ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಸೇವಾ ವಲಯದ ಚಟುವಟಿಕೆ

Last Updated 3 ಆಗಸ್ಟ್ 2022, 10:40 IST
ಅಕ್ಷರ ಗಾತ್ರ

ನವದೆಹಲಿ: ಬೇಡಿಕೆ ಇಳಿಕೆ, ಹಣದುಬ್ಬರ ಮತ್ತು ಪ್ರತಿಕೂಲ ವಾತಾವರಣದ ಕಾರಣಗಳಿಂದಾಗಿ ದೇಶದ ಸೇವಾ ವಲಯದ ಚಟುವಟಿಕೆಯು ಜುಲೈನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.

ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆಯು ಬುಧವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ. ಸೇವಾ ವಲಯದ ಬೆಳವಣಿಗೆಯನ್ನು ತಿಳಿಸುವ ಸೂಚ್ಯಂಕವು ಜೂನ್‌ನಲ್ಲಿ 59.2ರಷ್ಟು ಇದ್ದಿದ್ದು ಜುಲೈನಲ್ಲಿ 55.5ಕ್ಕೆ ಇಳಿಕೆ ಆಗಿದೆ. ಹೀಗಿದ್ದರೂ ಸೂಚ್ಯಂಕವು 50ಕ್ಕಿಂತಲೂ ಮೇಲ್ಮಟ್ಟದಲ್ಲಿಯೇ ಇರುವುದರಿಂದ ಸತತ 12ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಬೆಳವಣಿಗೆ ಕಂಡಂತಾಗಿದೆ.

ಕಂಪನಿಗಳ ಜುಲೈ ತಿಂಗಳ ಮಾರಾಟ ಮತ್ತು ಗರಿಷ್ಠ ಮಟ್ಟದಲ್ಲಿ ಇದ್ದು, ಬೇಡಿಕೆಯೂ ಅನುಕೂಲಕರವಾಗಿತ್ತು. ಆದರೆ, ತೀವ್ರ ಪೈಪೋಟಿ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬೆಳವಣಿಗೆಗೆ ಹಿನ್ನಡೆಯಾಯಿತು ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ಹೇಳಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

‘ತೀವ್ರ ಪೈಪೋಟಿಯಿಂದ ಸೇವಾ ವಲಯದ ಬೇಡಿಕೆಯು ತಗ್ಗಿದೆ. ಇದರ ಜೊತೆಗೆ ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ವಲಯವು ತನ್ನ ಏರುಮುಖ ಚಲನೆಯಿಂದ ಜಾರುವಂತಾಯಿತು’ ಎಂದು ಸಂಸ್ಥೆಯ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚಿನ ಕುಸಿತ ಕಂಡಿದೆ ಎಂದೂ ಅವರು ತಿಳಿಸಿದ್ದಾರೆ.

ಕಂಪನಿಗಳ ಸರಾಸರಿ ವೆಚ್ಚವು ಜುಲೈನಲ್ಲಿ ಇನ್ನಷ್ಟು ಏರಿಕೆ ಆಗಿದೆ. ಆಹಾರ, ಇಂಧನ, ಸಿಬ್ಬಂದಿ ಹಾಗೂ ರಿಟೇಲ್‌ ಮತ್ತು ಸಾರಿಗೆ ವೆಚ್ಚಗಳು ಕಂಪನಿಯ ವೆಚ್ಚದಲ್ಲಿ ಏರಿಕೆಗೆ ಕಾರಣವಾಗಿವೆ. ಒಟ್ಟಾರೆ ವೆಚ್ಚವು ಹೆಚ್ಚಾಗುತ್ತಿದ್ದು ಸಹ ಐದು ತಿಂಗಳಲ್ಲಿ ಅತಿ ಕಡಿಮೆ ಮಟ್ಟದ ಏರಿಕೆ ಕಂಡಿದೆ.

ವಲಯದಲ್ಲಿ ಉದ್ಯೋಗ ಸೃಷ್ಟಿಯು ಜುಲೈನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಬಹುತೇಕ ಜೂನ್‌ ತಿಂಗಳಿನ ಮಟ್ಟದಲ್ಲಿಯೇ ಇದೆ.

ತಯಾರಿಕೆ ಮತ್ತು ಸೇವಾ ವಲಯಗಳ ಒಟ್ಟಾರೆ ಬೆಳವಣಿಗೆಯನ್ನು ಸೂಚಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ ಜೂನ್‌ನಲ್ಲಿ 58.2ರಷ್ಟು ಇದ್ದಿದ್ದು ಜುಲೈನಲ್ಲಿ 56.6ಕ್ಕೆ ಇಳಿಕೆ ಆಗಿದೆ. ಮಾರ್ಚ್‌ ನಂತರದ ನಿಧಾನಗತಿಯ ಬೆಳವಣಿಗೆ ಇದಾಗಿದೆ.

ತಯಾರಿಕಾ ವಲಯದಲ್ಲಿ ಹೊಸ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಿದ್ದರೆ ಸೇವಾ ವಲಯದಲ್ಲಿ ಇಳಿಕೆ ಕಂಡಿದೆ. ಒಟ್ಟಾರೆಯಾಗಿ ಮಾರಾಟ ಹೆಚ್ಚಾಗಿದ್ದರೂ ಮಾರಾಟದಲ್ಲಿನ ಬೆಳವಣಿಗೆ ಮಟ್ಟವು ನಾಲ್ಕು ತಿಂಗಳ ಕನಿಷ್ಠ ಮಟ್ಟದಲ್ಲಿದೆ ಎಂದು ಸಮೀಕ್ಷೆಯು ತಿಳಿಸಿದೆ.

ಮುಖ್ಯಾಂಶಗಳು

ಸತತ 12ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಬೆಳವಣಿಗೆ

ಗರಿಷ್ಠ ಮಟ್ಟದಲ್ಲಿ ಹಣದುಬ್ಬರ

ಕಂಪನಿಗಳ ವೆಚ್ಚ ಹೆಚ್ಚಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT