ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟು ಮೊತ್ತಕ್ಕೆ ಅವಧಿ ವಿಮೆ?

Last Updated 21 ಡಿಸೆಂಬರ್ 2020, 21:10 IST
ಅಕ್ಷರ ಗಾತ್ರ

ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸಮಸ್ಯೆಗಳಿಂದ ರಕ್ಷಣೆ ಪಡೆಯಲು ಪ್ರತಿಯೊಬ್ಬರಿಗೂ ಜೀವ ವಿಮೆ ಅಗತ್ಯ. ಆದರೆ ಜೀವ ವಿಮೆ ಎಂದಾಕ್ಷಣ ಎದುರಾಗುವುದು, ‘ಎಷ್ಟು ಅವಧಿಗೆ, ಎಷ್ಟು ಮೊತ್ತದ ವಿಮೆ’ ಎಂಬ ಪ್ರಶ್ನೆ.

ಬಹಳಷ್ಟು ಜನ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವಿಮಾ ಕಂಪನಿಯ ಏಜೆಂಟ್‌ ಹೇಳುವುದನ್ನು ಸುಮ್ಮನೇ ಅನುಸರಿಸುತ್ತಾರೆ. ಆ ವಿಮೆ ಸಾಮಾನ್ಯವಾಗಿ ₹1 ಕೋಟಿಯದ್ದಾಗಿರುತ್ತದೆ. 45 ವರ್ಷ ವಯಸ್ಸಿನ ಮಹಿಳೆಯೊಬ್ಬಳ ವಾರ್ಷಿಕ ಆದಾಯ ₹15 ಲಕ್ಷ ಇದ್ದರೆ, ಒಂದು ಜಾಲತಾಣವು ಆಕೆ ₹1 ಕೋಟಿ ಮೊತ್ತದ ಅವಧಿ ವಿಮೆ ಮಾಡಿಸಲು ಸಲಹೆ ನೀಡುತ್ತದೆ. ಇನ್ನೊಂದು ಜಾಲತಾಣ ₹3 ಕೊಟಿಯ ಅವಧಿ ವಿಮೆ ಮಾಡಿಸಿ ಎಂಬ ಸಲಹೆ ಕೊಡುತ್ತದೆ. ಇದು ಕೆಲವು ಸಾಮಾನ್ಯ ನಿಯಮಗಳಿಗೆ ಅನುಗುಣವಾಗಿ ಲೆಕ್ಕ ಹಾಕಿದ್ದಾಗಿರುತ್ತದೆ.

ಆದರೆ, ನಿಮ್ಮ ಸ್ಥಿತಿ ಮತ್ತು ಕುಟುಂಬದ ಅಗತ್ಯಗಳನ್ನು ಒಳಗೊಳ್ಳುವಂತಹ ಅವಧಿಗೆ ವಿಮೆ ಖರೀದಿಸುವುದು ಒಳಿತು. ಕಡಿಮೆ ಮೊತ್ತದಲ್ಲಿ ಹೆಚ್ಚಿನ ಸೌಲಭ್ಯ ಒದಗಿಸುವ ಸರಳ ಯೋಜನೆ ಇದು. ವಿಮೆ ಮಾಡಿಸಿದವರು ಹಠಾತ್ತನೆ ಸಾವಿಗೀಡಾದರೆ ಈ ಯೋಜನೆಯಿಂದ, ನಾಮನಿರ್ದೇಶಿತ ವ್ಯಕ್ತಿ ಅಥವಾ ಅವರ ಕುಟುಂಬದವರಿಗೆ ಗರಿಷ್ಠ ಪ್ರಮಾಣದ ಹಣಕಾಸಿನ ನೆರವು ಸಿಗುತ್ತದೆ.

ಪರ್ಯಾಯ ಆದಾಯ
ಕುಟುಂಬದ ದುಡಿಯುವ ವ್ಯಕ್ತಿಗೆ ತಿಂಗಳು ಅಥವಾ ವರ್ಷಕ್ಕೆ ಇಂತಿಷ್ಟು ಎಂದು ಆದಾಯ ಬರುತ್ತಿರುತ್ತದೆ. ಆತ ಆಕಸ್ಮಿಕವಾಗಿ ಮೃತಪಟ್ಟರೆ ಅಥವಾ ದುಡಿಯಲು ಆಗದ ಸ್ಥಿತಿ ತಲುಪಿದರೆ, ಅಂತಹ ಸಂದರ್ಭದಲ್ಲಿ ಅವಧಿ ವಿಮೆಯು ಪರ್ಯಾಯ ಆದಾಯದ ರೂಪದಲ್ಲಿ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವಂತಿರಬೇಕು. ದುಡಿಯುವ ವ್ಯಕ್ತಿ ಇರಲಿ, ಇಲ್ಲದಿರಲಿ; ಆತನನ್ನು ಅವಲಂಬಿಸಿದವರ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಹಣ ಬರುವಂತೆ ಇರಬೇಕು. ಹಾಗಾಗಿ, ಅವಧಿ ವಿಮೆಯ ಮೊತ್ತವನ್ನು ಲೆಕ್ಕ ಹಾಕುವಾಗ ದುಡಿಯುವ ವ್ಯಕ್ತಿಯ ಅನುಪಸ್ಥಿತಿಯಲ್ಲಿ ಆತನ ಕುಟುಂಬದ ತಿಂಗಳ ವೆಚ್ಚವನ್ನು ಅಂದಾಜು ಮಾಡಬೇಕು.

ಸದ್ಯ, ಕುಟುಂಬವೊಂದು ತಿಂಗಳಿಗೆ ₹1 ಲಕ್ಷ ಆದಾಯ ಪಡೆಯುತ್ತಿದ್ದು, ದುಡಿಯುವ ವ್ಯಕ್ತಿಯ ವೈಯಕ್ತಿಕ ಖರ್ಚು ₹30 ಸಾವಿರ ಆಗಿದ್ದರೆ, ಅವಧಿ ವಿಮೆ ಯೋಜನೆಯು ತಿಂಗಳಿಗೆ ₹70 ಸಾವಿರ ಆದಾಯ ತಂದುಕೊಡುವಂತೆ ಇರಬೇಕು. ಕುಟುಂಬದ ಬೇರೆ ಸದಸ್ಯರೂ ದುಡಿಯುತ್ತಿದ್ದರೆ, ಕುಟುಂಬದ ಒಟ್ಟಾರೆ ವೆಚ್ಚದಲ್ಲಿ ಅವರ ಪಾಲೂ ಇದ್ದರೆ, ಅವಧಿ ವಿಮೆಯಿಂದ ತಿಂಗಳಿಗೆ ಬರಬೇಕಿರುವ ಆದಾಯದ ಮೊತ್ತದಲ್ಲಿ ಆ ಸದಸ್ಯರ ತಿಂಗಳ ಆದಾಯದ ಮೊತ್ತವನ್ನು ಕಳೆಯಬಹುದು.

ಉದಾಹರಣೆಗೆ: ರಾವ್‌ ಅವರ ವಯಸ್ಸು 40 ವರ್ಷ. ಇನ್ನು 20 ವರ್ಷಗಳಲ್ಲಿ ಅವರು ನಿವೃತ್ತಿ ಆಗಲಿದ್ದಾರೆ. ಅವರ ಕುಟುಂಬದ ವೆಚ್ಚ ತಿಂಗಳಿಗೆ ₹1 ಲಕ್ಷ. ಅದರಲ್ಲಿ ₹30 ಸಾವಿರ ರಾವ್ ಅವರ ಸ್ವಂತ ಖರ್ಚು. ಹೀಗಿರುವಾಗ, ಅವರು ₹1.68 ಕೋಟಿಗೆ ಅವಧಿ ವಿಮೆ ಮಾಡಿಸುವುದು ಒಳಿತು (₹8.40 ಲಕ್ಷದ ವಾರ್ಷಿಕ ಖರ್ಚನ್ನು 20 ವರ್ಷಕ್ಕೆ ಲೆಕ್ಕಹಾಕಿ). ಅವರ ವಯಸ್ಸು 30 ಆಗಿದ್ದರೆ ಹೆಚ್ಚಿನ ಮೊತ್ತಕ್ಕೆ ವಿಮೆ ಮಾಡಿಸಬೇಕು. ಹಣದುಬ್ಬರ ಪ್ರಮಾಣದ ಬಗ್ಗೆ ಇಲ್ಲಿ ಉಲ್ಲೇಖಿಸದಿದ್ದರೆ ಯೋಜನೆಯ ಬಗ್ಗೆ ಸ್ಪಷ್ಟತೆ ಮೂಡುವುದಿಲ್ಲ.

ರಾವ್‌ ಅವರ ಕುಟುಂಬದ ವೆಚ್ಚಗಳು ವಾರ್ಷಿಕ ಶೇ 5ರ ಲೆಕ್ಕಾಚಾರದಲ್ಲಿ ಹೆಚ್ಚಳ ಆಗಲಿವೆ ಎಂದು ಅಂದಾಜಿಸಿಕೊಂಡರೆ, 20 ವರ್ಷಗಳ ನಂತರ ಅವರ ಕುಟುಂಬದ ವಾರ್ಷಿಕ ವೆಚ್ಚವು ₹21.22 ಲಕ್ಷ ಆಗಿರುತ್ತದೆ. ಹೀಗಾಗಿ ಅವಧಿ ವಿಮೆ ₹2.77 ಕೋಟಿಯದ್ದು ಬೇಕಾಗುತ್ತದೆ.

ಹಣಕಾಸಿನ ಗುರಿಗಳನ್ನು ತಲುಪುವುದು: ಭವಿಷ್ಯದ ಹಣಕಾಸಿನ ಗುರಿಗಳಿಗೆ ಏನು ಮಾಡಬೇಕು ಎಂಬುದನ್ನೂ ಅವಧಿ ವಿಮೆಯ ಮೊತ್ತ ಲೆಕ್ಕ ಹಾಕುವಾಗ ಪರಿಗಣಿಸಬಹುದು.

ರಾವ್‌ ಅವರು ತಮ್ಮ ಮಗಳ ಪದವಿ ಮತ್ತು ಉನ್ನತ ವ್ಯಾಸಂಗಕ್ಕಾಗಿ ₹30 ಲಕ್ಷದ ಇಡುಗಂಟು ಸೃಷ್ಟಿಸಲು ಹೂಡಿಕೆ ಮಾಡುತ್ತಿದ್ದಾರೆ ಎಂದು ಊಹಿಸೋಣ. ರಾವ್‌ ಅವರು ಈ ಮೊದಲು ಲೆಕ್ಕಹಾಕಿದ ಅವಧಿ ವಿಮೆ ಮೊತ್ತವು ಈ ಹೂಡಿಕೆಗೆ ಸಾಕಾಗುವುದಿಲ್ಲ. ಹೀಗಾಗಿ ಶಿಕ್ಷಣದ ಗುರಿ ತಲುಪಲು ಬೇಕಾದ ಮೊತ್ತವನ್ನೂ ಅವಧಿ ವಿಮೆ ಒಳಗೊಳ್ಳಬೇಕು.

ಸಾಲ ಬಾಕಿ:ಕುಟುಂಬ ನಿರ್ವಹಣೆ ಮತ್ತು ಹಣಕಾಸಿನ ಕೆಲವು ಗುರಿಗಳನ್ನು ತಲುಪಲು ಅಗತ್ಯವಾದ ಮೊತ್ತವನ್ನು ಅವಧಿ ವಿಮೆ ಲೆಕ್ಕಹಾಕುವಾಗ ಪರಿಗಣಿಸಲಾಗಿದೆ. ಆದರೆ, ದುಡಿಯುವ ವ್ಯಕ್ತಿ ಹಠಾತ್ ಇಲ್ಲವಾದರೆ ಆತ ಮಾಡಿದ ಸಾಲ ತೀರಿಸುವವರು ಯಾರು? ಇದಕ್ಕಾಗಿ, ಗೃಹ ಮತ್ತು ವಾಹನ ಸಾಲ, ವೈಯಕ್ತಿಕ ಮತ್ತು ಕ್ರೆಡಿಟ್‌ ಕಾರ್ಡ್ ಸಾಲಗಳನ್ನು ತೀರಿಸಲು ಅಗತ್ಯವಿರುವ ಮೊತ್ತವನ್ನೂ ಅವಧಿ ವಿಮೆ ಮಾಡಿಸುವಾಗ ಪರಿಗಣನೆಗೆ ತೆಗೆದುಕೊಳ್ಳಬೇಕು. ಅಂದರೆ, ಕುಟುಂಬವು ಪಡೆಯುವ ವಿಮಾ ಮೊತ್ತದಲ್ಲಿ ಒಂದು ಭಾಗವು ಸಾಲ ತೀರಿಸಲೂ ಬಳಕೆ ಆಗುವಂತೆ ಇರಬೇಕು.

ರಾವ್ ಅವರು ₹40 ಲಕ್ಷ ಗೃಹ ಸಾಲ ಹಾಗೂ ₹5 ಲಕ್ಷ ವಾಹನ ಸಾಲ ಉಳಿಸಿಕೊಂಡಿದ್ದಾರೆ ಎಂದು ಭಾವಿಸೋಣ. ಆಗ, ಅದರಿಂದ ಅವರ ಅವಧಿ ವಿಮೆಯು ಒಳಗೊಳ್ಳಬೇಕಿರುವ ಮೊತ್ತದಲ್ಲಿ ₹45 ಲಕ್ಷ ಹೆಚ್ಚಾಗುತ್ತದೆ. ರಾವ್ ಅವರ ಕಾಲಾನಂತರ ಅವರ ಕುಟುಂಬವು ಅವರ ಪಿ.ಎಫ್‌., ಗ್ರ್ಯಾಚುಟಿ ಹಾಗೂ ಇತರೆ ಕೆಲವು ಮೊತ್ತವನ್ನು ಉದ್ಯೋಗದಾತರಿಂದ ಪಡೆಯಲಿದ್ದಾರೆ. ಜತೆಗೆ ರಾವ್‌ ಅವರ ಹೂಡಿಕೆ ಮತ್ತು ಬ್ಯಾಂಕ್‌ನಲ್ಲಿರುವ ನಗದು ಕೂಡ ಕುಟುಂಬದವರಿಗೆ ಸಿಗುತ್ತದೆ. ಆ ಮೊತ್ತದಿಂದ ಸಾಲ ತೀರಿಸಬಹುದಾಗಿದೆ.

ಅವಧಿ ವಿಮೆ ಮೊತ್ತ ಎಷ್ಟು ಎಂಬುದನ್ನು ನಿರ್ಧರಿಸುವಾಗ ಕುಟುಂಬದ ತಿಂಗಳ ವೆಚ್ಚ, ಅವಧಿ ವಿಮೆಯಿಂದ ಸಿಗುವ ಮೊತ್ತವನ್ನು ಕುಟುಂಬವು ಎಷ್ಟು ವರ್ಷಗಳ ಕಾಲ ನೆಚ್ಚಿಕೊಂಡಿರುತ್ತದೆ, ಅಷ್ಟು ವರ್ಷಗಳಲ್ಲಿ ಹಣದುಬ್ಬರದಿಂದಾಗಿ ವೆಚ್ಚಗಳಲ್ಲಿ ಎಷ್ಟು ಹೆಚ್ಚಳ ಆಗುತ್ತದೆ, ದುಡಿಯುವ ವ್ಯಕ್ತಿ ಮಾಡಿರುವ ಸಾಲದ ಮೊತ್ತ ಎಷ್ಟು... ಇಂತಹ ವಿಚಾರಗಳನ್ನೆಲ್ಲ ಪರಿಗಣಿಸಲೇಬೇಕಾಗುತ್ತದೆ.

(ಲೇಖಕಿ ಪ್ರೈಮ್‌ಇನ್ವೆಸ್ಟರ್‌.ಇನ್‌ನ ಸಹ ಸಂಸ್ಥಾಪಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT