡಲಾಗಿದೆ. ಒಟ್ಟು ತೆರಿಗೆ ಮೊತ್ತದಲ್ಲಿ ಮೂರನೆಯ ಒಂದರಷ್ಟು ಕೇಂದ್ರ ಅಬಕಾರಿ ತೆರಿಗೆಗೆ ಸಂಬಂಧಿಸಿದ್ದರೆ ಉಳಿದ ಮೂರನೆಯ ಎರಡಂಶ ಸೇವಾ ತೆರಿಗೆಗೆ ಸಂಬಂಧಿಸಿದ ವ್ಯಾಜ್ಯಗಳು ಇತ್ಯರ್ಥಗೊಳ್ಳದೆ ಬಾಕಿ ಇವೆ. ಇದರೊಡನೆ ಸಣ್ಣ ಪುಟ್ಟ ರೂಪದಲ್ಲಿ ಸಂಗ್ರಹಿಸಲಾಗುತ್ತಿದ್ದ ಶೈಕ್ಷಣಿಕ ಸೆಸ್, ಕೃಷಿ ಕಲ್ಯಾಣ್ ಸೆಸ್ ಮತ್ತು ಸ್ವಚ್ಛ ಭಾರತ್ ಸೆಸ್ ಇತ್ಯಾದಿಗಳಿಗೆ ಸಂಬಂಧಿತ 26 ಕಾನೂನುಗಳಡಿ ಬಂದ ಪ್ರಕರಣಗಳೂ ಪರಿಹಾರ ಕಂಡುಕೊಳ್ಳಲು ಅವಕಾಶ ನೀಡಲಾಗಿದೆ.

ಈ ಹಿಂದೆ ಆದಾಯ ತೆರಿಗೆ ಹಾಗೂ ಇತರ ತೆರಿಗೆ ಕ್ಷಮಾದಾನ ಯೋಜನೆಗಳು ಕೇವಲ ಬಡ್ಡಿ ಮತ್ತು ದಂಡ ಪಾವತಿಯಿಂದ ವಿನಾಯಿತಿ ನೀಡಿದ್ದರೆ, ‘ಸಬ್‍ಕಾ ವಿಶ್ವಾಸ್’ ಯೋಜನೆ ಕಾನೂನು ರೀತಿಯ ಕ್ರಮಗಳಿಂದ ಮಾತ್ರವಲ್ಲದೆ ತೆರಿಗೆ ವಿನಾಯಿತಿಯನ್ನೂ ನೀಡಿರುವುದು ತೆರಿಗೆ ಪಾವತಿ ಉಳಿಸಿಕೊಂಡವರನ್ನು ಆಕರ್ಷಿಸುವ ಪ್ರಮುಖ ಗುರಿ ಹೊಂದಿದೆ. ಅನೇಕ ವರ್ಷಗಳಿಂದ ಬಾಕಿ ಉಳಿಸಿಕೊಂಡ ತೆರಿಗೆಯನ್ನು ಈ ಮೂಲಕ ನಗದೀಕರಿಸುವುದಕ್ಕೆ ಮತ್ತು ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿರುವ ಮಾನವಸಂಪನ್ಮೂಲದ ಸಮರ್ಪಕ ಬಳಕೆ ಇದರಿಂದ ಸಾಧ್ಯ ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿದೆ.

ಏನೇನು ಮನ್ನಾ ಆಗಲಿದೆ: ಈ ಯೋಜನೆಯಡಿ, ಪ್ರಮುಖವಾಗಿ ಈ ತನಕ ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ ಕಾಯಿದೆಯಡಿ ಇನ್ನೂ ಇತ್ಯರ್ಥಗೊಳ್ಳದೆ ಬಾಕಿ ಉಳಿದಿರುವ ಪ್ರಕರಣಗಳಿಗೆ ಪರಿಹಾರ ಸಿಗಲಿದೆ.

ಪ್ರಕರಣದ ವಿವಿಧ ಹಂತಗಳನ್ನು ಪರಿಗಣಿಸಿ ತೆರಿಗೆ ಮನ್ನಾ ಮಾಡುವ ಈ ಯೋಜನೆಯಡಿ ₹ 50 ಲಕ್ಷಕ್ಕಿಂತಲೂ ಕಡಿಮೆ ತೆರಿಗೆ ಬಾಕಿ ಇರಿಸಿದವರಿಗೆ ಶೇಕಡಾ 60 ರಿಂದ 70 ರಷ್ಟು ಹಾಗೂ ₹ 50 ಲಕ್ಷಕ್ಕಿಂತಲೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶೇಕಡಾ 40 ರಿಂದ 50 ರಷ್ಟು ತೆರಿಗೆ ಮನ್ನಾ ಮಾಡುವ ನಿಯಮವನ್ನು ಸರ್ಕಾರ ಪ್ರಕಟಿಸಿದೆ. ತೆರಿಗೆ ಏನೂ ಬಾಕಿ ಇರಿಸದೆ, ಕೇವಲ ದಂಡ ಅಥವಾ ತಡವಾದ ಸಲ್ಲಿಕೆಗಳಿಗೆ ಸಂಬಂಧಿತ ಪಾವತಿ ಬಾಕಿ ಇದ್ದಲ್ಲಿ ಅದನ್ನೂ ಸಂಪೂರ್ಣ ಮನ್ನಾ ಮಾಡುವ ಪ್ರಸ್ತಾಪ ಯೋಜನೆಯಲ್ಲಿದೆ. ಆದರೆ, ಇದೆಲ್ಲದಕ್ಕೂ, ತೆರಿಗೆ ಬಾಕಿ ಉಳಿಸಿಕೊಂಡವರು ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಬೇಕು ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸಿ ತಪಾಸಣೆಗೊಳಪಡಬೇಕು.

ಇಷ್ಟೇ ಅಲ್ಲದೆ ಸ್ವಯಂಪ್ರೇರಿತವಾಗಿಯೂ, ಪಾವತಿಸದೆ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಈ ಯೋಜನೆಯಡಿ ಘೋಷಿಸುವ ಅವಕಾಶ ಕೊಡಲಾಗಿದೆ. ಆದರೆ, ಇಂತಹ ಪಾವತಿದಾರರಿಗೆ ತೆರಿಗೆಯಲ್ಲಿ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ, ಬದಲಾಗಿ ಬಡ್ಡಿ ಹಾಗೂ ಜುಲ್ಮಾನೆ ಹಾಗೂ ಕಾನೂನು ಪ್ರಕ್ರಿಯೆಯಿಂದ ರಿಯಾಯಿತಿ ನೀಡಲಾಗಿದೆ.

ಯಾರಿಗೆಲ್ಲ ಅನ್ವಯಿಸುವುದಿಲ್ಲ: ಕಾರಣಾಂತರದಿಂದ ತೆರಿಗೆ ಬಾಕಿ ಉಳಿಸಿಕೊಂಡು ಅನೇಕ ವರ್ಷ ಸರ್ಕಾರಿ ಕಚೇರಿ-ಕೋರ್ಟ್ ಅಲೆಯುವ ಬದಲು ಈ ಯೋಜನೆಯ ಚೌಕಟ್ಟಿನೊಳಗೆ ಕೊಟ್ಟ ಅವಕಾಶವನ್ನು ಸದುಪಯೋಗಪಡಿಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಹಾಗೆಂದ ಮಾತ್ರಕ್ಕೆ ಈ ಯೋಜನೆಯ ಲಾಭವನ್ನು ಎಲ್ಲರೂ ಪಡೆಯುವಂತಿಲ್ಲ. ಯಾವುದೇ ತೆರಿಗೆದಾರ ತಪ್ಪಿತಸ್ಥನೆಂದು ದೃಢಪಟ್ಟಿದ್ದರೆ, ತಪ್ಪಾಗಿ ತೆರಿಗೆ ಇಲಾಖೆ ತೆರಿಗೆಯನ್ನು ಮರುಪಾವತಿಸಿದ್ದರೆ ಅಥವಾ ಈ ಹಿಂದೆಯೇ ಸೆಟಲ್‌ಮೆಂಟ್‌ ಕಮಿಷನ್‍ಗೆ ಅರ್ಜಿ ಸಲ್ಲಿಸಲಾಗಿದ್ದರೆ, ಈ ಯೋಜನೆಯ ಪ್ರಯೋಜನ ಸಿಗಲಾರದು. ಅದೇ ರೀತಿ ತಂಬಾಕು, ಪೆಟ್ರೋಲಿಯಂ ಉತ್ಪನ್ನ ಹಾಗೂ ಕಲ್ಲಿದ್ದಲು ಉತ್ಪನ್ನಗಳಿಗೆ ಸಂಬಂಧಿತ ವಹಿವಾಟಿನ ವ್ಯಾಜ್ಯಗಳಿಗೂ ಇದು ಅನ್ವಯಿಸುವುದಿಲ್ಲ.

ಗಮನಿಸಬೇಕಾದ ಅಂಶಗಳೇನು

1. ಯೋಜನೆಯಡಿ ನಿರ್ಧಾರವಾದ ತೆರಿಗೆಯನ್ನು ನಗದು ಮೂಲಕವಷ್ಟೇ ತೀರಿಸುವ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗಾಗಿ ತೆರಿಗೆ ಜಮಾ (ಇನ್‍ಪುಟ್ ಟ್ಯಾಕ್ಸ್ ಕ್ರೆಡಿಟ್) ಮೊತ್ತವನ್ನು ಇದಕ್ಕೆ ಬಳಸಿಕೊಳ್ಳುವ ಅವಕಾಶ ನೀಡಲಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ಹಳೆಯ ವ್ಯಾಜ್ಯಗಳ ವಿಲೇವಾರಿಯಿಂದ ನಗದು ಜಮಾ ರೂಪದಲ್ಲಿ ಬೊಕ್ಕಸ ಭರಿಸುವ ಉದ್ದೇಶ ಹೊಂದಿದೆ.

2. ಈ ಹಿಂದೆ ಯಾವುದಾರೂ ಮುಂಗಡ ಅಥವಾ ಠೇವಣಿಯ ರೂಪದಲ್ಲಿ
ರಿಸಲಾದ ಮೊತ್ತ,ನಿರ್ಣಯಗೊಂಡು ಪಾವತಿಸಬೇಕಾದ ಮೊತ್ತಕ್ಕಿಂತ ಅಧಿಕವಾಗಿದ್ದರೆ ಅಂತಹ ಹೆಚ್ಚುವರಿ ಮೊತ್ತವನ್ನು ಹಿಂತಿರುಗಿಸಲಾಗುವುದಿಲ್ಲ.

3. ವ್ಯಾಜ್ಯಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡಬೇಕಿದ್ದರೆ30ಜೂನ್ 2019ರ ಮೊದಲು ಷೋಕಾಸ್,ಮೇಲ್ಮನವಿ,ತನಿಖೆ,ವಿಚಾರಣೆ ಅಥವಾ ಲೆಕ್ಕ ಪರಿಶೋಧನೆಗೆ ಆಯ್ಕೆಯಾಗಿರಬೇಕು. ಈ ಪ್ರಕರಣಗಳು ಕೊನೆಯ ಹಂತದ ಪ್ರಕರಣದ ವಿಚಾರಣೆಗೆ ಬಾಕಿ ಇರಬೇಕು.

4.ಇತ್ಯರ್ಥಗೊಂಡ ತೀರ್ಮಾನವನ್ನು ವಿಲೇವಾರಿ ಪತ್ರ ನೀಡುವ ಮೂಲಕ ದೃಢೀಕರಿಸಲಾಗುತ್ತದೆ. ತೆರಿಗೆ ಪಾವತಿಗಾಗಿ30ದಿನಗಳ ಅವಕಾಶವನ್ನೂ ನೀಡಲಾಗುತ್ತದೆ.

5. ಯೋಜನೆಯ ಪ್ರಯೋಜನ ಪಡೆಯಲು ಬಯಸುವವರು ತೆರಿಗೆ ಇಲಾಖೆಗೆ ಘೋಷಣಾ ಪತ್ರ ನೀಡಬೇಕಾಗುತ್ತದೆ. ಒಂದು ವರ್ಷದಲ್ಲಿ ತೆರಿಗೆದಾರ ತಪ್ಪಿತಸ್ಥ ಅಥವಾ ವಾಸ್ತವಾಂಶಗಳನ್ನು ಮರೆಮಾಚಿ ಯೋಜನೆಯ ಲಾಭ ಪಡೆದಿದ್ದಾನೆಂದು ತಿಳಿದುಬಂದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸುವ ಅವಕಾಶವನ್ನು ತೆರಿಗೆ ಇಲಾಖೆ ಹೊಂದಿದೆ.

ಯೋಜನೆಯಡಿ, ಬಾಕಿ ಉಳಿಸಿಕೊಂಡ ತೆರಿಗೆ ಪಾವತಿಸಿದ ಮಾತ್ರಕ್ಕೆ ಎಲ್ಲ ತೆರಿಗೆ ಪ್ರಕರಣಗಳು ಮುಕ್ತಾಯಗೊಂಡವು ಎಂದರ್ಥವಲ್ಲ. ಹೊಸ ವಿಚಾರದ ಮೇಲೆ ಅಥವಾ ತೆರಿಗೆ ಮನ್ನಾ ಮಾಡಿದ ಅವಧಿ ಬಿಟ್ಟು ತದನಂತರದ ಅವಧಿಯ ತೆರಿಗೆ ಸಂಬಂಧಿತ ಪ್ರಕರಣಗಳನ್ನು ಹೊಸದಾಗಿ ತನಿಖೆ ಮಾಡುವ ಅವಕಾಶ ಕೆಲವು ಗಂಭೀರ ಸಂದರ್ಭಗಳಲ್ಲಿ ಐದು ವರ್ಷಗಳ ತನಕ ಮುಕ್ತವಾಗಿರುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯುವಾಗ ನೀಡಿದ ಮಾಹಿತಿಗಳು ಒಂದು ವರ್ಷದ ಒಳಗೆ ತಪ್ಪೆಂದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅವಕಾಶವನ್ನೂ ತೆರಿಗೆ ಇಲಾಖೆ ಕಾಯ್ದಿರಿಸಿದೆ. ಹೀಗಾಗಿ ಇದು ಜಿಎಸ್‌ಟಿ ಪೂರ್ವದಲ್ಲಿದ್ದ ತೆರಿಗೆ ತಪಾಸಣೆಗೆ ಶಾಶ್ವತ ವಿರಾಮವೆಂದು ಅರ್ಥೈಸಬೇಕಾಗಿಲ್ಲ.

ಯೋಜನೆ ಯಶಸ್ವಿಯಾದೀತೆ?

ಆರ್ಥಿಕ ಸಮೀಕ್ಷೆಯ ಪ್ರಕಾರ, ಸಕಾಲಿಕ ನ್ಯಾಯದಾನದಲ್ಲಿ ವಿಳಂಬವಾಗುತ್ತಿರುವುದು ವರದಿಯಾಗಿದೆ. ತೆರಿಗೆ ಇಲಾಖೆಯ ಪರ ಗೆಲುವು ಸಿಗುವ ಸನ್ನಿವೇಶಗಳು ಇಳಿಮುಖವಾಗುತ್ತಿವೆ. ಕಸ್ಟಮ್ಸ್‌, ಎಕ್ಸೈಸ್‌, ಸರ್ವಿಸ್‌ ಟ್ಯಾಕ್ಸ್‌ ಮೇಲ್ಮನವಿ ನ್ಯಾಯಮಂಡಳಿ (CESTAT–ಸೆಸ್‍ಟ್ಯಾಟ್) ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ - ಈ ಮೂರೂ ಹಂತಗಳಲ್ಲಿ ತೆರಿಗೆ ಇಲಾಖೆಗೆ ಗೆಲುವಾದ ಪ್ರಮಾಣ ಶೇಕಡಾ 11 ರಿಂದ 46 ರಷ್ಟು ಪ್ರಕರಣಗಳು ಮಾತ್ರ. ಇಂತಹ ಸನ್ನಿವೇಶದಲ್ಲಿ ಸರ್ಕಾರಕ್ಕೆ ಮನ್ನಾ ಘೋಷಣೆ ಮಾಡುವ ದಾರಿ ಬಿಟ್ಟು ಅನ್ಯ ಮಾರ್ಗವಿಲ್ಲ. ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ, ಗುಜರಾತ್ ರಾಜ್ಯಗಳು ಇತ್ತೀಚೆಗೆ ತಮ್ಮಲ್ಲಿ ಬಾಕಿ ಇದ್ದ ವ್ಯಾಟ್ ಪ್ರಕರಣಗಳನ್ನು ಕರಸಮಾಧಾನ ಯೋಜನೆಯ ಮೂಲಕ ಪರಿಹರಿಸಿಕೊಳ್ಳುತ್ತಿವೆ. ಈ ಹಿಂದೆಯೂ ಕೇಂದ್ರ ಸರ್ಕಾರ ಇಂಥದೇ ಅನೇಕ ಯೋಜನೆಗಳನ್ನು ತಂದಿತ್ತು. ಆದರೆ ನಿರೀಕ್ಷಿತ ಪ್ರಮಾಣದ ಪ್ರತಿಕ್ರಿಯೆ ತೆರಿಗೆದಾರರಿಂದ ಬಂದಿರಲಿಲ್ಲ. ಹೀಗಾಗಿ ಸಬ್‍ಕಾ ವಿಶ್ವಾಸ್ ತೆರಿಗೆ ಕ್ಷಮಾದಾನದ ಬಗ್ಗೆ ಯಾವ ಮಟ್ಟದ ಯಶಸ್ಸು ಸಿಕ್ಕೀತೆನ್ನುವುದನ್ನು ಕಾದು ನೋಡಬೇಕು.

ಇಂತಹ ಯೋಜನೆಗಳು ಕೆಲವೊಮ್ಮೆ ದೀರ್ಘ ಕಾಲದ ಕಾನೂನು ಹೋರಾಟಕ್ಕೆ ಕಾರಣವಾಗಿ ಕೊನೆಗೆ ಬೇಸತ್ತು ತೆರಿಗೆ ಮನ್ನಾದಲ್ಲಿ ಅಂತ್ಯ ಕಂಡುಕೊಳ್ಳುತ್ತಿರುವುದು ನಮ್ಮ ಒಟ್ಟು ವ್ಯವಸ್ಥೆಯ ಉದಾಸೀನ ಪ್ರವೃತ್ತಿ, ಕಾನೂನು ರೂಪಿಸುವಲ್ಲಿ ಕಂಡುಬರುವ ಲೋಪ ದೋಷ ಹಾಗೂ ತೆರಿಗೆದಾರರ ಬೇಜವಾಬ್ದಾರಿ, ಎಲ್ಲವನ್ನೂ ಎತ್ತಿ ತೋರಿಸುತ್ತದೆ. ಯಾವುದೇ ಹೊಸ ಯೋಜನೆ ಜಾರಿಗೆ ಬಂದಾಗ ಅದರ ದುರ್ಲಾಭ ಪಡೆದು ತಪ್ಪಿತಸ್ಥರು ಸುಲಭದಲ್ಲಿ ಪಲಾಯನ ಮಾಡದಂತೆ ಮತ್ತು ನ್ಯಾಯಪರವಾಗಿ ತೆರಿಗೆ ಕಟ್ಟಿದವರ ಪಾಲಿಗೆ ತೆರಿಗೆ ಮನ್ನಾ ಎಂಬ ’ಡಿಸ್ಕೌಂಟ್ ಆಫರ್’ ನಿರಾಶೆ ಮೂಡಿಸದಂತೆಯೂ ಅನುಷ್ಠಾನಗೊಳಿಸುವ ಜವಾಬ್ದಾರಿಯು ಕೇಂದ್ರ ಸರ್ಕಾರದ ಮೇಲೆ ಇದೆ.


ತೆರಿಗೆ ಬಾಕಿ ಮೊತ್ತ
ತೆರಿಗೆ ಮನ್ನಾ ಪ್ರಮಾಣ (%)
₹ 50 ಲಕ್ಷಕ್ಕಿಂತ ಕಡಿಮೆ 60 ರಿಂದ 70
₹ 50 ಲಕ್ಷಕ್ಕಿಂತ ಹೆಚ್ಚು 40 ರಿಂದ 50
ತೆರಿಗೆ ವಿನಾಯ್ತಿಯ ಶೇಕಡಾವಾರು ಪ್ರಮಾಣ
30 ಜೂನ್ 2019 ರೊಳಗೆ ತೆರಿಗೆ ಬಾಕಿ ಇರುವ ಹಂತ ₹ 50 ಲಕ್ಷದೊಳಗಿನ ತೆರಿಗೆ ₹ 50 ಲಕ್ಷಕ್ಕಿಂತ ಹೆಚ್ಚಿನ ತೆರಿಗೆ
ಷೋಕಾಸ್ ನೋಟಿಸ್ ಅಥವಾ ಮೇಲ್ಮನವಿ ಬಾಕಿ ಇರುವ ವಿವಾದಗಳು 70 50
ದಂಡ ಪಾವತಿಗಾಗಿ ನೀಡಲಾದ ಷೋಕಾಸ್ ನೋಟಿಸ್ 100 100
ತೆರಿಗೆ ಬಾಕಿ ಇದ್ದು ಮೇಲ್ಮನವಿ ಸಲ್ಲಿಸದಿದ್ದರೆ ಅಥವಾ ಮೇಲ್ಮನವಿಯಲ್ಲಿ ಪರಾಭವಗೊಂಡಿದ್ದರೆ 60 40
ಆಡಿಟ್, ವಿಚಾರಣೆ ಅಥವಾ ತನಿಖೆಯಲ್ಲಿ ತೆರಿಗೆ ಮೊತ್ತ ನಿರ್ಣಯಗೊಂಡರೆ 70 50
ತೆರಿಗೆ ಅಥವಾ ದಂಡ ನಿಗದಿಯಾಗಿದ್ದು ಪಾವತಿ ಬಾಕಿ ಇದ್ದರೆ 60 40
ಸ್ವಯಂಘೋಷಿತ ತೆರಿಗೆ ಇಲ್ಲ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT