ಗೃಹ ಸಾಲ: ಗಮನಾರ್ಹ ಹೆಚ್ಚಳ

7
ವಸೂಲಾಗದ ಸಾಲದ ಪ್ರಮಾಣ ಏರಿಕೆ ಆತಂಕ

ಗೃಹ ಸಾಲ: ಗಮನಾರ್ಹ ಹೆಚ್ಚಳ

Published:
Updated:
Deccan Herald

ಬೆಂಗಳೂರು: ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಗೃಹ ನಿರ್ಮಾಣ ರಂಗಕ್ಕೆ ನೀಡುವ ಸಾಲದ ಪ್ರಮಾಣವು ಒಂದು ವರ್ಷಾವಧಿಯಲ್ಲಿ ಶೇ 15.6ರಷ್ಟು ಏರಿಕೆ ಕಂಡಿದೆ.

ಸಾಲ ನೀಡಿಕೆ ಹೆಚ್ಚಿದ್ದರೂ, ಸಣ್ಣ ಮೊತ್ತದ ಗೃಹ ಸಾಲಗಳ ಮರುಪಾವತಿ ಸಮರ್ಪಕವಾಗಿಲ್ಲದಿರುವುದು ಮಾತ್ರ ಕಳವಳಕಾರಿ ವಿದ್ಯಮಾನವಾಗಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಬಳಿ ಇರುವ ದತ್ತಾಂಶಗಳ ಪ್ರಕಾರ, ಬ್ಯಾಂಕ್‌ಗಳು ಒಂದು ವರ್ಷಾವಧಿಯಲ್ಲಿ ಗೃಹ ನಿರ್ಮಾಣ ವಲಯಕ್ಕೆ ವಿತರಿಸಿದ ಸಾಲದ ಪ್ರಮಾಣವು ₹ 1.41 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ನಗದುತನ ಕೊರತೆ ಎದುರಿಸುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ವಿತರಿಸಿದ ಗೃಹ ಸಾಲದ ಪ್ರಮಾಣವು ₹ 1.6 ಲಕ್ಷದಷ್ಟು ಹೆಚ್ಚಾಗಿದೆ. ಈ ವರ್ಷದ ಸೆಪ್ಟೆಂಬರ್‌ ವೇಳೆಗೆ ಬ್ಯಾಂಕಿಂಗ್‌ ವಲಯವು ಗೃಹ ನಿರ್ಮಾಣ ಕ್ಷೇತ್ರಕ್ಕೆ ನೀಡಿರುವ ಒಟ್ಟಾರೆ ಸಾಲದ ಪ್ರಮಾಣವು ₹ 10.5 ಲಕ್ಷ ಕೋಟಿಗೆ ತಲುಪಿದೆ. ಒಂದು ವರ್ಷದ ಹಿಂದೆ ಈ ಮೊತ್ತವು ₹ 9.09 ಲಕ್ಷ ಕೋಟಿಗಳಷ್ಟಿತ್ತು. ಇದರಲ್ಲಿ ಆದ್ಯತಾ ವಲಯದ ಗೃಹ ಸಾಲದ ಪ್ರಮಾಣವು ₹ 3.95 ಲಕ್ಷ ಕೋಟಿಗಳಷ್ಟಿದೆ. ‘ಎನ್‌ಬಿಎಫ್‌ಸಿ’ ವಲಯದ ಒಟ್ಟಾರೆ ಸಾಲದ ಪ್ರಮಾಣ ₹ 5.47 ಲಕ್ಷ ಕೋಟಿಗಳಷ್ಟಿದೆ.

ಸಾಲದ ಬೇಡಿಕೆ ಹೆಚ್ಚಳ: ಕೈಗೆಟುಕುವ ಬೆಲೆಯ ಗೃಹ ನಿರ್ಮಾಣ ವಲಯದಲ್ಲಿ ಹೆಚ್ಚಿದ ಬೇಡಿಕೆಯ ಕಾರಣಕ್ಕೆ ಗೃಹ ಸಾಲ ನೀಡಿಕೆ ಪ್ರಮಾಣವು ಏರುಗತಿಯಲ್ಲಿ ಇದೆ. ಈ ವಲಯದಲ್ಲಿನ ಸಾಲದ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಶೇ 32.5ರಷ್ಟು ಏರಿಕೆ ದಾಖಲಿಸುತ್ತಿದೆ ಎಂದು ರಿಯಲ್‌ ಎಸ್ಟೇಟ್‌ ವಲಯದ ಮೂಲಗಳು ತಿಳಿಸಿವೆ.

ವಿಲಾಸಿ ಮನೆಗಳನ್ನು ಖರೀದಿಸುವವರಿಗೆ ಗೃಹ ಸಾಲದ ಅಗತ್ಯ ಬೀಳುವುದಿಲ್ಲ ಎಂದು ನಗರದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಸಂಸ್ಥೆಯ ಪ್ರಮುಖರೊಬ್ಬರು ಹೇಳುತ್ತಾರೆ.

ಆದ್ಯತಾ ವಲಯದ ಸಣ್ಣ ಮೊತ್ತದ ಗೃಹ ಸಾಲಗಳು ಸಕಾಲದಲ್ಲಿ ಮರುಪಾವತಿಯಾಗದಿದ್ದರೆ ದೀರ್ಘಾವಧಿಯಲ್ಲಿ ದೊಡ್ಡ ಸಮಸ್ಯೆಯಾಗಲಿದೆ ಎಂದು ಆರ್‌ಬಿಐನ ಸಂಶೋಧನಾ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ₹ 2 ಲಕ್ಷವರೆಗಿನ ಗೃಹ ಸಾಲವು ಗರಿಷ್ಠ ಮಟ್ಟದ ‘ಎನ್‌ಪಿಎ’ ಆಗಿ ಪರಿಣಮಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ವ್ಯತಿರಿಕ್ತ ಪರಿಣಾಮ: ಎರಡು ವರ್ಷಗಳ ಹಿಂದೆ ಕೈಗೊಂಡ ನೋಟು ರದ್ದತಿ ನಿರ್ಧಾರವು ಗೃಹ ನಿರ್ಮಾಣ ರಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

 ಕಡಿಮೆ ಆದಾಯದವರು ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ವೆಚ್ಚದ ಮನೆಗಳು ಸೂಕ್ತವಾಗಿರುತ್ತವೆ. ಸಣ್ಣ ಪುಟ್ಟ ವ್ಯಾಪಾರಿಗಳು, ತರಕಾರಿ ಮಾರಾಟಗಾರರು, ಬೀದಿ ಬದಿ ವ್ಯಾಪಾರಿಗಳು ಒಳಗೊಂಡ ಕಡಿಮೆ ಆದಾಯದ ವರ್ಗದವರಿಗೆ ನಗದು ಆದಾಯವೇ ಮುಖ್ಯವಾಗಿರುತ್ತದೆ. ನೋಟು ರದ್ದತಿಯು ಈಗಲೂ ಅವರ ಆದಾಯದ ಮೇಲೆ ಈಗಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದರಿಂದ ಸಾಲ ವಸೂಲಾತಿ ಮೇಲೆ ವ್ಯತಿರಿಕ್ತ ಪರಿಣಾಮ ಕಂಡು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !