ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಂಚನೆ: ಚೀನಾದ ಬೈಟ್‌ಡ್ಯಾನ್ಸ್‌ ಕಂಪನಿಯ ಬ್ಯಾಂಕ್‌ ಖಾತೆಗಳ ಮೇಲೆ ನಿರ್ಬಂಧ

Last Updated 30 ಮಾರ್ಚ್ 2021, 16:04 IST
ಅಕ್ಷರ ಗಾತ್ರ

ನವದೆಹಲಿ: ತೆರಿಗೆ ವಂಚನೆ ಆರೋಪದಲ್ಲಿ ಚೀನಾದ ಬೈಟ್‌ಡ್ಯಾನ್ಸ್ ಕಂಪನಿಯು ದೇಶದಲ್ಲಿ ಹೊಂದಿರುವ ಬ್ಯಾಂಕ್ ಖಾತೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.

ತನ್ನ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಬಹುದಾದ ಈ ಕ್ರಮವನ್ನು ರದ್ದುಗೊಳಿಸುವಂತೆ ಕಂಪನಿಯು ನ್ಯಾಯಾಲಯದ ಮೊರೆ ಹೋಗಿದೆ ಎಂದು ಕಂಪನಿ ಜತೆ ನೇರ ಸಂಬಂಧ ಹೊಂದಿರುವ ಎರಡು ಮೂಲಗಳು ‘ರಾಯಿಟರ್ಸ್‌’ ಸುದ್ದಿಸಂಸ್ಥೆಗೆ ತಿಳಿಸಿವೆ.

ಕಳೆದ ವರ್ಷ ಚೀನಾ ಜತೆ ಸಂಭವಿಸಿದ ಗಡಿ ಸಂಘರ್ಷದ ಬಳಿಕ ಬೈಟ್‌ಡ್ಯಾನ್ಸ್‌ನ ವಿಡಿಯೊ ಆ್ಯಪ್ ಟಿಕ್‌ಟಾಕ್‌ ಅನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಆ ಬಳಿಕ ಕಂಪನಿಯು ಭಾರತದಲ್ಲಿ ಉದ್ಯೋಗ ಕಡಿತಗೊಳಿಸಿತ್ತು. ಭಾರತದ ಈ ನಡೆಯನ್ನು ಚೀನಾ ಟೀಕಿಸಿತ್ತು.

ಭಾರತದಲ್ಲಿ ಬೈಟ್‌ಡ್ಯಾನ್ಸ್‌ 1,300 ಉದ್ಯೋಗಿಗಳನ್ನು ಹೊಂದಿದೆ. ಇವರಲ್ಲಿ ಹೆಚ್ಚಿನವರು ಕಂಪನಿಯ ಸಾಗರೋತ್ತರ ಚಟುವಟಿಕೆಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಬೈಟ್‌ಡ್ಯಾನ್ಸ್‌ ಭಾರತದಲ್ಲಿ ಸಿಟಿಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳನ್ನು ಮಾರ್ಚ್‌ ಮಧ್ಯಭಾಗದಲ್ಲಿ ನಿರ್ಬಂಧಿಸಲಾಗಿದೆ. ಬೈಟ್‌ಡ್ಯಾನ್ಸ್‌ನ ಭಾರತ ಘಟಕ ಮತ್ತು ಸಿಂಗಾಪುರದಲ್ಲಿರುವ ಅದರ ಮೂಲ ಘಟಕವು ಆನ್‌ಲೈನ್ ಜಾಹೀರಾತು ವ್ಯವಹಾರದಲ್ಲಿ ತೆರಿಗೆ ವಂಚನೆ ಮಾಡಿವೆ ಎಂಬ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಎರಡು ಬ್ಯಾಂಕ್ ಖಾತೆಗಳು ಮಾತ್ರವಲ್ಲದೆ, ತೆರಿಗೆ ಗುರುತಿನ ಸಂಖ್ಯೆ ಹೊಂದಿರುವ ಇತರ ಬ್ಯಾಂಕ್‌ ಖಾತೆಗಳಿಂದಲೂ ಹಣ ವಾಪಸ್ ಪಡೆಯಲು ಕಂಪನಿಗೆ ಅವಕಾಶ ನೀಡಬಾರದು ಎಂದು ಸಿಟಿಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಬ್ಯಾಂಕ್‌ಗಳಿಗೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

ಈ ವಿಚಾರವಾಗಿ ಬೈಟ್‌ಡ್ಯಾನ್ಸ್ ನ್ಯಾಯಾಲಯದ ಮೊರೆ ಹೋಗಿದ್ದು, ಶೀಘ್ರದಲ್ಲೇ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಖಾತೆಗಳನ್ನು ನಿರ್ಬಂಧಿಸಿರುವ ಕ್ರಮವು ಕಾನೂನಿನ ದುರುಪಯೋಗವಾಗಿದ್ದು, ಇದರಿಂದ ವೇತನ ನೀಡುವುದು ಮತ್ತು ತೆರಿಗೆ ಪಾವತಿಸುವುದು ಕಷ್ಟವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ವಿಚಾರವಾಗಿ ಬೈಟ್‌ಡ್ಯಾನ್ಸ್‌ನ ಭಾರತ ಘಟಕ, ಎಚ್‌ಎಸ್‌ಬಿಸಿ, ಸಿಟಿ ಬ್ಯಾಂಕ್ ಹಾಗೂ ಹಣಕಾಸು ಸಚಿವಾಲಯ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT