ಬೆಂಗಳೂರು: ದೇಶದ ವಿವಿಧ ವಲಯಗಳ ಬ್ಲೂಚಿಪ್ ಕಂಪನಿಗಳನ್ನು ಪ್ರತಿನಿಧಿಸುವ ನಿಫ್ಟಿ–50 ಸೂಚ್ಯಂಕವು ಈ ವರ್ಷದ ಕೊನೆಯಲ್ಲಿ 18 ಸಾವಿರ ಅಂಶಗಳ ಆಸುಪಾಸಿನಲ್ಲಿ ಇರಲಿದೆ ಎಂದು ಬ್ಯಾಂಕ್ ಆಫ್ ಅಮೆರಿಕ (ಬಿಆಫ್‌ಎ) ಗ್ಲೋಬಲ್ ರಿಸರ್ಚ್ ಸಂಸ್ಥೆಯು ಅಂದಾಜು ಮಾಡಿದೆ. ಇದು ನಿಫ್ಟಿ–50ರ ಈಗಿನ ಮಟ್ಟಕ್ಕಿಂತ ಶೇಕಡ 5.5ರಷ್ಟು ಹೆಚ್ಚು.
ಹೆಚ್ಚಿನ ಬಡ್ಡಿ ದರವು ಕಂಪನಿಗಳ ಲಾಭದ ಪ್ರಮಾಣದ ಮೇಲೆ ಪರಿಣಾಮ ಬೀರಲಿದೆ ಎಂದು ಸಂಸ್ಥೆಯು ಅಂದಾಜಿಸಿದೆ. ನಿಫ್ಟಿ–50 ಸೂಚ್ಯಂಕವು ಈ ವರ್ಷದಲ್ಲಿ ಅಂದಾಜು ಶೇಕಡ 6ರಷ್ಟು ಕುಸಿದಿದೆ. ಸೂಚ್ಯಂಕವು ಈ ವರ್ಷದಲ್ಲಿ 16 ಸಾವಿರದಿಂದ 18 ಸಾವಿರದ ನಡುವಿನ ಮಟ್ಟದಲ್ಲಿ ವಹಿವಾಟು ನಡೆಸಲಿದೆ. ಜಾಗತಿಕ ಮಟ್ಟದಲ್ಲಿನ ಬ್ಯಾಂಕಿಂಗ್ ಬಿಕ್ಕಟ್ಟು ಸೃಷ್ಟಿಸಿರುವ ಅನಿಶ್ಚಿತ ಪರಿಸ್ಥಿತಿಯು ಸೂಚ್ಯಂಕದ ಏರಿಕೆಯ ಮೇಲೆ ಪರಿಣಾಮ ಉಂಟುಮಾಡಲಿದೆ.
ಅಮೆರಿಕದಲ್ಲಿ ಅನುಸರಿಸುತ್ತಿರುವ ಬಿಗಿ ಹಣಕಾಸು ನೀತಿ, ಬಿಸಿಗಾಳಿಯಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಬೇಡಿಕೆ ಚೇತರಿಕೆಯ ಮೇಲೆ ಆಗುವ ಪರಿಣಾಮ, ನಗರ ಪ್ರದೇಶಗಳಲ್ಲಿ ಬೇಡಿಕೆಯು ಗರಿಷ್ಠ ಮಟ್ಟವನ್ನು ತಲುಪುತ್ತಿರುವುದು ಹಾಗೂ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಾಗುತ್ತಿರುವುದು ದೇಶದ ಕಂಪನಿಗಳ ವರಮಾನದ ಮೇಲೆ ಪರಿಣಾಮ ಉಂಟುಮಾಡಬಹುದು ಎಂದು ಸಂಸ್ಥೆಯ ವಿಶ್ಲೇಷಕ ಅಮಿಶ್ ಶಾ ಅಂದಾಜಿಸಿದ್ದಾರೆ.
ದೂರಸಂಪರ್ಕ, ಐ.ಟಿ. ವಲಯದಲ್ಲಿ ಗಳಿಕೆಯು ಕಡಿಮೆ ಪ್ರಮಾಣದಲ್ಲಿ ಇರಬಹುದು. ಹಣಕಾಸು, ಸಿಮೆಂಟ್, ಉಕ್ಕು ಮತ್ತು ಆಟೊಮೊಬೈಲ್ ವಲಯಗಳಲ್ಲಿ ಗಳಿಕೆ ಹೆಚ್ಚಿರಬಹುದು ಎಂದು ಅವರು ಅಂದಾಜಿಸಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶದ ಮಾರುಕಟ್ಟೆಗಳಿಂದ ಹಣ ಹಿಂಪಡೆಯುವ ಗತಿಯು ನಿಧಾನವಾಗಬಹುದು. ₹ 1.65 ಲಕ್ಷ ಕೋಟಿ ಬಂಡವಾಳವು ಪಿಂಚಣಿ ನಿಧಿ, ಭವಿಷ್ಯ ನಿಧಿ, ವಿಮಾ ಹೂಡಿಕೆ ಹಾಗೂ ಎಸ್‌ಐಪಿಗಳ ಮೂಲಕ ಲಾರ್ಜ್ ಕ್ಯಾಪ್ ಕಂಪನಿಗಳ ಕಡೆ ಹರಿದುಬರಬಹುದು ಎಂದು ಅವರು ನಿರೀಕ್ಷಿಸಿದ್ದಾರೆ.
ಆರ್ಥಿಕ ಹಿಂಜರಿತ ಎದುರಾದರೂ ಭಾರತದ ಅರ್ಥ ವ್ಯವಸ್ಥೆಯು ಉತ್ತಮವಾಗಿ ಇರಲಿದೆ. ಅಲ್ಲದೆ, ಅಮೆರಿಕದ ಆರ್ಥಿಕ ವ್ಯವಸ್ಥೆಗಿಂತ ಹೆಚ್ಚು ವೇಗವಾಗಿ ಪುಟಿದೇಳಲಿದೆ ಎಂದು ಸಂಸ್ಥೆ ಅಂದಾಜು ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.