ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಭಾರತ

7

ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಭಾರತ

Published:
Updated:

ನವದೆಹಲಿ: ಭಾರತವು ಈಗ ವಿಶ್ವದಲ್ಲಿಯೇ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

 ₹ 176.59 ಲಕ್ಷ ಕೋಟಿಗಳಷ್ಟು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೊಂದಿರುವ ಭಾರತ, 2017ರಲ್ಲಿ ಫ್ರಾನ್ಸ್‌ ಅನ್ನು 7ನೇ ಸ್ಥಾನಕ್ಕೆ ಹಿಂದಿಕ್ಕಿದೆ ಎಂದು ವಿಶ್ವಬ್ಯಾಂಕ್‌ ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಫ್ರಾನ್ಸ್‌ನ ‘ಜಿಡಿಪಿ’ಯು ₹ 175.57 ಲಕ್ಷ ಕೋಟಿಗಳಷ್ಟಿದೆ.

ಇತ್ತೀಚಿನ ವರ್ಷಗಳಲ್ಲಿ ಉದ್ದಿಮೆ ವಹಿವಾಟುಗಳನ್ನು ಸುಲಭವಾಗಿ ಆರಂಭಿಸಲು ನೆರವಾಗುವ ಹಲವಾರು ಸುಧಾರಣಾ ಕಾರ್ಯಕ್ರಮಗಳನ್ನು ಭಾರತದಲ್ಲಿ ಜಾರಿಗೆ ತರಲಾಗಿದೆ. ಅವುಗಳ ಪೈಕಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಮತ್ತು ದಿವಾಳಿ ಸಂಹಿತೆ (ಐಬಿಸಿ) ಮುಖ್ಯವಾಗಿವೆ.

ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಆರ್ಥಿಕ ವೃದ್ಧಿ ದರವು ಶೇ 7.7ರಷ್ಟು ದಾಖಲಾಗಿದೆ. ಇದು ಏಳು ತ್ರೈಮಾಸಿಕಗಳಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ. ವಿವಿಧ ಯೋಜನೆಗಳಲ್ಲಿ ಸರ್ಕಾರದ ವೆಚ್ಚ ಹೆಚ್ಚಿರುವುದು ಮತ್ತು ಬಂಡವಾಳ ಹೂಡಿಕೆ ಪ್ರಮಾಣ ಏರಿಕೆಯಾಗಿರುವುದರಿಂದ ವೃದ್ಧಿ ದರ ಗರಿಷ್ಠ ಮಟ್ಟದಲ್ಲಿ ಇದೆ.

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು (ಐಎಂಎಫ್‌) ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ್ದ  ಆರ್ಥಿಕ ಮುನ್ನೋಟ ವರದಿಯಲ್ಲಿ ಭಾರತದ ಅರ್ಥ ವ್ಯವಸ್ಥೆಯ ಗಾತ್ರ ₹ 177.48 ಲಕ್ಷ ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗಿತ್ತು.  ಇದು ಕೂಡ ಫ್ರಾನ್ಸ್‌ಗಿಂತ (₹ 175.44 ಲಕ್ಷ ಕೋಟಿ) ಹೆಚ್ಚಿಗೆ ಇತ್ತು.

ಯುರೋಪ್‌ ಒಕ್ಕೂಟದಿಂದ ಬೇರ್ಪಡಲಿರುವ ಬ್ರಿಟನ್ ಸದ್ಯಕ್ಕೆ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಅದರ ಜಿಡಿಪಿಯು ₹ 178  ಲಕ್ಷ ಕೋಟಿಗಳಷ್ಟಿದೆ. ಇದು ಭಾರತಕ್ಕಿಂತ ₹ 1.70 ಲಕ್ಷ ಕೋಟಿಗಳಷ್ಟು ಹೆಚ್ಚಿಗೆ ಇದೆ.

ಅಮೆರಿಕೆಯು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದೆ. ಅದರ ಒಟ್ಟಾರೆ ಜಿಡಿಪಿಯು ₹ 1,318.52 ಲಕ್ಷ ಕೋಟಿಗಳಷ್ಟಿದೆ. ನಂತರದ ಸ್ಥಾನದಲ್ಲಿ ಚೀನಾ, ಜಪಾನ್‌ ಮತ್ತು ಜರ್ಮನಿ ದೇಶಗಳಿವೆ.

‘ಕ್ರಮಿಸಬೇಕಾದ ಹಾದಿ ಇನ್ನೂ ದೂರ’

‘ಭಾರತವು ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿರುವುದು ನಿರೀಕ್ಷಿತ ಬೆಳವಣಿಗೆಯಾಗಿದ್ದು,  ಭಾರತ ಕ್ರಮಿಸಬೇಕಾಗಿರುವ ಹಾದಿ ಇನ್ನೂ ಸಾಕಷ್ಟು ದೂರ ಇದೆ.  ದೇಶದ ತಲಾ ಆದಾಯವು ಈಗಲೂ ಕಡಿಮೆ ಮಟ್ಟದಲ್ಲಿ ಇದೆ. ಹೀಗಾಗಿ ನಾವು ಇಷ್ಟಕ್ಕೇ ತೃಪ್ತಿಪಡಬೇಕಾಗಿಲ್ಲ’ ಎಂದು ನೀತಿ ಆಯೋಗದ  ಉಪಾಧ್ಯಕ್ಷ ರಾಜೀವ್‌ ಕುಮಾರ್ ಹೇಳಿದ್ದಾರೆ.

‘ವಿಶ್ವ ಸಮುದಾಯವು ಭಾರತದಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಿದೆ. ಹೀಗಾಗಿ ನಾವು ಆ ನಿರೀಕ್ಷೆಗಳನ್ನು ಈಡೇರಿಸಲು ಹೆಚ್ಚುವರಿ ಸಿದ್ಧತೆ ಮಾಡಬೇಕಾಗಿದೆ. ಹಾಗೆ ಮಾಡಿದರೆ ಮಾತ್ರ ಜಾಗತಿಕ ವಿದ್ಯಮಾನಗಳಲ್ಲಿ ನಾವು ಹೆಚ್ಚು ಅರ್ಥಪೂರ್ಣವಾದ ಪಾತ್ರ ನಿರ್ವಹಿಸಬಹುದು’ ಎಂದು ಪ್ರತಿಕ್ರಿಯಿಸಿದ್ದಾರೆ.

* ಭಾರತ ಶೀಘ್ರವೇ, ಬ್ರಿಟನ್‌ ಅನ್ನೂ ಹಿಂದಿಕ್ಕಿ 5ನೇ ಸ್ಥಾನಕ್ಕೆ ಬಡ್ತಿ ಪಡೆಯಲಿದ್ದರೂ, ನಮ್ಮ ತಲಾ ಆದಾಯ ಫ್ರಾನ್ಸ್‌ಗಿಂತ 20 ಪಟ್ಟು ಕಡಿಮೆ ಇದೆ

–ರಾಜೀವ್‌ ಕುಮಾರ್, ನೀತಿ ಆಯೋಗದ ಉಪಾಧ್ಯಕ್ಷ

Tags: 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !