ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲ್ತಿ ಖಾತೆ ಮಿಗತೆ ಸಾಧ್ಯತೆ: ಸಿಇಎ ಕೃಷ್ಣಮೂರ್ತಿ ಸುಬ್ರಮಣಿಯನ್

Last Updated 23 ನವೆಂಬರ್ 2020, 15:36 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ಕ್ಕೆ ಸಂಬಂಧಿಸಿದ ಬಿಕ್ಕಟ್ಟಿನಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಆಮದು ಕಡಿಮೆ ಆಗಲಿದೆ. ಹೀಗಾಗಿ ಚಾಲ್ತಿ ಖಾತೆ ಮಿಗತೆ ಉಂಟಾಗುವ ಸಾಧ್ಯತೆ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೃಷ್ಣಮೂರ್ತಿ ಸುಬ್ರಮಣಿಯನ್‌ ಹೇಳಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಆಯೋಜಿಸಿದ್ದ ಸಭೆಯೊಂದರಲ್ಲಿ ಅವರು ಮಾತನಾಡಿದರು.

‘ಹಣದ ಹರಿವು ಹೆಚ್ಚಿಸುವ ಉದ್ದೇಶದಿಂದಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್ 2013ರಲ್ಲಿ ಸಂಪ್ರದಾಯಬದ್ಧವಲ್ಲದ ಹಣಕಾಸು ನೀತಿ ಅನುಸರಿಸಿತು. ದೀರ್ಘಾವಧಿಯ ಸಾಲಪತ್ರಗಳನ್ನು ಖರೀದಿಸಿತು. ಇದರಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳಲ್ಲಿ ಹಣದುಬ್ಬರವು ಎರಡಂಕಿಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ಈಗಿನ ಕೋವಿಡ್‌–19 ಬಿಕ್ಕಟ್ಟು ಅದಕ್ಕಿಂತಲೂ ಭಿನ್ನವಾಗಿದೆ’ ಎಂದು ಸುಬ್ರಮಣಿಯನ್‌ ಹೇಳಿದ್ದಾರೆ.

‘ಭಾರತವು ಕೋವಿಡ್–19 ಆರ್ಥಿಕ ಬಿಕ್ಕಟ್ಟಿನ ಸ್ವರೂಪವನ್ನು ಪತ್ತೆ ಮಾಡಿದ್ದು, ಈ ಹಿಂದಿನ ಆರ್ಥಿಕ ಮುಗ್ಗಟ್ಟಿನ ಸ್ಥಿತಿಗಿಂತಲೂ ಭಿನ್ನವಾಗಿ ವ್ಯವಹರಿಸಿದೆ. ಸದ್ಯದ ಬಿಕ್ಕಟ್ಟು ಬೇಡಿಕೆಗೆ ಸಂಬಂಧಿಸಿದ್ದು. ಅದನ್ನು ಎದುರಿಸಲು ಭಾರತವು ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಂಡಿದೆ’ ಎಂದಿದ್ದಾರೆ.

‘ಮೊದಲ ತ್ರೈಮಾಸಿಕದಲ್ಲಿ ₹ 1.46 ಲಕ್ಷ ಕೋಟಿ ಚಾಲ್ತಿ ಖಾತೆ ಮಿಗತೆ ಇದೆ. ಮುಂದಿನ ತ್ರೈಮಾಸಿಕಗಳಲ್ಲಿ ಇದೇ ಮಟ್ಟದಲ್ಲಿ ಇರದಿದ್ದರೂ, ಚಾಲ್ತಿ ಖಾತೆ ಮಿಗತೆಯಂತೂ ಇರಲಿದೆ’ ಎಂದು ಹೇಳಿದ್ದಾರೆ.

‘ಲಾಕ್‌ಡೌನ್‌ನಿಂದಾಗಿ ಅಲ್ಪಾವಧಿಗೆ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಉಂಟಾಗಿದೆ. ಹೀಗಿದ್ದರೂ ಸರ್ಕಾರದ ಪ್ರಯತ್ನದಿಂದಾಗಿ ಮಧ್ಯಮಾವಧಿಯಿಂದ ದೀರ್ಘಾವಧಿಯಲ್ಲಿ ಕೋವಿಡ್‌ನಿಂದಾಗಿ ಆರ್ಥಿಕ ಬೆಳವಣಿಗೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ. ಸುಸ್ಥಿರ ಪ್ರಗತಿ ಹೊಂದುವುದು ಬಹಳ ಮುಖ್ಯ. ಹೆಚ್ಚಿನ ಉದ್ಯೋಗ ಸೃಷ್ಟಿಯಿಂದ ಮಾತ್ರ ಅದು ಸಾಧ್ಯವಾಗುವುದೇ ವಿನಾ ಉದ್ಯೋಗರಹಿತ ಬೆಳವಣಿಗೆಯಿಂದಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT