ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020–21ರಲ್ಲಿ ಶೇ 5.5 ಜಿಡಿಪಿ ವೃದ್ಧಿ ನಿರೀಕ್ಷೆ: ಇಂಡಿಯಾ ರೇಟಿಂಗ್ಸ್‌

Last Updated 22 ಜನವರಿ 2020, 12:31 IST
ಅಕ್ಷರ ಗಾತ್ರ

ನವದೆಹಲಿ: 2020–21ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಶೇ 5.5ರಷ್ಟು ಇರಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ವರದಿಯಲ್ಲಿ ತಿಳಿಸಲಾಗಿದೆ.

ಪ್ರಸಕ್ತ ವರ್ಷದ (2019–20) ಜಿಡಿಪಿಯು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಅಂದಾಜಿಸಿರುವ ಮಟ್ಟದಲ್ಲಿಯೇ (ಶೇ 5) ಇರಲಿದೆ. ಮುಂದಿನ ಹಣಕಾಸು ವರ್ಷದಲ್ಲಿ ಇದು ಅಲ್ಪಮಟ್ಟಿಗೆ ಚೇತರಿಕೆ ಕಾಣಲಿದೆ. ಸರ್ಕಾರ ಈಗಾಗಲೇ ಹಮ್ಮಿಕೊಂಡಿರುವ ಉತ್ತೇಜನಾ ಕ್ರಮಗಳು ಮತ್ತು ಬೇಡಿಕೆ ಹೆಚ್ಚಳದಿಂದಾಗಿ ವೃದ್ಧಿ ದರದಲ್ಲಿ ಅಲ್ಪಮಟ್ಟಿನ ಚೇತರಿಕೆ ಕಂಡುಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಆರ್ಥಿಕತೆಯ ಪ್ರಗತಿ ನಿಧಾನವಾಗಿರುವುದಕ್ಕೆ ಹಲವಾರು ಕಾರಣಗಳಿವೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಸಾಲ ನೀಡಿಕೆಯು ಹಠಾತ್ತಾಗಿ ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿದೆ. ಬ್ಯಾಂಕಿಂಗ್‌ ಸಾಲ ವಿತರಣೆ ನಿಧಾನವಾಗಿದೆ. ಕೌಟುಂಬಿಕ ವರಮಾನ ಹೆಚ್ಚಳಗೊಂಡಿಲ್ಲ. ಇವೆಲ್ಲವು ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ಒಟ್ಟಾರೆ ಆರ್ಥಿಕತೆಯು ಬೇಡಿಕೆ ಕುಸಿತ ಮತ್ತು ಬಂಡವಾಳ ಹೂಡಿಕೆ ಕೊರತೆ ಮಧ್ಯೆ ಸಿಲುಕಿಕೊಂಡಿದೆ.

ಸರಕು ಮತ್ತು ಸೇವೆಗಳ ಬೇಡಿಕೆಯು ಹೆಚ್ಚಳಗೊಳ್ಳಲು ಮತ್ತು ಆರ್ಥಿಕತೆಯು ತನ್ನ ಮೊದಲಿನ ವೇಗದ ಪ್ರಗತಿಯ ಹಾದಿಗೆ ಮರಳಲು ಸರ್ಕಾರ ಹೊಸ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸರ್ಕಾರ ಈಗಾಗಲೇ ಘೋಷಿಸಿರುವ ಉತ್ತೇಜನಾ ಕ್ರಮಗಳು ಮಧ್ಯಂತರ ಅವಧಿಗೆ ಮಾತ್ರ ಅನ್ವಯವಾಗಲಿವೆ. ಆರ್ಥಿಕತೆಯು ದೀರ್ಘಾವಧಿಯಲ್ಲಿ ವೇಗವಾಗಿ ಬೆಳವಣಿಗೆ ದಾಖಲಿಸಲು ಹೊಸ ಉಪಕ್ರಮಗಳ ಅಗತ್ಯ ಇದೆ.

ವರಮಾನ ಹೆಚ್ಚಳಕ್ಕೆ ಕ್ರಮ: ಮುಂದಿನ ವರ್ಷವೂ ವೃದ್ಧಿ ದರವು ನಿಧಾನಗತಿಯಲ್ಲಿ ಇರಲಿರುವುದರಿಂದ ತೆರಿಗೆ ಸಂಗ್ರಹ ಕಡಿಮೆ ಮಟ್ಟದಲ್ಲಿಯೇ ಇರಲಿದೆ. ಸರ್ಕಾರದ ವೆಚ್ಚ ಹೆಚ್ಚಿಸಲು ಸೀಮಿತ ಅವಕಾಶಗಳು ಇರಲಿವೆ. ಹೀಗಾಗಿ ಬಜೆಟ್‌ನಲ್ಲಿ ವೆಚ್ಚಕ್ಕೆ ಕಡಿವಾಣ ವಿಧಿಸಿ ವರಮಾನ ಸಂಗ್ರಹ ಹೆಚ್ಚಿಸಲು ಗರಿಷ್ಠ ಪ್ರಯತ್ನ ಮಾಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT