ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರಿಕ ಉತ್ಪಾದನೆ ಹೆಚ್ಚಳ: 2032ಕ್ಕೆ ರಾಜ್ಯದ್ದು 1 ಟ್ರಿಲಿಯನ್‌ ಆರ್ಥಿಕತೆ; ಸಚಿವ

Published 4 ಮಾರ್ಚ್ 2024, 16:34 IST
Last Updated 4 ಮಾರ್ಚ್ 2024, 16:34 IST
ಅಕ್ಷರ ಗಾತ್ರ

ಬೆಂಗಳೂರು: ‘2032ರ ವೇಳೆಗೆ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯನ್ನು (ಜಿಎಸ್‌ಡಿಪಿ) ಒಂದು ಟ್ರಿಲಿಯನ್ ಡಾಲರ್‌ಗೆ (₹83 ಲಕ್ಷ ಕೋಟಿ) ಏರಿಸಲು ರಾಜ್ಯ ಸರ್ಕಾರವು ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಅಭಿವೃದ್ಧಿಗೆ ಒತ್ತು ನೀಡುತ್ತಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು. 

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ಸ್ ಅಸೋಸಿಯೇಷನ್ ಮತ್ತು ಬೆಂಗಳೂರಿನ ಡಬ್ಲ್ಯುಟಿಸಿಯಿಂದ ಜಂಟಿಯಾಗಿ ಹಮ್ಮಿಕೊಂಡಿರುವ ಗ್ಲೋಬಲ್ ಬ್ಯುಸಿನೆಸ್ ಫೋರಂನ (ಜಿಬಿಎಫ್) 54ನೇ ಜಾಗತಿಕ ವ್ಯಾಪಾರ ಸಮಾವೇಶದಲ್ಲಿ ಅವರು ಮಾತನಾಡಿದರು.

ಇದಕ್ಕಾಗಿಯೇ ಉದ್ಯಮ ವಲಯದಲ್ಲಿ ಅಸಾಂಪ್ರದಾಯಿಕ ಕ್ಷೇತ್ರಗಳತ್ತ ಗಮನಹರಿಸಲಾಗುತ್ತಿದೆ. ಇದರಿಂದ ಹೂಡಿಕೆಯ ಹರಿವು ಹೆಚ್ಚಲಿದೆ. ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಭಾರತದಲ್ಲಿ ಎರಡನೇ ಬಾರಿಗೆ ಈ ಸಮಾವೇಶ ನಡೆಯುತ್ತಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಸಮಾವೇಶ ಇದಾಗಿದೆ. 30ಕ್ಕೂ ಹೆಚ್ಚು ದೇಶಗಳ ಉನ್ನತ ಮಟ್ಟದ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು. 

‘ರಾಜ್ಯದ ಆರ್ಥಿಕ ಬೆಳವಣಿಗೆ ದರವು ಸದ್ಯ ಶೇ 18ರಷ್ಟಿದೆ. ಜಿಡಿಪಿಯಲ್ಲಿ ಕರ್ನಾಟಕವು ಇಡೀ ದೇಶದಲ್ಲಿ ಮೂರನೆಯ ಸ್ಥಾನದಲ್ಲಿದೆ. ತಲಾ ಆದಾಯವು ಕಳೆದ ಐದು ವರ್ಷಗಳಲ್ಲಿ ಶೇ 62ರಷ್ಟು ಏರಿಕೆಯಾಗಿದೆ’ ಎಂದು ವಿವರಿಸಿದರು.

ಬೆಂಗಳೂರು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಕೈಗಾರಿಕಾ ಕ್ರಾಂತಿ 4.0 ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ಇದಕ್ಕಾಗಿ ಸಾವಿರಾರು ಎಕರೆ ಪ್ರದೇಶಗಳಲ್ಲಿ ಕೈಗಾರಿಕಾ ಪಾರ್ಕ್‌ಗಳನ್ನು ನಿರ್ಮಿಸಲಾಗುತ್ತಿದೆ. ಉದ್ಯಮಿಗಳು ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಕರ್ನಾಟಕವು ದೇಶದ ನಾಲ್ಕನೇ ಅತಿದೊಡ್ಡ ಕೌಶಲ ಆಧಾರಿತ ಮಾನವ ಸಂಪನ್ಮೂಲ ಹೊಂದಿರುವ ರಾಜ್ಯವಾಗಿದೆ’ ಎಂದರು.

ಐ.ಟಿ, ನವೋದ್ಯಮಗಳ ಸ್ವರ್ಗವಾಗಿದೆ. ಕರ್ನಾಟಕವು ದೇಶದ ಬಯೊಟೆಕ್ನಾಲಜಿ ಕ್ಷೇತ್ರಕ್ಕೆ ಶೇ 60ರಷ್ಟು ಹಾಗೂ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಶೇ 40ರಷ್ಟು ಕೊಡುಗೆ ನೀಡುತ್ತಿದೆ. ನವೋದ್ಯಮ ಸ್ಥಾಪನೆಯಲ್ಲಿ ಜಾಗತಿಕಮಟ್ಟದಲ್ಲಿ 20ನೇ ಸ್ಥಾನ ಪಡೆದಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ಡಬ್ಲ್ಯುಟಿಸಿ ಅಧ್ಯಕ್ಷ ಜಾನ್ ಡ್ರೀವ್, ಡಿಲೈಟ್ ಸಿಇಒ ರೋಮಲ್ ಶೆಟ್ಟಿ, ಬ್ರಿಗೇಡ್ ಗ್ರೂಪ್ ಕಾರ್ಯ ನಿರ್ವಾಹಕ ಅಧ್ಯಕ್ಷ ಎಂ.ಆರ್. ಜಯಶಂಕರ್, ಜಂಟಿ ವ್ಯವಸ್ಥಾಪಕ ನಿರ್ದೇಶಕ ನಿರೂಪ್ ಶಂಕರ್, ಬೆಂಗಳೂರು ಡಬ್ಲ್ಯುಟಿಸಿ ವ್ಯವಸ್ಥಾಪಕ ನಿರ್ದೇಶಕ ವಿನೀತ್ ವರ್ಮಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT