ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಸು ತಗ್ಗಿದ ತಯಾರಿಕಾ ಚಟುವಟಿಕೆ

Published 3 ಜನವರಿ 2024, 14:36 IST
Last Updated 3 ಜನವರಿ 2024, 14:36 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ತಯಾರಿಕಾ ವಲಯದ ಬೆಳವಣಿಗೆಯು ಡಿಸೆಂಬರ್‌ನಲ್ಲಿ 18 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.

ಕನಿಷ್ಠ ಹಣದುಬ್ಬರದ ಹೊರತಾಗಿಯೂ ಕಾರ್ಖಾನೆಯ ಆರ್ಡರ್‌ಗಳು ಮತ್ತು ತಯಾರಿಕೆಯ ಬೆಳವಣಿಗೆಯು ಮಂದಗತಿಯಲ್ಲಿ ಇರುವುದೇ ಇಳಿಕೆಗೆ ಕಾರಣವಾಗಿದೆ ಎಂದು ಸಂಸ್ಥೆಯ ವರದಿ ತಿಳಿಸಿದೆ.

ಸುಮಾರು 400 ತಯಾರಕರಿಗೆ ಕಳುಹಿಸಲಾದ ಪ್ರಶ್ನಾವಳಿಗಳಲ್ಲಿ ನಮೂದಾಗಿರುವ ಪ್ರತಿಕ್ರಿಯೆ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ತಯಾರಿಕಾ ವಲಯದ ಬೆಳವಣಿಗೆ ಬಗ್ಗೆ ತಿಳಿಸುವ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್ ಇಂಡೆಕ್ಸ್‌ (ಪಿಎಂಐ) ನವೆಂಬರ್‌ನಲ್ಲಿ 56 ಇತ್ತು. ಡಿಸೆಂಬರ್‌ನಲ್ಲಿ 54.9ಕ್ಕೆ ಇಳಿಕೆ ಕಂಡಿದೆ.

ಈ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಸಕಾರಾತ್ಮಕ ಬೆಳವಣಿಗೆ ಎಂದು ಕರೆಯಲಾಗುತ್ತದೆ. 50ಕ್ಕಿಂತಲೂ ಕೆಳಗಿನ ಮಟ್ಟದಲ್ಲಿ ಇದ್ದರೆ ನಕಾರಾತ್ಮಕ ಎಂದು ಪರಿಗಣಿಸಲಾಗುತ್ತದೆ. 

ಸತತ ಹದಿನೆಂಟು ತಿಂಗಳಿನಿಂದಲೂ ಒಟ್ಟಾರೆ ಸಕಾರಾತ್ಮಕವಾಗಿಯೇ ಮುಂದುವರಿದಿದ್ದ ತಯಾರಿಕಾ ಬೆಳವಣಿಗೆಯು ಡಿಸೆಂಬರ್‌ನಲ್ಲಿ ಇಳಿಕೆಯಾಗಿದೆ.

ಬೆಳವಣಿಗೆಯ ವೇಗದಲ್ಲಿ ನಷ್ಟವಾದರೂ ತಯಾರಿಕಾ ಕ್ಷೇತ್ರದ ವಿಸ್ತರಣೆ ದೃಢವಾಗಿದೆ. ಏಷ್ಯಾ, ಯುರೋಪ್‌, ಮಧ್ಯಪ್ರಾಚ್ಯ ಮತ್ತು ಉತ್ತರ ಅಮೆರಿಕದಲ್ಲಿನ ಕಂಪನಿಗಳು ಉತ್ತಮ ಗಳಿಕೆ ಕಂಡಿವೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT