ಸೋಮವಾರ, ಜನವರಿ 17, 2022
20 °C

ಶವೋಮಿಗೆ ₹ 653 ಕೋಟಿ ಆಮದು ಸುಂಕ ಪಾವತಿಗೆ ನೋಟಿಸ್‌ ನೀಡಿದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕಾ ಕಂಪನಿ, ಚೀನಾ ಮೂಲದ ಶವೋಮಿಗೆ ₹ 653 ಕೋಟಿ ಆಮದು ಸುಂಕ ಪಾವತಿಸಲು ನೋಟಿಸ್‌ ಜಾರಿಯಾಗಿದೆ.

ಶವೋಮಿ ಕಂಪನಿಯ ಘಟಕಗಳಲ್ಲಿ ನಡೆದ ಶೋಧ ಕಾರ್ಯಾಚರಣೆ ವೇಳೆ, ಕಂಪನಿಯು ಅಮೆರಿಕ ಮತ್ತು ಚೀನಾದ ಕಂಪನಿಗಳಿಗೆ ರಾಯಧನ ಹಾಗೂ ಪರವಾನಗಿ ಶುಲ್ಕ ‍ಪಾವತಿಸಿದ್ದಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಬುಧವಾರ ಹೇಳಿದೆ. 

‘ಭಾರತದ ಕಾನೂನುಗಳನ್ನು ಪಾಲಿಸುವುದಕ್ಕೆ ನಾವು ಅತಿಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ನೋಟಿಸ್‌ಅನ್ನು ವಿಸ್ತೃತವಾಗಿ ಪರಿಶೀಲಿಸುತ್ತಿದ್ದೇವೆ. ಜವಾಬ್ದಾರಿಯುತ ಕಂಪನಿಯಾಗಿ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಸಹಕಾರ ನೀಡುತ್ತೇವೆ’ ಎಂದು ಶವೋಮಿ ವಕ್ತಾರರು ಹೇಳಿದ್ದಾರೆ.

ಶವೋಮಿ ಇಂಡಿಯಾ ಅಥವಾ ಗುತ್ತಿಗೆ ಆಧಾರದಲ್ಲಿ ಈ ಕಂಪನಿಗೆ ತಯಾರಿಕಾ ಕೆಲಸ ಮಾಡಿಕೊಡುವ ಕಂಪನಿಗಳು ರಾಯಧನದ ಮೊತ್ತವನ್ನು ತಿಳಿಸುತ್ತಿರಲಿಲ್ಲ, ಈ ಮೂಲಕ ಆಮದು ಸುಂಕವನ್ನು ವಂಚಿಸಲಾಗುತ್ತಿತ್ತು ಎಂಬುದನ್ನು ರೆವಿನ್ಯೂ ಗುಪ್ತದಳ ಮಹಾನಿರ್ದೇಶನಾಲಯ (ಡಿಆರ್‌ಐ) ನಡೆಸಿದ ತನಿಖೆಯ ವೇಳೆ ದೊರೆತ ಸಾಕ್ಷ್ಯಗಳು ತೋರಿಸಿಕೊಟ್ಟವು ಎಂದು ಸಚಿವಾಲಯ ಹೇಳಿದೆ.

ಡಿಆರ್‌ಐ ತನಿಖೆ ‍ಪೂರ್ಣಗೊಂಡ ನಂತರದಲ್ಲಿ ಒಟ್ಟು ₹ 653 ಕೋಟಿ ಮೊತ್ತದ ಸುಂಕ ವಸೂಲಿಗೆ ಒಟ್ಟು ಮೂರು ನೋಟಿಸ್‌ಗಳನ್ನು ಶವೋಮಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಶವೋಮಿ ಕಂಪನಿಯು ‘ಮಿ’ ಬ್ರ್ಯಾಂಡ್‌ನ ಮೊಬೈಲ್‌ ಫೋನ್‌ಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿತ್ತು ಅಥವಾ ಅದರ ಬಿಡಿಭಾಗಗಳನ್ನು ಆಮದು ಮಾಡಿಕೊಂಡು, ಭಾರತದಲ್ಲಿ ಅವುಗಳನ್ನು ಗುತ್ತಿಗೆ ತಯಾರಕರ ನೆರವಿನಿಂದ ಜೋಡಿಸಿ ಮೊಬೈಲ್ ಫೋನ್‌ ಸಿದ್ಧಪಡಿಸುತ್ತಿತ್ತು ಎಂಬುದನ್ನು ಡಿಆರ್‌ಐ ತನಿಖೆ ಕಂಡುಕೊಂಡಿದೆ.

ಶವೋಮಿ ಕಂಪನಿಯು ಆಮದು ಸುಂಕವನ್ನು ವಂಚಿಸುತ್ತಿದೆ ಎಂಬ ಗುಪ್ತಚರ ಮಾಹಿತಿಯು ಡಿಆರ್‌ಐ ಅಧಿಕಾರಿಗಳಿಗೆ ಲಭಿಸಿತ್ತು. ಇದರ ಆಧಾರದಲ್ಲಿ ಅದು ತನಿಖೆ ಆರಂಭಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು