ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ವಲಯ: 18 ತಿಂಗಳ ದಾಖಲೆ ಮಟ್ಟದಲ್ಲಿ ಏರಿಕೆ

Last Updated 3 ಸೆಪ್ಟೆಂಬರ್ 2021, 18:35 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಆಗಸ್ಟ್‌ನಲ್ಲಿ 18 ತಿಂಗಳಲ್ಲಿನ ಅತ್ಯಂತ ವೇಗದ ಬೆಳವಣಿಗೆ ಸಾಧಿಸಿವೆ. ಸೇವಾ ಚಟುವಟಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ.

ಸೇವಾ ವಲಯದ ಚಟುವಟಿಕೆಗಳ ಮಟ್ಟವನ್ನು ತಿಳಿಸುವ ಇಂಡಿಯಾ ಸರ್ವಿಸಸ್ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಜುಲೈನಲ್ಲಿ 45.4ರಷ್ಟು ಇದ್ದಿದ್ದು ಆಗಸ್ಟ್‌ನಲ್ಲಿ 56.7ಕ್ಕೆ ಏರಿಕೆ ಕಂಡಿದೆ. ಸೇವಾ ವಲಯದ ಚಟುವಟಿಕೆಗಳು ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಚೇತರಿಕೆ ಕಂಡುಕೊಂಡಿವೆ.

50 ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸೂಚ್ಯಂಕ ಇದ್ದರೆ ಅದನ್ನು ಚೇತರಿಕೆ ಎಂದು, 50ಕ್ಕಿಂತ ಕಡಿಮೆ ಇದ್ದರೆ ಅದನ್ನು ಕುಸಿತ ಎಂದು ಕರೆಯಲಾಗುತ್ತದೆ. ‘ಹೆಚ್ಚೆಚ್ಚು ಜನ ಕೋವಿಡ್ ಲಸಿಕೆ ‍‍ಪಡೆದುಕೊಳ್ಳುತ್ತಿರುವ ಕಾರಣ ಹಲವು ಕಂಪನಿಗಳು ಮತ್ತೆ ಕಾರ್ಯ ಆರಂಭಿಸಿವೆ, ಗ್ರಾಹಕರ ವಿಶ್ವಾಸ ಹೆಚ್ಚಾಗಿದೆ’ ಎಂದು ಐಎಚ್‌ಎಸ್‌ ಮರ್ಕಿಟ್ ಸಂಸ್ಥೆಯ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ.

ಸೇವಾ ವಲಯದ ಕಂಪನಿಗಳು ಆಗಸ್ಟ್‌ನಲ್ಲಿ ಸ್ವೀಕರಿಸಿದ ಹೊಸ ಕಾರ್ಯಾದೇಶಗಳ ಸಂಖ್ಯೆಯು ಜಾಸ್ತಿ ಆಗಿದೆ. ಆದರೆ ಹೊಸ ರಫ್ತು ವಹಿವಾಟಿನಲ್ಲಿ ಇಳಿಕೆ ಆಗಿದೆ. ‘ಮುಂದಿನ ದಿನಗಳು ಇನ್ನಷ್ಟು ಚೆನ್ನಾಗಿರಲಿವೆ. ನಿರ್ಬಂಧಗಳನ್ನು ತೆರವು ಮಾಡುವುದು ಮುಂದುವರಿದರೆ, ಕೋವಿಡ್‌ನ ಅಲೆಗಳನ್ನು ತಡೆಯಲು ಸಾಧ್ಯವಾದರೆ ಅರ್ಥ ವ್ಯವಸ್ಥೆಯ ಚೇತರಿಕೆಯು ಸ್ಥಿರವಾಗಿ ಇರಲಿದೆ ಎಂದು ಕಂಪನಿಗಳು ಹೇಳುತ್ತಿವೆ’ ಎಂದೂ ಡಿ ಲಿಮಾ ಹೇಳಿದ್ದಾರೆ.

ಆಗಸ್ಟ್‌ನಲ್ಲಿ ಸೇವಾ ವಲಯದ ಕಂಪನಿಗಳು ತಮ್ಮ ನೌಕರರ ಸಂಖ್ಯೆಯನ್ನು ಕಡಿತ ಮಾಡಿವೆ. ಆದರೆ ನೌಕರರ ಸಂಖ್ಯೆಯನ್ನು ಕಡಿತಗೊಳಿಸುವ ಪ್ರಮಾಣವು ಜನವರಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಕಡಿಮೆ ಇತ್ತು. ಇಂಧನ ದರ ಹೆಚ್ಚಾಗಿರುವುದು, ಸಾಗಾಟದ ಮೇಲಿನ ವೆಚ್ಚಗಳು ಜಾಸ್ತಿ ಆಗಿರುವುದು ತಮ್ಮ ವೆಚ್ಚಗಳನ್ನೂ ಹೆಚ್ಚಿಸಿವೆ ಎಂದು ಸೇವಾ ವಲಯದ ಕಂಪನಿಗಳು ಹೇಳಿವೆ. ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೇವಾ ವಲಯವು ತಯಾರಿಕಾ ವಲಯಕ್ಕಿಂತ ಹೆಚ್ಚಿನ ಸಾಧನೆ ತೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT