ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ನಲ್ಲಿ ₹ 1.12 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

Last Updated 1 ಸೆಪ್ಟೆಂಬರ್ 2021, 13:51 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೂಲಕ ಆಗಸ್ಟ್‌ನಲ್ಲಿ ₹ 1.12 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಜುಲೈಗೆ ಹೋಲಿಸಿದರೆ ಜಿಎಸ್‌ಟಿ ವರಮಾನ ಸಂಗ್ರಹವು ಶೇಕಡ 3.76ರಷ್ಟು ಇಳಿಕೆಯಾಗಿದೆ.

2020ರ ಆಗಸ್ಟ್‌ನಲ್ಲಿ ಸಂಗ್ರಹವಾಗಿದ್ದ ₹ 86,449 ಕೋಟಿಗೆ ಹೋಲಿಸಿದರೆ ತೆರಿಗೆ ಸಂಗ್ರಹವು ಶೇ 30ರಷ್ಟು ಏರಿಕೆ ಕಂಡಿದೆ. 2019ರ ಆಗಸ್ಟ್‌ಗೆ ಹೋಲಿಸಿದರೆ ಶೇ 14ರಷ್ಟು ಹೆಚ್ಚಾಗಿದೆ.

2021ರ ಆಗಸ್ಟ್‌ನಲ್ಲಿ ಕೇಂದ್ರ ಜಿಎಸ್‌ಟಿ ಮೂಲಕ ₹ 20,522 ಕೋಟಿ, ರಾಜ್ಯ ಜಿಎಸ್‌ಟಿ ಮೂಲಕ ₹ 26,605 ಕೋಟಿ, ಸಮಗ್ರ ಜಿಎಸ್‌ಟಿ ಮೂಲಕ ₹ 56,247 ಕೋಟಿ ಹಾಗೂ ಸೆಸ್‌ ಮೂಲಕ ₹ 8,646 ಕೋಟಿ ಸಂಗ್ರಹ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಸತತ ಒಂಬತ್ತು ತಿಂಗಳುಗಳವರೆಗೆ ₹ 1 ಲಕ್ಷ ಕೋಟಿಯನ್ನು ದಾಟಿದ್ದ ಜಿಎಸ್‌ಟಿ ಸಂಗ್ರಹವು ಕೋವಿಡ್‌ನ ಎರಡನೇ ಅಲೆಯ ಪರಿಣಾಮವಾಗಿ ಜೂನ್‌ನಲ್ಲಿ ₹ 1 ಲಕ್ಷ ಕೋಟಿಗಿಂತ ಕೆಳಕ್ಕೆ ಇಳಿದಿತ್ತು.

ಕೋವಿಡ್‌ ನಿರ್ಬಂಧಗಳು ಸಡಿಲಗೊಂಡ ಬಳಿಕ ಜುಲೈ ಮತ್ತು ಆಗಸ್ಟ್‌ನಲ್ಲಿ ಜಿಎಸ್‌ಟಿ ಸಂಗ್ರಹವು ಮತ್ತೆ ₹ 1 ಲಕ್ಷ ಕೋಟಿಯನ್ನು ದಾಟಿದೆ. ಆರ್ಥಿಕತೆಯು ವೇಗವಾಗಿ ಚೇತರಿಕೆ ಕಾಣುತ್ತಿದೆ ಎನ್ನುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತಿದೆ. ತೆರಿಗೆ ವಂಚನೆ ತಡೆಗೆ ಕೈಗೊಂಡಿರುವ ಕ್ರಮಗಳು ಸಹ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕೊಡುಗೆ ನೀಡಿವೆ. ಮುಂಬರುವ ತಿಂಗಳುಗಳಲ್ಲಿಯೂ ಜಿಎಸ್‌ಟಿ ವರಮಾನ ಸಂಗ್ರಹವು ಉತ್ತಮವಾಗಿರುವ ಸಾಧ್ಯತೆ ಇದೆ ಎಂದು ಸಚಿವಾಲಯವು ಹೇಳಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಇಳಿಕೆ, ಮೂಲಸೌಕರ್ಯ ವಲಯದ ಪ್ರಮುಖ ಎಂಟು ವಲಯಗಳ ಬೆಳವಣಿಗೆ ನಿರೀಕ್ಷೆಗಿಂತಲೂ ಕಡಿಮೆ ಇರುವುದು ಹಾಗೂ ತಯಾರಿಕಾ ವಲಯದ ಸೂಚ್ಯಂಕವು ಅಲ್ಪ ಇಳಿಕೆ ಕಂಡಿರುವುದು ಪ್ರಸಕ್ತ ತ್ರೈಮಾಸಿಕದಲ್ಲಿ ಆರ್ಥಿಕ ಚೇತರಿಕೆಯ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎನ್ನುವುದನ್ನು ಸೂಚಿಸುತ್ತಿವೆ ಎಂದು ಐಸಿಆರ್‌ಎನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಅಭಿಪ್ರಾಯಪಟ್ಟಿದ್ದಾರೆ.

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 7.8ರಿಂದ ಶೇ 8.8ರ ಮಟ್ಟದಲ್ಲಿ ಇರುವ ನಿರೀಕ್ಷೆ ಇದೆ. ಸೇವಾ ವಲಯದ ಬೆಳವಣಿಗೆ ಕಡಿಮೆ ಮಟ್ಟದಲ್ಲಿ ಇರುವುದರಿಂದ ಜಿಡಿಪಿಯು ಕೋವಿಡ್‌ಗೂ ಮುಂಚಿನ ಮಟ್ಟವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಜುಲೈ 2021ರ ಸಂಗ್ರಹಕ್ಕೆ ಹೋಲಿಸಿದರೆ ಆಗಸ್ಟ್‌ನಲ್ಲಿ ವರಮಾನದಲ್ಲಿ ಸ್ಥಿರತೆ ಬಂದಿರುವಂತಿದೆ. ಆರ್ಥಿಕತೆಯು ಸ್ಥಿರ ಅಭಿವೃದ್ಧಿ ಕಾಣುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಸಿಂಘಾನಿಯಾ ಜಿಎಸ್‌ಟಿ ಕನ್ಸಲ್ಟೆನ್ಸಿ ಪಾಲುದಾರ ಆದಿತ್ಯ ಸಿಂಘಾನಿಯಾ ಹೇಳಿದ್ದಾರೆ.

ಜಿಎಸ್‌ಟಿ ಸಂಗ್ರಹ (ಲಕ್ಷ ಕೋಟಿಗಳಲ್ಲಿ)

ಏಪ್ರಿಲ್‌;₹ 1.41

ಮೇ;₹ 1.02

ಜೂನ್‌;₹ 92,849*

ಜುಲೈ;₹ 1.16

ಆಗಸ್ಟ್‌;₹ 1.12

* (ಕೋಟಿಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT