ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ತಯಾರಿಕಾ ವಲಯದ ಚಟುವಟಿಕೆ

Last Updated 4 ಏಪ್ರಿಲ್ 2023, 6:51 IST
ಅಕ್ಷರ ಗಾತ್ರ

ನವದೆಹಲಿ: ತಯಾರಿಕಾ ವಲಯದ ಚಟುವಟಿಕೆಗಳು ಮಾರ್ಚ್‌ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟ ತಲುಪಿವೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ ಹೇಳಿದೆ. ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಫೆಬ್ರುವರಿಯಲ್ಲಿ 55.3 ಇದ್ದಿದ್ದು ಮಾರ್ಚ್‌ನಲ್ಲಿ 56.4ಕ್ಕೆ ಏರಿಕೆ ಆಗಿದೆ.

ಬೇಡಿಕೆ ಉತ್ತಮ ಸ್ಥಿತಿಯಲ್ಲಿ ಇರುವುದು ಹಾಗೂ ವೆಚ್ಚದ ಒತ್ತಡ ಕಡಿಮೆ ಆಗಿರುವುದರ ಜೊತೆಗೆ ತಯಾರಿಕೆ ಮತ್ತು ಹೊಸ ಯೋಜನೆಗಳು ತ್ವರಿತವಾಗಿ ಹೆಚ್ಚಾಗುತ್ತಿವೆ. ಹೀಗಾಗಿ, ವಲಯದ ಚಟುವಟಿಕೆಗಳು ಈ ಪ್ರಮಾಣದ ಬೆಳವಣಿಗೆ ಕಂಡಿವೆ ಎಂದು ಅದು ತಿಳಿಸಿದೆ.

ಭಾರತದ ಉತ್ಪನ್ನಗಳಿಗೆ ಮಾರ್ಚ್‌ನಲ್ಲಿ ಭಾರಿ ಬೇಡಿಕೆ ಕಂಡುಬಂದಿದೆ. ಇದರಿಂದಾಗಿ ತಯಾರಿಕೆಯು ತ್ವರಿತವಾಗಿ ಏರಿಕೆ ಆಗಿದೆ. ಕಂಪನಿಗಳು ತಮ್ಮ ದಾಸ್ತಾನು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತಿವೆ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ತಿಳಿಸಿದ್ದಾರೆ.

ಪೂರೈಕೆ ವ್ಯವಸ್ಥೆ ಮತ್ತು ಕಚ್ಚಾ ಸಾಮಗ್ರಿಗಳ ಲಭ್ಯತೆಯಲ್ಲಿ ಸುಧಾರಣೆ ಕಂಡುಬಂದಿರುವುದರಿಂದ ಮಾರ್ಚ್‌ನಲ್ಲಿ ತಯಾರಿಕಾ ವೆಚ್ಚದಲ್ಲಿನ ಏರಿಕೆಯು ಎರಡೂವರೆ ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.

ವೆಚ್ಚದ ಹೊರೆಯಲ್ಲಿ ಫೆಬ್ರುವರಿಯಿಂದ ಮಾರ್ಚ್‌ವರೆಗೆ ಯಾವುದೇ ಬದಲಾವಣೆ ಆಗಿಲ್ಲ ಎಂದು ಶೇ 96ರಷ್ಟು ಕಂಪನಿಗಳು ಹೇಳಿವೆ. ವಹಿವಾಟಿನ ಪ್ರಮಾಣವು ಅತ್ಯಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹೀಗಾಗಿ ಕಂಪನಿಗಳು ಮಾರ್ಚ್‌ನಲ್ಲಿ ಸಿಬ್ಬಂದಿ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT