ಮೊದಲ ತ್ರೈಮಾಸಿಕದಲ್ಲಿ ದಾಖಲೆ ಹೆಚ್ಚಳ: ಆರ್ಥಿಕ ವೃದ್ಧಿ ದರ ಶೇ 8.2 ಬೆಳವಣಿಗೆ

7

ಮೊದಲ ತ್ರೈಮಾಸಿಕದಲ್ಲಿ ದಾಖಲೆ ಹೆಚ್ಚಳ: ಆರ್ಥಿಕ ವೃದ್ಧಿ ದರ ಶೇ 8.2 ಬೆಳವಣಿಗೆ

Published:
Updated:

ನವದೆಹಲಿ : ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶಿ ಆರ್ಥಿಕತೆಯು ಶೇ 8.2ರಷ್ಟು ಬೆಳವಣಿಗೆ ಸಾಧಿಸಿದೆ.

ತಯಾರಿಕೆ ಮತ್ತು ಕೃಷಿ ವಲಯಗಳಲ್ಲಿನ ಉತ್ತಮ ಸಾಧನೆಯ ಫಲವಾಗಿ ಒಟ್ಟು ಆಂತರಿಕ ಉತ್ಪನ್ನವು ಈ ಹಿಂದಿನ 15 ತ್ರೈಮಾಸಿಕದ ಗರಿಷ್ಠ ಬೆಳವಣಿಗೆ ದಾಖಲಿಸಿದೆ. ಎರಡು ವರ್ಷಗಳಲ್ಲಿನ ಗರಿಷ್ಠ ಪ್ರಗತಿಯೂ ಇದಾಗಿದೆ.

ತಯಾರಿಕೆ, ವಿದ್ಯುತ್‌, ಅನಿಲ, ನೀರು ಪೂರೈಕೆ ಮತ್ತು ಇತರ ಸೇವಾ ಕ್ಷೇತ್ರಗಳಲ್ಲಿನ ಆರ್ಥಿಕ ಚಟುವಟಿಕೆಗಳು ಶೇ 7ಕ್ಕಿಂತ ಹೆಚ್ಚಿನ ಪ್ರಗತಿ ದಾಖಲಿಸಿವೆ.

ಕೃಷಿ, ಅರಣ್ಯ, ಗಣಿಗಾರಿಕೆ, ಹಣಕಾಸು, ರಿಯಲ್‌ ಎಸ್ಟೇಟ್‌ ವಲಯದಲ್ಲಿನ ಪ್ರಗತಿಯೂ ಉತ್ತಮ ಮಟ್ಟದಲ್ಲಿ ಇದೆ. 

ಅತ್ಯಂತ ತ್ವರಿತವಾಗಿ ಬೆಳವಣಿಗೆ ಸಾಧಿಸುತ್ತಿರುವ ಆರ್ಥಿಕತೆ ಎನ್ನುವುದನ್ನು ಈ ವೃದ್ಧಿ ದರ ಸಾಬೀತುಪಡಿಸಿದೆ. ಈ ತ್ರೈಮಾಸಿಕದಲ್ಲಿನ ಚೀನಾದ ವೃದ್ಧಿ ದರಕ್ಕೆ (ಶೇ 6.7) ಹೋಲಿಸಿದರೆ ಭಾರತದ ಬೆಳವಣಿಗೆ ದರ ಹೆಚ್ಚಿನ ಮಟ್ಟದಲ್ಲಿ ಇದೆ.

2011–12ರ ಸ್ಥಿರ ಬೆಲೆ ಮಟ್ಟದಲ್ಲಿ ಒಟ್ಟು ಆಂತರಿಕ ಉತ್ಪನ್ನವು ₹ 33.74 ಲಕ್ಷ ಕೋಟಿಗಳಷ್ಟಿದೆ. 2017–18ರ ಇದೇ ಅವಧಿಯಲ್ಲಿನ ₹ 31.18 ಲಕ್ಷ ಕೋಟಿಗೆ ಹೋಲಿಸಿದರೆ ಬೆಳವಣಿಗೆ ದರವು ಶೇ 8.2ರಷ್ಟಿದೆ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ ಪ್ರಕಟಿಸಿದೆ. 2014–15ರ ದ್ವಿತೀಯ ತ್ರೈಮಾಸಿಕದಲ್ಲಿನ ಜಿಡಿಪಿ ವೃದ್ಧಿ ದರವು ಶೇ 8.4ರಷ್ಟಿತ್ತು.

ಸುಧಾರಣೆಗಳ ಫಲ: ನಾಲ್ಕು ವರ್ಷಗಳಲ್ಲಿ ಸರ್ಕಾರ ಜಾರಿಗೆ ತಂದಿರುವ ಆರ್ಥಿಕ ಸುಧಾರಣೆಗಳ ಫಲ ಇದಾಗಿದೆ ಎಂದು ಕೈಗಾರಿಕಾ ಸಂಘಟನೆಗಳು ಬಣ್ಣಿಸಿವೆ.

‘ದೇಶಿ ಬೇಡಿಕೆ ಮತ್ತು ಬಂಡವಾಳ ಹೂಡಿಕೆಯಲ್ಲಿ ಚೇತರಿಕೆ ಕಂಡು ಬರುತ್ತಿರುವುದರ ಸ್ಪಷ್ಟ ಸಂಕೇತವೂ ಇದಾಗಿದೆ’ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ಅಧ್ಯಕ್ಷ ರಾಶೇಷ್ ಶಾ ಪ್ರತಿಕ್ರಿಯಿಸಿದ್ದಾರೆ.
**
ಎಂಟು ಪ್ರಮುಖ ವಲಯಗಳ ಪ್ರಗತಿ 
ಜುಲೈ ತಿಂಗಳಲ್ಲಿ ಎಂಟು ಪ್ರಮುಖ ವಲಯಗಳು ಶೇ 6.6ರಷ್ಟು ಬೆಳವಣಿಗೆ ಸಾಧಿಸಿವೆ. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ತೈಲಾಗಾರ ಉತ್ಪನ್ನ, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ ವಲಯಗಳು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 2.9ರಷ್ಟು ಬೆಳವಣಿಗೆ ದಾಖಲಿಸಿದ್ದವು.

ಈ ಬಾರಿ ಕಲ್ಲಿದ್ದಲು (ಶೇ 9.7), ತೈಲಾಗಾರ ಉತ್ಪನ್ನ (ಶೇ 12.3), ರಸಗೊಬ್ಬರ (ಶೇ 1.3) ಮತ್ತು ಸಿಮೆಂಟ್‌ (ಶೇ 10.8) ಬೆಳವಣಿಗೆ ಸಾಧಿಸಿವೆ. ಆದರೆ, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಉತ್ಪಾದನೆಯು ನಕಾರಾತ್ಮಕ ಬೆಳವಣಿಗೆ ಕಂಡಿದೆ. ಉಕ್ಕು ವಲಯದ ಬೆಳವಣಿಗೆಯು ಹಿಂದಿನ ವರ್ಷದ ಶೇ 9.4ಕ್ಕೆ ಹೋಲಿಸಿದರೆ ಈ ಬಾರಿ ಶೇ 6ಕ್ಕೆ ಇಳಿದಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !