ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ರಂಗನಾಥ್ ರಾಜೀನಾಮೆ

Last Updated 18 ಆಗಸ್ಟ್ 2018, 11:40 IST
ಅಕ್ಷರ ಗಾತ್ರ

ಮುಂಬೈ: ಇನ್ಫೊಸಿಸ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಸ್ಥಾನಕ್ಕೆ ಎಂ.ಡಿ. ರಂಗನಾಥ್ ರಾಜೀನಾಮೆ ನೀಡಿದ್ದಾರೆ.

ರಂಗನಾಥ್ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಷೇರುಮಾರುಕಟ್ಟೆಗೆ ಇನ್ಫೊಸಿಸ್‌ ತಿಳಿಸಿದೆ. ಅಲ್ಲದೆ, ಈ ವರ್ಷ ನವೆಂಬರ್ 16ರ ವರೆಗೆ ರಂಗನಾಥ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಈಗಿನಿಂದಲೇ ಹೊಸ ಸಿಎಫ್‌ಒಗೆ ಹುಡುಕಾಟ ಆರಂಭಿಸುವುದಾಗಿ ತಿಳಿಸಿದೆ.

‘ನಾನು ಸಿಎಫ್‌ಒ ಆಗಿ ಅಧಿಕಾರದಲ್ಲಿ ಇದ್ದ ಮೂರು ವರ್ಷಗಳಲ್ಲಿ ಸಂಸ್ಥೆಯು ಅತ್ಯಂತ ಕಷ್ಟದ ಸಂದರ್ಭದಲ್ಲಿತ್ತು. ಆಗ ಉತ್ತಮ ಹಣಕಾಸು ಸಾಧನೆ ನೀಡಲು ಸಾಧ್ಯವಾಯಿತು. ಹಣಕಾಸು ವರದಿಗಳಲ್ಲಿ ಗರಿಷ್ಠ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ವಿಶ್ವದರ್ಜೆಯ ಹಣಕಾಸು ತಂಡವನ್ನೂ ರಚಿಸಲಾಯಿತು. ಮಾತ್ರವಲ್ಲ, ಸಂಸ್ಥೆಯ ಸ್ಪರ್ಧಾತ್ಮಕ ಸ್ಥಾನವನ್ನು ಇನ್ನಷ್ಟು ಬಲಪಡಿಸುವ ಮೂಲಕ ಷೇರುದಾರರ ಮೌಲ್ಯ ವೃದ್ಧಿಸುವಂತೆ ಮಾಡಲಾಗಿದೆ. ಇವೆಲ್ಲವೂ ನನಗೆ ಹೆಮ್ಮೆಯ ವಿಷಯವಾಗಿವೆ’ ಎಂದು ರಂಗನಾಥ್‌ ಅವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಹೇಳಿದ್ದಾರೆ.

‘ನನಗೆ ಸಹಕಾರ ನೀಡಿದ ಆಡಳಿತ ಮಂಡಳಿ, ಹಣಕಾಸು ತಂಡದಲ್ಲಿನ ಸಹೋದ್ಯೋಗಿಗಳಿಗೆ ಹಾಗೂ ನನ್ನ ಅಧಿಕಾರಾವಧಿಯಲ್ಲಿ ಸಂಪೂರ್ಣವಾಗಿ ಬೆಂಬಲ ನೀಡಿದ ಷೇರುದಾರರಿಗೂಧನ್ಯವಾದ ಹೇಳಲು ಬಯಸುತ್ತೇನೆ. ಸಂಸ್ಥೆಯ ವ್ಯವಸ್ಥಾಪಕ ತಂಡಕ್ಕೆ ನಾನು ಶುಭಕೋರುತ್ತಾ ಸಂಸ್ಥೆಯಾಚೆಗೆ ನನಗಿರುವ ಅವಕಾಶಗಳನ್ನು ಹುಡುಕಿಕೊಂಡು ಹೊರಟ್ಟಿದ್ದೇನೆ’ ಎಂದಿದ್ದಾರೆ.

‘ಸಂಸ್ಥೆಯ ಆರ್ಥಿಕ ಸ್ಥಿತಿಗೆ ಹೊಸ ದಿಕ್ಕನ್ನು ನೀಡುವಲ್ಲಿ ನಾನು ಮತ್ತು ರಂಗ (ರಂಗನಾಥ್‌) ಕೆಲವು ತ್ರೈಮಾಸಿಕಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಸಂಸ್ಥೆಯ ವಹಿವಾಟನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ಸ್ಥಿರವಾದ ಆರ್ಥಿಕ ಫಲಿತಾಂಶ ನೀಡುವ ಅವರ ಸಾಮರ್ಥ್ಯ ಮೆಚ್ಚುವಂತಹದ್ದಾಗಿದೆ. ಸಿಎಫ್‌ಒ ಆಗಿ ಪ್ರಮುಖ ಪಾತ್ರ ವಹಿಸಿರುವುದಷ್ಟೇ ಅಲ್ಲದೆ, ಸಂಸ್ಥೆಗೆ ಉತ್ತಮನಾಯಕತ್ವವನ್ನೂ ನೀಡಿದ್ದಾರೆ’ ಎಂದು ಸಿಇಒ ಸಲೀಲ್‌ ಪಾರೇಖ್‌ ಹೇಳಿದ್ದಾರೆ.

2015ರಲ್ಲಿ ರಾಜೀವ್‌ ಬನ್ಸಲ್‌ ಅವರು ರಾಜೀನಾಮೆ ನೀಡಿದ ಬಳಿಕ ರಂಗನಾಥನ್‌ ಅವರು ಸಿಎಫ್‌ಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.ಸಲಹೆ, ಹಣಕಾಸು, ಕಾರ್ಯತಂತ್ರ, ಗಂಡಾಂತರ ನಿರ್ವಹಣೆ ಹಾಗೂ ವಿಲೀನ ಮತ್ತು ಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಂಗನಾಥ್ ರಾಜೀನಾಮೆಯೊಂದಿಗೆ, ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ನೇಮಕ ಮಾಡಿದ ಏಳು ತಿಂಗಳುಗಳಲ್ಲೇ ಮತ್ತೊಬ್ಬ ಹಿರಿಯ ಅಧಿಕಾರಿ ರಾಜೀನಾಮೆ ನೀಡಿದಂತಾಗಿದೆ. ಸಿಇಒ ಸ್ಥಾನಕ್ಕೆ ವಿಶಾಲ್ ಸಿಕ್ಕಾ ಅವರು 2017ರ ಆಗಸ್ಟ್‌ನಲ್ಲಿ ರಾಜೀನಾಮೆ ನೀಡಿದ್ದರು. ನಂತರ ಸಲೀಲ್‌ ಎಸ್‌. ಪಾರೇಖ್‌ ಅವರನ್ನು ಈ ವರ್ಷ ಜನವರಿಯಲ್ಲಿ ನೂತನ ಸಿಇಒ ಆಗಿ ನೇಮಕ ಮಾಡಲಾಗಿತ್ತು.

‘ನನ್ನ ವಿರುದ್ದದ ಆಧಾರರಹಿತ, ಸುಳ್ಳಿನ, ದುರುದ್ದೇಶದಿಂದ ಕೂಡಿದ ವೈಯಕ್ತಿಕ ಆರೋಪಗಳಿಂದ ಬೇಸತ್ತು ಸಂಸ್ಥೆ ತೊರೆಯುವ ನಿರ್ಧಾರಕ್ಕೆ ಬಂದಿರುವೆ’ ಎಂದು ರಾಜೀನಾಮೆ ನಿರ್ಧಾರ ಪ್ರಕಟಿಸುವ ವೇಳೆ ಸಿಕ್ಕಾ ಹೇಳಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು. ಸಂಸ್ಥೆಯ ಸಹ ಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ನಡೆಯುತ್ತಿದ್ದ ಬೋರ್ಡರೂಂ ಕಲಹ ಬಹಿರಂಗವಾಗಿತ್ತು.

ತುಂಬಲಾರದ ನಷ್ಟ: ಮೂರ್ತಿ

ರಂಗನಾಥ್‌ ಅವರು ರಾಜೀನಾಮೆ ನೀಡಿರುವುದು ಸಂಸ್ಥೆಗೆ ತುಂಬಲಾರದ ನಷ್ಟ ಎಂದು ಇನ್ಫೊಸಿಸ್‌ ಸಹ ಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

‘ಭಾರತದಲ್ಲಿನ ಒಬ್ಬ ಅತ್ಯುತ್ತಮ ಸಿಎಫ್ಒ ಮತ್ತು ವಿರಳ ವ್ಯಕ್ತಿ ರಂಗನಾಥ್‌ ಎಂದು ಮೂರ್ತಿ ಬಣ್ಣಿಸಿದ್ದಾರೆ.

ಷೇರುದಾರರು, ಗ್ರಾಹಕರು, ವಿತರಕರ ತಂಡ, ಉದ್ಯೋಗಿಗಿಗಳು... ಹೀಗೆ ಸಂಸ್ಥೆಯಲ್ಲಿ ಇರುವ ಪ್ರತಿಯೊಬ್ಬರ ಮಹತ್ವವನ್ನೂ ಅರಿತಿದ್ದರು.ಉತ್ತಮ ಸಮಾಜ ನಿರ್ಮಾಣಕ್ಕೆ ಅನುಸರಿಸಬೇಕಾದ ನೈತಿಕ ಜವಾಬ್ದಾರಿಗಳ ಅರಿವೂ ಅವರಿಗಿತ್ತು’ ಎಂದು ಹೇಳಿದ್ದಾರೆ.

‘ಕಳೆದ ಐದು ವರ್ಷಗಳಲ್ಲಿ ಸಮಪರ್ಕ ರೀತಿಯಲ್ಲಿ ವೆಚ್ಚ ನಿರ್ವಹಣೆ ಮಾಡುವ ಮೂಲಕಸಂಸ್ಥೆಯ ಬಗ್ಗೆಹೂಡಿಕೆದಾರರಲ್ಲಿ ಇರುವ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಸವಾಲಿನ ಸಂದರ್ಭದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗಿದೆ. ಹಣಕಾಸು ವಿಷಯದಲ್ಲಿನ ತಜ್ಞತೆ, ಎಂದಿಗೂ ಕುಗ್ಗದ ವಿನಯವಂತಿಕೆ, ಯೋಜನೆಗಳನ್ನು ದೋಷರಹಿತವಾಗಿ ಜಾರಿಗೊಳಿಸುವ ಜಾಣತನ ಅವರನ್ನು ಒಬ್ಬಅನುಕರಣೀಯ ನಾಯಕನಾಗಿ ರೂಪಿಸಿದೆ. ಸಂಸ್ಥೆ ಆಸ್ತಿಯಾಗಿದ್ದರು’ ಎಂದು ಗುಣಗಾನ ಮಾಡಿದ್ದಾರೆ.

****

‘18 ವರ್ಷಗಳವರೆಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಸಂಸ್ಥೆಗೆ ಕೃತಜ್ಞ. ಹೊಸ ಕ್ಷೇತ್ರಗಳಲ್ಲಿ ವೃತ್ತಿಪರ ಅವಕಾಶಗಳ ಹುಡುಕಾಟ ಆರಂಭಿಸಲು ನಿರ್ಧರಿಸಿದ್ದೇನೆ.’
– ಎಂ.ಡಿ. ರಂಗನಾಥ್‌, ಇನ್ಫೊಸಿಸ್‌ ಸಿಎಫ್‌ಒ

‘ಇನ್ಫೊಸಿಸ್‌ ಪ್ರಗತಿ ಮತ್ತು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 18 ವರ್ಷಗಳ ಅವಧಿಯಲ್ಲಿ ಅವರಲ್ಲಿದ್ದ ನಾಯಕತ್ವದ ಗುಣಗಳನ್ನು ಕಂಡಿದ್ದೇನೆ’
– ನಂದನ್‌ ನಿಲೇಕಣಿ, ಇನ್ಫೊಸಿಸ್‌ ಆಡಳಿತ ಮಂಡಳಿ ಅಧ್ಯಕ್ಷ

‘ಮುಂದಿನ ಕೆಲವೇ ತಿಂಗಳುಗಳಲ್ಲಿ ರಂಗ ಅವರು ಉತ್ತಮ ಸ್ಥಾನಕ್ಕೇರುವ ವಿಶ್ವಾಸವಿದೆ. ಸಂಸ್ಥೆಗೆ ನೀಡಿರುವ ಕೊಡುಗೆಗಾಗಿ ಧನ್ಯವಾದ ಸೂಚಿಸುತ್ತೇನೆ. ಮುಂದಿನ ಹಾದಿ ಶುಭವಾಗಿರಲೆಂದು ಹಾರೈಸುತ್ತೇನೆ’
– ಸಲೀಲ್‌ ಪಾರೇಖ್‌, ಇನ್ಫೊಸಿಸ್‌ ಸಿಇಒ

ಇನ್ನಷ್ಟು ಸುದ್ದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT