ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರಿಕೆ ಸಬ್ಸಿಡಿ ರದ್ದುಗೊಳಿಸುವ ಡಬ್ಲ್ಯುಟಿಒ ಪ್ರಸ್ತಾವಕ್ಕೆ ಭಾರತ ಆಕ್ಷೇಪ

Last Updated 12 ನವೆಂಬರ್ 2021, 14:25 IST
ಅಕ್ಷರ ಗಾತ್ರ

ನವದೆಹಲಿ: ಮೀನುಗಾರಿಕೆಗೆ ನೀಡುತ್ತಿರುವ ಸಬ್ಸಿಡಿಗಳನ್ನು ರದ್ದುಗೊಳಿಸಲು ವಿಶ್ವ ವ್ಯಾಪಾರ ಸಂಘಟನೆಯು (ಡಬ್ಲ್ಯುಟಿಒ) ಮಾಡಿರುವ ಪ್ರಸ್ತಾವನೆಯು ನ್ಯಾಯಸಮ್ಮತವಾಗಿ ಇಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೆ, ಈ ಪ್ರಸ್ತಾವಗಳು ಶ್ರೀಮಂತ ದೇಶಗಳ ಪರವಾಗಿ ಇವೆ ಎಂದೂ ಅವರು ಹೇಳಿದ್ದಾರೆ.

ದೇಶದ ಕೋಟ್ಯಂತರ ಜನರಿಗೆ ಜೀವನೋಪಾಯ ಕಲ್ಪಿಸಿರುವ ಮೀನುಗಾರಿಕೆ ಉದ್ಯಮಕ್ಕಾಗಿ ಸರ್ಕಾರಗಳು ಕೋಟ್ಯಂತರ ರೂಪಾಯಿ ಸಬ್ಸಿಡಿ ನೀಡುತ್ತಿವೆ. ಆದರೆ, ಈ ಸಬ್ಸಿಡಿಗಳ ಕಾರಣದಿಂದಾಗಿ ಮೀನುಗಾರಿಕೆ ಚಟುವಟಿಕೆಗಳು ಅತಿಯಾಗುತ್ತಿವೆ. ಇದರಿಂದಾಗಿ ವಿಶ್ವದ ಜಲಚರಗಳಿಗೆ ಕುತ್ತು ಬಂದಿದೆ ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

ಅಕ್ರಮ ಹಾಗೂ ಅನಿಯಂತ್ರಿತ ಮೀನುಗಾರಿಕೆಗೆ ಸಬ್ಸಿಡಿ ನೀಡುವುದನ್ನು ಕೊನೆಗೊಳಿಸುವ‍ಪ್ರಸ್ತಾವದ ಬಗ್ಗೆ ಡಬ್ಲ್ಯುಟಿಒ ಸಂಘಟನೆಯು ಜಿನಿವಾದಲ್ಲಿ ಈ ತಿಂಗಳ ಅಂತ್ಯದಲ್ಲಿ ನಡೆಸುವ ಸಭೆಯಲ್ಲಿ ಚರ್ಚಿಸಲಿದೆ. ಆದರೆ, ಈ ವಿಚಾರವಾಗಿ ಈಗ ನಡೆದಿರುವ ಚರ್ಚೆಗಳು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಕಳವಳಗಳಿಗೆ ಸ್ಪಂದಿಸಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ದೊಡ್ಡ ಮಟ್ಟದಲ್ಲಿ ಮೀನುಗಾರಿಕೆ ನಡೆಸುವ ದೇಶಗಳ ಪಾಲಿಗೆ ಈ ಪ್ರಸ್ತಾವದಿಂದ ಯಾವ ಬದಲಾವಣೆಯೂ ಆಗದು. ಇದು ಮೀನುಗಾರಿಕೆ ವಿಚಾರದಲ್ಲಿ ಮುಂದುವರಿದಿರುವ ದೇಶಗಳ ಪರವಾಗಿ ಇದೆ’ ಎಂದು ಈ ಅಧಿಕಾರಿ ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಹೇಳಿದರು.

ಭಾರಿ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿರುವ ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ, ಚೀನಾ ಮತ್ತು ಐರೋಪ್ಯ ಒಕ್ಕೂಟವು ಸಬ್ಸಿಡಿ ಮೊತ್ತ ತಗ್ಗಿಸುವಲ್ಲಿ ಹಾಗೂ ಮೀನುಗಾರಿಕೆ ಸಾಮರ್ಥ್ಯ ಕಡಿಮೆ ಮಾಡುವಲ್ಲಿ ಹೆಚ್ಚಿನ ಪಾಲು ತೆಗೆದುಕೊಳ್ಳಬೇಕು ಎಂದು ಭಾರತವು ಈ ಹಿಂದೆ ಒತ್ತಾಯಿಸಿದೆ.

ಶ್ರೀಮಂತ ದೇಶಗಳು ತಮ್ಮ ಮೀನುಗಾರರಿಕೆ ಭಾರಿ ಮೊತ್ತದ ಸಬ್ಸಿಡಿ ನೀಡುತ್ತಿವೆ. ಆದರೆ, ಭಾರತವು ನೀಡುತ್ತಿರುವ ಸಬ್ಸಿಡಿಯು ₹ 1,000 ಕೋಟಿ ಆಸುಪಾಸಿನಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT