ಕೋವಿಡ್ ಪರಿಣಾಮ: ಜೂನ್‌ನಲ್ಲಿ ಕುಗ್ಗಿದ ತಯಾರಿಕಾ ವಲಯ

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಜೂನ್ ತಿಂಗಳಿನಲ್ಲಿ ಕುಗ್ಗಿವೆ. ತಯಾರಿಕಾ ವಲಯದ ಚಟುವಟಿಕೆಗಳು ಕುಗ್ಗಿದ್ದು 11 ತಿಂಗಳ ಅವಧಿಯಲ್ಲಿ ಇದೇ ಮೊದಲು ಎಂದು ಐಎಚ್‌ಎಸ್ ಮರ್ಕಿಟ್ ಇಂಡಿಯಾ ಸಂಸ್ಥೆ ಹೇಳಿದೆ.
ಐಎಚ್‌ಎಸ್ ಮರ್ಕಿಟ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ಮೇನಲ್ಲಿ 50.8ರಷ್ಟು ಇತ್ತು. ಇದು ಜೂನ್‌ನಲ್ಲಿ 48.1ಕ್ಕೆ ಇಳಿಕೆ ಕಂಡಿದೆ. ಈ ಮೊದಲು 2020ರ ಜುಲೈನಲ್ಲಿ ವಲಯದ ಚಟುವಟಿಕೆಗಳ ಸೂಚ್ಯಂಕವು 50ಕ್ಕಿಂತಲೂ ಕಡಿಮೆ ಮಟ್ಟದಲ್ಲಿತ್ತು. ‘ಪಿಎಂಐ’ 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಸಕಾರಾತ್ಮಕ ಬೆಳವಣಿಗೆ ಎಂದು, 50ಕ್ಕಿಂತ ಕಡಿಮೆ ಇದ್ದರೆ ಕುಸಿತ ಎಂದು ಪರಿಗಣಿಸಲಾಗುತ್ತದೆ.
ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಅದನ್ನು ನಿಯಂತ್ರಿಸಲು ಕೈಗೊಂಡ ಕಠಿಣ ಸ್ವರೂಪದ ಕ್ರಮಗಳು ಬೇಡಿಕೆಯ ಮೇಲೆ ಪರಿಣಾಮ ಉಂಟುಮಾಡಿವೆ. ಜೊತೆಗೆ ಉದ್ಯೋಗ ನಷ್ಟವೂ ಸಂಭವಿಸಿದೆ ಎಂದು ಅದು ತಿಳಿಸಿದೆ.
ಬೇಡಿಕೆ, ತಯಾರಿಕೆ, ರಫ್ತು ಮತ್ತು ಖರೀದಿ ಪ್ರಮಾಣದಲ್ಲಿ ಇಳಿಕೆ ಆಗಿದೆ. ವಹಿವಾಟು ನಡೆಸುವ ಉತ್ಸಾಹವು ತಗ್ಗಿದ್ದು, ಉದ್ಯೋಗ ನಷ್ಟವು ಮುಂದುವರಿದಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಕೋವಿಡ್–19 ನಿರ್ಬಂಧಗಳಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಸರಕುಗಳಿಗೆ ಬೇಡಿಕೆ ತಗ್ಗಿದೆ. ಹೊಸ ರಫ್ತು ಬೇಡಿಕೆಯು 10 ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಇಳಿಕೆ ಕಂಡಿದೆ. ತಯಾರಿಕಾ ವೆಚ್ಚವು ಜೂನ್‌ನಲ್ಲಿ ಇನ್ನಷ್ಟು ಹೆಚ್ಚಾಗಿದೆ. ರಾಸಾಯನಿಕ, ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳು, ವಿದ್ಯುತ್, ಲೋಹ ಮತ್ತು ಪ್ಲಾಸ್ಟಿಕ್ ದರ ಹೆಚ್ಚಾಗಿದೆ. ಈ ಹೆಚ್ಚುವರಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ. ಸರಕು ತಯಾರಕರು ಸತತ 10ನೇ ತಿಂಗಳಿನಲ್ಲಿಯೂ ಬೆಲೆ ಏರಿಕೆ ಮಾಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.