ಮಂಗಳವಾರ, ಸೆಪ್ಟೆಂಬರ್ 17, 2019
21 °C

‘ಐಎಲ್‌ಎಫ್‌ಎಸ್‌’ ಖಾತೆ ‘ಎನ್‌ಪಿಎ’ಘೋಷಣೆ: ನ್ಯಾಯಮಂಡಳಿ ಸಮ್ಮತಿ

Published:
Updated:
Prajavani

ನವದೆಹಲಿ: ಸಕಾಲದಲ್ಲಿ ಹಣ ಪಾವತಿ ಮಾಡದ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ (ಐಎಲ್ಆ್ಯಂಡ್‌ಎಫ್‌ಎಸ್‌) ಮತ್ತು ಅದರ ಸಮೂಹ ಸಂಸ್ಥೆಗಳ ಬ್ಯಾಂಕ್‌ ಖಾತೆಗಳನ್ನು ವಸೂಲಾಗದ ಸಾಲ (ಎನ್‌ಪಿಎ) ಎಂದು ಘೋಷಿಸಲು ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) ಅನುಮತಿ ನೀಡಿದೆ.

ಸಾಲದ ಸುಳಿಗೆ ಸಿಲುಕಿರುವ ‘ಐಎಲ್ಆ್ಯಂಡ್‌ಎಫ್‌ಎಸ್‌’ ಮತ್ತು ಅದರ ಸಮೂಹದ 300 ಸಂಸ್ಥೆಗಳ ಬ್ಯಾಂಕ್‌ ಖಾತೆಗಳನ್ನು ‘ಎನ್‌ಪಿಎ’ ಎಂದು ಘೋಷಿಸಲು ಇದ್ದ ದಿಗ್ಬಂಧನವನ್ನು ನ್ಯಾಯಮಂಡಳಿಯು ತೆರವುಗೊಳಿಸಿದೆ. ‘ಎನ್‌ಸಿಎಲ್‌ಎಟಿ’ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಎಸ್‌. ಜೆ.ಮುಖ್ಯೋಪಾಧ್ಯಾಯ ನೇತೃತ್ವದಲ್ಲಿನ ಪೀಠವು ಈ ನಿರ್ಧಾರ ಪ್ರಕಟಿಸಿದೆ.

ಖಾತೆಗಳನ್ನು ‘ಎನ್‌ಪಿಎ’ ಎಂದು ಘೋಷಿಸಲು ಅನುಮತಿ ನೀಡಿದ್ದರೂ, ಸಾಲ ವಸೂಲಾತಿ ಪ್ರಕ್ರಿಯೆಗೆ ಚಾಲನೆ ನೀಡಬಾರದು ಎಂದೂ ನ್ಯಾಯಮಂಡಳಿಯು ತಿಳಿಸಿದೆ. ಸದ್ಯಕ್ಕೆ ‘ಐಎಲ್ಆ್ಯಂಡ್‌ಎಫ್‌ಎಸ್‌’ ಮತ್ತು ಅದರ ಸಮೂಹ ಸಂಸ್ಥೆಗಳ ಒಟ್ಟಾರೆ ಸಾಲದ ಮೊತ್ತವು ₹ 90 ಸಾವಿರ ಕೋಟಿಗಳಷ್ಟಿದೆ.

‘ಐಎಲ್ಆ್ಯಂಡ್‌ಎಫ್‌ಎಸ್‌’ಮತ್ತು ಅದರ ಅಂಗಸಂಸ್ಥೆಗಳ  ಬ್ಯಾಂಕ್‌ ಖಾತೆಗಳನ್ನು ‘ಎನ್‌ಪಿಎ’ ಎಂದು ಪರಿಗಣಿಸಬಾರದು ಎಂದು ನ್ಯಾಯಮಂಡಳಿಯು ಫೆಬ್ರುವರಿಯಲ್ಲಿ ನಿರ್ಬಂಧ ವಿಧಿಸಿತ್ತು.

ಭಾರತೀಯ ರಿಸರ್ವ್‌ ಬ್ಯಾಂಕ್‌, ಈ ಸಂಬಂಧ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿತ್ತು. ಬ್ಯಾಂಕಿಂಗ್‌ ನಿಯಮಾವಳಿಗಳ ಪ್ರಕಾರ, ಸುಸ್ತಿದಾರ ಖಾತೆಗಳನ್ನು ‘ಎನ್‌ಪಿಎ’ ಎಂದು ಘೋಷಿಸಲು ಅನುಮತಿ ನೀಡಬೇಕು ಎಂದೂ ಮನವಿ ಮಾಡಿಕೊಂಡಿತ್ತು.

ಇನ್ನು ಮುಂದೆ, ‘ಐಎಲ್ಆ್ಯಂಡ್‌ಎಫ್‌ಎಸ್‌’ನ ಎಲ್ಲ ಅಂಗ ಸಂಸ್ಥೆಗಳನ್ನು ಅವುಗಳ ಸಾಲ ಪಾವತಿ ಕಟ್ಟುಪಾಡು ಆಧರಿಸಿ ವರ್ಗೀಕರಿಸಲು ನಿರ್ಧರಿಸಲಾಗಿದೆ.

Post Comments (+)