ಸೋಮವಾರ, ಜೂನ್ 14, 2021
23 °C

ಭಾರತಕ್ಕೆ ಜೀವನೋಪಾಯ ಬಿಕ್ಕಟ್ಟಿನ ಭೀತಿ: ಅರ್ಥಶಾಸ್ತ್ರಜ್ಞ ಜೀನ್ ಡ್ರೆಜೆಯ್

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಹರಡುವುದನ್ನು ತಡೆಯುವ ಸಲುವಾಗಿ ರಾಜ್ಯಗಳು ಸ್ಥಳೀಯ ಮಟ್ಟದಲ್ಲಿ ವಿಧಿಸಿರುವ ನಿರ್ಬಂಧಗಳಿಂದಾಗಿ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿ ಪರಿಸ್ಥಿತಿಯು ಇನ್ನಷ್ಟು ಹದಗೆಡುವ ಸಾಧ್ಯತೆ ಇದ್ದು ಭಾರತವು ಗಂಭೀರ ಜೀವನೋಪಾಯ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎಂದು ಅರ್ಥಶಾಸ್ತ್ರಜ್ಞ ಜೀನ್ ಡ್ರೆಜೆಯ್ ಹೇಳಿದ್ದಾರೆ.

‘ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತವನ್ನು 2024–25ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಸರ್ಕಾರದ ಗುರಿ ಈಡೇರುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ.

ಕೋವಿಡ್ ಎರಡನೇ ಅಲೆಯು ಭಾರತದ ಆರ್ಥಿಕತೆಯ ಮೇಲೆ ಬೀರಿರುವ ಪರಿಣಾಮದ ಬಗ್ಗೆ ಮಾತನಾಡಿದ ಅವರು, ದುಡಿಯುವ ವರ್ಗವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಈ ವರ್ಷದ ಪರಿಸ್ಥಿತಿಯು ಕಳೆದ ವರ್ಷಕ್ಕಿಂತ ತೀರಾ ಭಿನ್ನವಾಗಿಲ್ಲ ಎಂದಿದ್ದಾರೆ.

ಓದಿ: 

ಸ್ಥಳೀಯ ಮಟ್ಟದ ಲಾಕ್‌ಡೌನ್ ಪರಿಣಾಮಗಳು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಂತೆ ವಿನಾಶಕಾರಿಯಲ್ಲ. ಆದರೆ ದುಡಿಯುವ ವರ್ಗದವರಿಗೆ ತೀರಾ ಕೆಟ್ಟದಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೋಂಕಿಗಿಂತಲೂ ಸೋಂಕಿನ ಭಯ ಹೆಚ್ಚು ವ್ಯಾಪಕವಾಗಿದ್ದು ಆರ್ಥಿಕ ಚಟುವಟಿಕೆಯ ಪುನಶ್ಚೇತನಕ್ಕೆ ಅಡ್ಡಿಯಾಗುತ್ತಿದೆ. ಸಾಮೂಹಿಕ ಲಸಿಕೆ ನೀಡಿಕೆ ಹೊರತಾಗಿಯೂ ಈ ಬಿಕ್ಕಟ್ಟು ದೀರ್ಘಕಾಲದವರೆಗೆ, ಬಹುಶಃ ವರ್ಷಗಳವರೆಗೆ ಮುಂದುವರಿಯುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.

ಓದಿ: 

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅನೇಕ ಜನರು ಉಳಿತಾಯ ಮತ್ತು ಪಡೆದಿರುವ ಸಾಲದ ಮೊತ್ತವನ್ನು ಖಾಲಿ ಮಾಡಿದ್ದಾರೆ. ಕಳೆದ ವರ್ಷದ ಬಿಕ್ಕಟ್ಟಿನಿಂದಾಗಿ ಸಾಲ ಪಡೆದವರಿಗೆ ಈ ಬಾರಿ ಮತ್ತೆ ಅದು ದೊರೆಯದು. ಕಳೆದ ವರ್ಷ ಪರಿಹಾರದ ಪ್ಯಾಕೇಜನ್ನು ಸರ್ಕಾರ ಘೋಷಿಸಿತ್ತು. ಈ ವರ್ಷ ಆ ಬಗ್ಗೆ ಚರ್ಚೆಯಾಗಿಲ್ಲ. ಇದಲ್ಲದೆ ಸ್ಥಳೀಯ ಲಾಕ್‌ಡೌನ್‌ಗಳು ಶೀಘ್ರದಲ್ಲೇ ರಾಷ್ಟ್ರಮಟ್ಟದ ಲಾಕ್‌ಡೌನ್‌ಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ದೇಶವು ಜೀವನೋಪಾಯಕ್ಕೆ ಸಂಬಂಧಿಸಿದ ಗಂಭೀರ ಬಿಕ್ಕಟ್ಟಿನತ್ತ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು