ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಯಾರಿಕಾ ವಲಯ: ಪ್ರಗತಿ ಇಳಿಕೆ

ಸತತ ಮೂರನೇ ತಿಂಗಳೂ ಇಳಿದ ಸೂಚ್ಯಂಕ: ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ವರದಿ
Published : 2 ಸೆಪ್ಟೆಂಬರ್ 2024, 14:17 IST
Last Updated : 2 ಸೆಪ್ಟೆಂಬರ್ 2024, 14:17 IST
ಫಾಲೋ ಮಾಡಿ
Comments

ನವದೆಹಲಿ: ದೇಶದ ತಯಾರಿಕಾ ವಲಯದ ಬೆಳವಣಿಗೆಯು ಆಗಸ್ಟ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ ವರದಿ ತಿಳಿಸಿದೆ.

ಸೋಮವಾರ ಬಿಡುಗಡೆಯಾಗಿರುವ ಎಚ್‌ಎಸ್‌ಬಿಸಿ ಇಂಡಿಯಾದ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಸೂಚ್ಯಂಕದ (ಪಿಎಂಐ) ವರದಿ ಪ್ರಕಾರ, ಜುಲೈನಲ್ಲಿ 58.1ರಷ್ಟಿದ್ದ ಸೂಚ್ಯಂಕವು ಆಗಸ್ಟ್‌ನಲ್ಲಿ 57.5ಕ್ಕೆ ಇಳಿದಿದೆ. ಆದರೆ ದೀರ್ಘಾವಧಿಯ ಸರಾಸರಿ 54ಕ್ಕಿಂತ ಹೆಚ್ಚಾಗಿದೆ. ಇದು ಕಾರ್ಯಾಚರಣೆಯಲ್ಲಿನ ಗಣನೀಯ ಸುಧಾರಣೆಯನ್ನು ಸೂಚಿಸುತ್ತದೆ ಎಂದು ತಿಳಿಸಿದೆ.

ತಯಾರಿಕೆ ಮತ್ತು ಮಾರಾಟವು ಜನವರಿಯಿಂದ ನಿಧಾನಗತಿಯ ದರದಲ್ಲಿ ಏರಿಕೆಯಾಗಿದೆ. ಆದರೆ ಸ್ಪರ್ಧೆಯ ಒತ್ತಡಗಳು ಮತ್ತು ಹಣದುಬ್ಬರ ಕಳವಳ ವ್ಯಾಪಾರದ ವಿಶ್ವಾಸವನ್ನು ಕುಂದಿಸಿವೆ ಎಂದು ಸಮೀಕ್ಷೆ ತಿಳಿಸಿದೆ.

ಪಿಎಂಐ ಸೂಚ್ಯಂಕವು 50ಕ್ಕಿಂತ ಮೇಲಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ನಕಾರಾತ್ಮಕ ಎಂದು ಅರ್ಥೈಸಲಾಗುತ್ತದೆ.

‘ದೇಶದ ತಯಾರಿಕಾ ವಲಯದ ಚಟುವಟಿಕೆ ಆಗಸ್ಟ್‌ನಲ್ಲಿ ಮಂದಗತಿಯಲ್ಲಿ ವಿಸ್ತರಣೆಯಾಗಿದೆ. ತೀವ್ರ ಸ್ಪರ್ಧೆಯೇ ಇಳಿಕೆಗೆ ಕಾರಣ’ ಎಂದು ಎಚ್‌ಎಸ್‌ಬಿಸಿಯ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್‌ ಭಂಡಾರಿ ತಿಳಿಸಿದ್ದಾರೆ. 

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಹೊಸ ವ್ಯಾಪಾರವು ಕ್ಷಿಪ್ರಗತಿಯಲ್ಲಿ ಏರಿಕೆಯಾಯಿತು. ಆದರೆ, ಬೆಳವಣಿಗೆಯು 7 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಸಮೀಕ್ಷೆ ಹೇಳಿದೆ. ಜನವರಿ ಆರಂಭದಿಂದ ಹೊಸ ರಫ್ತು ಬೇಡಿಕೆಗಳು ನಿಧಾನವಾಗಿ ಏರಿಕೆಯಾಗಿವೆ. ಬೆಲೆಯಲ್ಲಿನ ಹೆಚ್ಚಳದಿಂದ ತಯಾರಕರು ಅಲ್ಪ ಪ್ರಮಾಣದ ಲಾಭ ಪಡೆದರು ಎಂದು ತಿಳಿಸಿದೆ.

ತಯಾರಿಕಾ ವೆಚ್ಚದ ಏರಿಕೆಯು ನಿಧಾನಗೊಂಡಿತು. ದಾಸ್ತಾನು ಹೆಚ್ಚಿಸಿಕೊಳ್ಳಲು ತಯಾರಕರು ಕಚ್ಚಾ ವಸ್ತುಗಳ ಖರೀದಿ ಪ್ರಮಾಣವನ್ನು ಹೆಚ್ಚಿಸಿಕೊಂಡರು ಎಂದು ಹೇಳಿದ್ದಾರೆ.

ಕೆಲವು ಕಂಪನಿಗಳು ಉದ್ಯೋಗಿಗಳ ಪ್ರಮಾಣವನ್ನು ಕಡಿತಗೊಳಿಸಿದ್ದರಿಂದ ಉದ್ಯೋಗ ಸೃಷ್ಟಿಯು ಇಳಿಕೆಯಾಗಿದೆ. ಆದರೂ, ಒಟ್ಟಾರೆ ಉದ್ಯೋಗ ಬೆಳವಣಿಗೆ ದರವು ದೃಢವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಸುಮಾರು 400 ತಯಾರಕರಿಗೆ ಕಳುಹಿಸಲಾದ ಪ್ರಶ್ನಾವಳಿಗಳಲ್ಲಿ ನಮೂದಾಗಿರುವ ಪ್ರತಿಕ್ರಿಯೆ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

2024–25ರ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ 15 ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದ್ದು, ಶೇ 6.7ರಷ್ಟಾಗಿದೆ. ಕೃಷಿ ಮತ್ತು ಸೇವಾ ವಲಯದಲ್ಲಿನ ಚಟುವಟಿಕೆ ಕಡಿಮೆಯಾಗಿದ್ದರಿಂದ ಪ್ರಗತಿ ಇಳಿಕೆಯಾಗಿದೆ ಎಂದು ಸರ್ಕಾರದ ಅಂಕಿ–ಅಂಶಗಳು ಶುಕ್ರವಾರ ತಿಳಿಸಿತ್ತು.

ತಯಾರಿಕಾ ವಲಯದ ಸೂಚ್ಯಂಕ

2023

ಆಗಸ್ಟ್; 58.6

ಸೆಪ್ಟೆಂಬರ್; 57.5

ಅಕ್ಟೋಬರ್‌;55.5

ನವೆಂಬರ್; 56.0

ಡಿಸೆಂಬರ್‌; 54.9


2024

ಜನವರಿ;56.5

ಫೆಬ್ರುವರಿ; 56.9

ಮಾರ್ಚ್‌; 59.1

ಏಪ್ರಿಲ್‌; 58.8

ಮೇ; 57.5

ಜೂನ್‌; 58.3

ಜುಲೈ; 58.1

ಆಗಸ್ಟ್; 57.5

Highlights -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT