ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳೆ ಎಣ್ಣೆ ಸುಂಕ ಹೆಚ್ಚಳ ಸಂಭವ: ರೇಪ್‌ಸೀಡ್‌ ಬೆಳೆಗಾರರಿಗೆ ನೆರವು

Last Updated 6 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ: ತಾಳೆ ಎಣ್ಣೆ ಆಮದು ಮೇಲಿನ ಸುಂಕವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರ ಮತ್ತು ಉದ್ಯಮ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ರೇಪ್‌ಸೀಡ್‌ (ಸಾಸಿವೆಯ ಒಂದು ವಿಧ) ಬೆಳೆಯುವ ರೈತರಿಗೆ ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ತಾಳೆ ಎಣ್ಣೆ ಆಮದು ಮೇಲಿನ ತೆರಿಗೆ ಹೆಚ್ಚಿಸುವುದರಿಂದ ಸ್ಥಳೀಯ ಮಾರಾಟ ದರ ಏರಿಕೆ ಆಗಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಎದುರು ತಾಳೆ ಎಣ್ಣೆಯ ಪೈಪೋಟಿ ಸಾಮರ್ಥ್ಯ ಕಡಿಮೆ ಆಗಲಿದೆ.

ರೇಪ್‌ಸೀಡ್ ದರ ಕುಸಿಯದಂತೆ ನೋಡಿಕೊಳ್ಳುವ ಉದ್ದೇಶದಿಂದ ತಾಳೆ ಎಣ್ಣೆ ಮೇಲಿನ ಆಮದು ಸುಂಕ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರೇಪ್‌ಸೀಡ್ ಬೆಲೆಯು ಕನಿಷ್ಠ ಬೆಂಬಲ ಬೆಲೆಗಿಂತಲೂ (ಎಂಎಸ್‌ಪಿ) ಕೆಳಕ್ಕೆ ಇಳಿಕೆ ಆಗಿದೆ ಎಂದು ಸರ್ಕಾರ ನಿಗದಿ ಮಾಡಿರುವ ದರವನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ. ರೇಪ್‌ಸೀಡ್‌ ದರವು 100 ಕೆ.ಜಿಗೆ ₹ 5 ಸಾವಿರ ಇದೆ. ಇದು ಸರ್ಕಾರವು 100 ಕೆ.ಜಿಗೆ ನಿಗದಿ ಮಾಡಿರುವ ₹ 5,450ಕ್ಕಿಂತ ಕಡಿಮೆ.

ರೈತರು ಅಕ್ಟೋಬರ್‌ ಮತ್ತು ನವೆಂಬರ್ ಅವಧಿಯಲ್ಲಿ ರೇಪ್‌ಸೀಡ್‌ ಬಿತ್ತನೆ ಮಾಡುತ್ತಾರೆ. ಮಾರ್ಚ್‌ನಿಂದ ಕಟಾವು ಕಾರ್ಯ ಆರಂಭ ಆಗುತ್ತದೆ.

ಸರ್ಕಾರವು ಕಳೆದ ವರ್ಷ ಕಚ್ಚಾ ತಾಳೆ ಎಣ್ಣೆ ಮೇಲಿನ ಮೂಲ ಆಮದು ಸುಂಕವನ್ನು ತೆಗೆದುಹಾಕಿತ್ತು. ಇದರಿಂದಾಗಿ ಆಮದು ಸುಂಕವು ಶೇ 5.5ರಷ್ಟು ಆಗಿತ್ತು. ಜಾಗತಿಕ ಮಟ್ಟದಲ್ಲಿ ದರ ಇಳಿಕೆ ಆಗಿರುವುದರಿಂದ ಭಾರತವು ಆಮದು ಸುಂಕ ಹೆಚ್ಚಿಸಲು ಮುಂದಾಗಿದೆ.

ಆಹಾರ ಹಣದುಬ್ಬರವು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ. ಆದರೆ, ಅಡುಗೆ ಎಣ್ಣೆಗಳ ದರ ಕಡಿಮೆ ಆಗಿದೆ ಎಂದು ವ್ಯಾಪಾರ ಮತ್ತು ಉದ್ಯಮ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT