ಶುಕ್ರವಾರ, ಜೂನ್ 25, 2021
21 °C
ಕೇಂದ್ರ ಸರ್ಕಾರಕ್ಕೆ ಸಲಹೆ: ಲಸಿಕೆ ಉತ್ಪಾದನೆಗೆ ವೇಗ–ಅಭಿಮತ

ಕೋವಿಡ್‌: ಇತರ ಕಂಪನಿಗಳಿಗೆ ಲಸಿಕೆ ಸೂತ್ರ ಹಂಚಲು ಕೇಜ್ರಿವಾಲ್‌ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎರಡು ಕಂಪನಿಗಳು ಅಭಿವೃದ್ಧಿಪಡಿಸಿರುವ ಕೋವಿಡ್‌–19 ಲಸಿಕೆಯ ರಾಸಾಯನಿಕ ಸೂತ್ರವನ್ನು ಇತರ ಔಷಧ ಕಂಪನಿಗಳೊಂದಿಗೆ ಹಂಚಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಇದರಿಂದ ಲಸಿಕೆಯ ಉತ್ಪಾದನೆಗೆ ವೇಗ ನೀಡಲು ಸಾಧ್ಯವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ದೆಹಲಿಯೂ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಕೋವಿಡ್‌–19 ಲಸಿಕೆಯ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಈ ಸಲಹೆಯನ್ನು ಮುಂದಿಟ್ಟಿದ್ದಾರೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ‘ಅನೇಕ ರಾಜ್ಯಗಳಲ್ಲಿ ಲಸಿಕೆಯ ಕೊರತೆ ಕಂಡು ಬಂದಿದೆ. ಕೆಲವು ರಾಜ್ಯಗಳು 18–44 ವಯೋಮಾನದವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನೇ ಆರಂಭಿಸಿಲ್ಲ‘ ಎಂದೂ ಅವರು ಹೇಳಿದ್ದಾರೆ.

‘ಎಲ್ಲರಿಗೂ ಲಸಿಕೆ ನೀಡುವ ವಿಷಯದಲ್ಲಿ ದೇಶವು ದೊಡ್ಡ ಸವಾಲನ್ನೇ ಎದುರಿಸುತ್ತಿದೆ. ಹೀಗಾಗಿ ಲಸಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವ ಅಗತ್ಯ ಇದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ ಲಸಿಕೆಯನ್ನು, ಭಾರತ್‌ ಬಯೋಟೆಕ್‌ ಕಂಪನಿ ಕೋವ್ಯಾಕ್ಸಿನ್‌ ಉತ್ಪಾದಿಸುತ್ತಿವೆ. ಈ ಎರಡೂ ಕಂಪನಿಗಳು ತಿಂಗಳಿಗೆ 6–7 ಕೋಟಿ ಡೋಸ್‌ ಉತ್ಪಾದಿಸುತ್ತಿವೆ. ಇದೇ ಗತಿಯಲ್ಲಿ ಸಾಗಿದರೆ, ದೇಶದ ಎಲ್ಲರಿಗೂ ಲಸಿಕೆ ನೀಡಲು ಕನಿಷ್ಠ ಎರಡು ವರ್ಷಗಳಾದರೂ ಬೇಕಾಗುತ್ತದೆ’ ಎಂದು ಹೇಳಿದ್ದಾರೆ.

‘ಸಂಕಷ್ಟದ ಈ ಸಮಯದಲ್ಲಿ, ಲಸಿಕೆಯ ರಾಸಾಯನಿಕ ಸೂತ್ರವನ್ನು ಇತರ ಕಂಪನಿಗಳೊಂದಿಗೆ ಹಂಚಿಕೊಳ್ಳುವಂತೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಸೂತ್ರವನ್ನು ಹಂಚಿಕೊಳ್ಳುವ ಈ ಎರಡು ಕಂಪನಿಗಳಿಗೆ ಸೂಕ್ತ ಗೌರವಧನ ನೀಡುವ ವ್ಯವಸ್ಥೆಯೂ ಆಗಬೇಕು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು