ನವದೆಹಲಿ: ಲೋಕಸಭಾ ಸ್ಪೀಕರ್ ಸ್ಥಾನದಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ನಿರ್ಣಯ ಕೈಗೊಂಡಿರುವ ವಿರೋಧ ಪಕ್ಷಗಳು ಈ ಕುರಿತ ನೋಟಿಸ್ ಅನ್ನು ಮಂಗಳವಾರ ಸಲ್ಲಿಸಿವೆ.

ಲೋಕಸಭೆಯಲ್ಲಿ ಕಾಂಗ್ರೆಸ್ನ ಉಪನಾಯಕ ಗೌರವ್ ಗೊಗೋಯಿ, ಮುಖ್ಯ ಸಚೇತಕ ಕೆ.ಸುರೇಶ್, ಸಚೇತಕ ಮೊಹಮ್ಮದ್ ಜಾವೇದ್ ಅವರನ್ನು ಒಳಗೊಂಡ ನಿಯೋಗವು, ಸಂವಿಧಾನದ 94(ಸಿ) ವಿಧಿಯಡಿ ಈ ನೋಟಿಸ್ ಅನ್ನು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರಿಗೆ ಸಲ್ಲಿಸಿದರು.

ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ಆರ್ಜೆಡಿ, ಶಿವಸೇನಾ(ಯುಬಿಟಿ), ಎನ್ಸಿಪಿ(ಎಸ್ಪಿ) ಹಾಗೂ ಎಡಪಕ್ಷಗಳು ಸೇರಿ ವಿಪಕ್ಷಗಳ 120 ಸಂಸದರು ಈ ನೋಟಿಸ್ಗೆ ಸಹಿ ಹಾಕಿದ್ದಾರೆ.

ಕೆಲ ಕಾಂಗ್ರೆಸ್ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಬಳಿ ತೆರಳಿ, ‘ಅನಿರೀಕ್ಷಿತ ಕೃತ್ಯ’ವೆಸಗಲು ಮುಂದಾಗಿದ್ದ ಕುರಿತು ಮಾಹಿತಿ ಇತ್ತು. ಈ ಕಾರಣಕ್ಕೆ ಸದನಕ್ಕೆ ಬಾರದಂತೆ ಮೋದಿ ಅವರಿಗೆ ಮನವಿ ಮಾಡಿದ್ದೆ ಎಂಬ ಬಿರ್ಲಾ ಅವರ ಹೇಳಿಕೆಯನ್ನು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.

‘ಕಾಂಗ್ರೆಸ್ ಪಕ್ಷದ ವಿರುದ್ಧ ಬಿರ್ಲಾ ಅವರ ಈ ಆರೋಪಗಳು ಸಂಪೂರ್ಣ ಸುಳ್ಳು. ಸ್ಪೀಕರ್ ಅವರು ಸಂಸದೀಯ ಶಿಷ್ಟಾಚಾರ ಕಾಪಾಡುವುದು ಹಾಗೂ ನಿಯಮಗಳ ಪಾಲನೆಯ ಜವಾಬ್ದಾರಿ ಹೊತ್ತಿರುವ ಕಸ್ಟೋಡಿಯನ್ ಆಗಿದ್ದಾರೆ. ಆದರೆ, ಇಂತಹ ಆರೋಪಗಳನ್ನು ಹೊರಿಸುವುದಕ್ಕೆ ಅವರು ಸದನವನ್ನು ಬಳಸಿಕೊಂಡಿದ್ದಾರೆ’ ಎಂದು ನೋಟಿಸ್ನಲ್ಲಿ ವಿವರಿಸಲಾಗಿದೆ.

ವಿರೋಧ ಪಕ್ಷಗಳ ಸಂಸದರು ಸಲ್ಲಿಸಿರುವ ನೋಟಿಸ್ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಸಭಾ ಪ್ರಧಾನ ಕಾರ್ಯದರ್ಶಿ ಅವರಿಗೆ ಓಂ ಬಿರ್ಲಾ ಅವರು ನಿರ್ದೇಶನ ನೀಡಿದ್ದಾರೆ. ಈ ಕುರಿತು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

‘ನೋಟಿಸ್ನಲ್ಲಿ ದೋಷ’:

ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವುದಕ್ಕೆ ಸಂಬಂಧಿಸಿ ಸಲ್ಲಿಸಿದ್ದ ನೋಟಿಸ್ನಲ್ಲಿನ ದೋಷವು ಕಾಂಗ್ರೆಸ್ ಸಂಸದರನ್ನು ಮುಜುಗರಕ್ಕೀಡು ಮಾಡಿತು.

ಕಳೆದ ವಾರ ಲೋಕಸಭೆ ಕಲಾಪದ ವೇಳೆಯಲ್ಲಿನ ಕೆಲ ಘಟನೆಗಳನ್ನು ಉಲ್ಲೇಖಿಸುವಾಗ 2025 ಎಂದು ಬರೆಯಲಾಗಿತ್ತು. ಇದು ಗೊತ್ತಾಗುತ್ತಿದ್ದಂತೆಯೇ, ಹೊಸದಾಗಿ ನೋಟಿಸ್ ಸಿದ್ಧಪಡಿಸಿ ಸಲ್ಲಿಸಿದರು.

ನೋಟಿಸ್ಗೆ ಸಹಿ ಹಾಕುವುದಕ್ಕೆ ಯಾವುದೇ ತೊಂದರೆ ಇಲ್ಲ. ಇಂಥ ಕ್ರಮಕ್ಕೂ ಮೊದಲು ವಿಪಕ್ಷಗಳು ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಬೇಕು. ಮೂರು ದಿನಗಳಲ್ಲಿ ಅವರು ಪರಿಹಾರ ನೀಡದಿದ್ದಲ್ಲಿ ಪದಚ್ಯುತಿಗೊಳಿಸುವ ನಿರ್ಣಯ ಮಂಡಿಸಬಹುದು
ಅಭಿಷೇಕ ಬ್ಯಾನರ್ಜಿ ಲೋಕಸಭೆಯಲ್ಲಿ ಟಿಎಂಸಿ ಸದನ ನಾಯಕ

ನೋಟಿಸ್ನಲ್ಲಿ ಏನಿದೆ?

ಕಲಾಪ ನಡೆಸುವ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು ಪಕ್ಷಪಾತದಿಂದ ನಡೆದುಕೊಳ್ಳುತ್ತಿದ್ದಾರೆ ಹಾಗೂ ಸಾಂವಿಧಾನಿಕ ಹುದ್ದೆಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಮಾತನಾಡಲು ಅವರು ಅವಕಾಶ ನೀಡುತ್ತಿಲ್ಲ

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮೇಲೆ ನಡೆದ ಚರ್ಚೆ ವೇಳೆ ಫೆಬ್ರುವರಿ 2ರಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಮಾತು ಪೂರ್ಣಗೊಳಿಸುವುದಕ್ಕೆ ಅವಕಾಶ ನೀಡಲಿಲ್ಲ. ರಾಹುಲ್ ಅವರಿಗೆ ಬಹುತೇಕ ಸಂದರ್ಭಗಳಲ್ಲಿ ಮಾತನಾಡಲು ಅವಕಾಶವನ್ನೇ ನೀಡಿಲ್ಲ

ಫೆಬ್ರುವರಿ 3ರಂದು ವಿಪಕ್ಷಗಳ 8 ಸಂಸದರನ್ನು ಇಡೀ ಬಜೆಟ್ ಅಧಿವೇಶನದಿಂದ ಅಮಾನತುಗೊಳಿಸಲಾಯಿತು. ತಮ್ಮ ಪ್ರಜಾತಾಂತ್ರಿಕ ಹಕ್ಕುಗಳನ್ನು ಚಲಾಯಿಸಿದ್ದಕ್ಕಾಗಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ

ಫೆಬ್ರುವರಿ 4ರಂದು ಬಿಜೆಪಿಯ ಸಂಸದ ನಿಶಿಕಾಂತ್ ದುಬೆ ಅವರು ಇಬ್ಬರು ಮಾಜಿ ಪ್ರಧಾನಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದಕ್ಕೆ ಅವಕಾಶ ನೀಡಲಾಯಿತು. ಸದನದ ಶಿಷ್ಟಾಚಾರ ಎತ್ತಿಹಿಡಿಯುವ ಉದ್ದೇಶದಿಂದ ಒಮ್ಮೆಯೂ ಅವರಿಗೆ ಛೀಮಾರಿ ಹಾಕಲಿಲ್ಲ. ವಿಪಕ್ಷಗಳು ಮನವಿ ಮಾಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ

ಪ್ರಮುಖ ಅಂಶಗಳು

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ನೋಟಿಸ್ಗೆ ಸಹಿ ಹಾಕಿಲ್ಲ

‘ಇಂಡಿಯಾ’ ಒಕ್ಕೂಟದ ಅಂಗಪಕ್ಷವಾಗಿರುವ ಟಿಎಂಸಿ ಸಂಸದರು ಕೂಡ ನೋಟಿಸ್ಗೆ ಸಹಿ ಮಾಡಿಲ್ಲ

ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ವಿರೋಧ ಪಕ್ಷಗಳ ನಾಯಕರು ಸಭೆ ನಡೆಸಿ ನೋಟಿಸ್ ಸಲ್ಲಿಸುವ ಕುರಿತು ನಿರ್ಧಾರ ಕೈಗೊಂಡಿದ್ದರು.

ರಾಹುಲ್, ಕಾಂಗ್ರೆಸ್ ವಾಗ್ದಂಡನೆಯ ಸಮಯ ಬಂದಿದೆ: ಬಿಜೆಪಿ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವ ನಿರ್ಣಯ ಕುರಿತು ವಿಪಕ್ಷಗಳು ನೋಟಿಸ್ ಸಲ್ಲಿಸಿರುವುದನ್ನು ಖಂಡಿಸಿರುವ ಬಿಜೆಪಿ‘ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ವಾಗ್ದಂಡನೆ ವಿದಿಸುವ ಸಮಯ ಬಂದಿದೆ’ ಎಂದು ಹೇಳಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ‘ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ನ ಇತರ ಸಂಸದರು ಸದನದಲ್ಲಿ ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಇಡೀ ದೇಶವೇ ಗಮನಿಸುತ್ತಿದೆ’ ಎಂದರು.

‘ಅಸಹ್ಯಕರ ಘಟನೆಗಳಿಗೆ ಸದನ ಸಾಕ್ಷಿಯಾಗುತ್ತಿತ್ತು’

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕಿದ್ದ ದಿನ ಕಾಂಗ್ರೆಸ್ ಸಂಸದರೊಂದಿಗೆ ಮುಖಾಮುಖಿಯಾಗಲು ಬಿಜೆಪಿ ಸದಸ್ಯರಿಗೆ ಅವಕಾಶ ನೀಡಿದ್ದಲ್ಲಿ ಬಹಳ ಅಸಹ್ಯಕರ ದೃಶ್ಯಗಳಿಗೆ ಸದನ ಸಾಕ್ಷಿಯಾಗುತ್ತಿತ್ತು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಮಂಗಳವಾರ ಹೇಳಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಅವರು ಲೋಕಸಭೆಯಲ್ಲಿ ಉತ್ತರಿಸಿದರು. ಫೆಬ್ರುವರಿ 4ರಂದು ವಿರೋಧ ಪಕ್ಷದ ಮಹಿಳಾ ಸಂಸದರು ಆಡಳಿತ ಪಕ್ಷದ ಆಸನಗಳತ್ತ ಧಾವಿಸುತ್ತಿದ್ದ ದೃಶ್ಯಗಳಿರುವ ವಿಡಿಯೊ ಕುರಿತು ಪ್ರಸ್ತಾಪಿಸಿದ ಅವರು‘ವಿಪಕ್ಷಗಳ ಸದಸ್ಯರ ಇಂತಹ ವರ್ತನೆಯನ್ನು ಯಾರಾದರೂ ಒಪ್ಪಿಕೊಳ್ಳುತ್ತಾರೆ’ ಎಂದು ಪ್ರಶ್ನಿಸಿದರು. ‘ವಿಪಕ್ಷಗಳ ಸಂಸದರೊಂದಿಗೆ ಸಂಘರ್ಷಕ್ಕೆ ಇಳಿಯದಂತೆ ಆಡಳಿತಾರೂಢ ಮೈತ್ರಿಕೂಟದ ಸಂಸದರಿಗೆ ಸ್ಪಷ್ಟ ಸೂಚನೆ ಇತ್ತು. ಸಂಸತ್ನ ಘನತೆ ಹಾಗೂ ಪಾವಿತ್ರ್ಯ ಕಾಪಾಡುವುದೇ ನಮ್ಮ ಆದ್ಯತೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.