ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಸೇವಾ ವಲಯದ ಚಟುವಟಿಕೆ

Last Updated 4 ಜನವರಿ 2023, 11:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಡಿಸೆಂಬರ್‌ನಲ್ಲಿ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿವೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.

ಮಾರುಕಟ್ಟೆ ಸ್ಥಿತಿಯು ಅನುಕೂಲಕರವಾಗಿ ಇರುವುದು ಹಾಗೂ ಹೊಸ ವಹಿವಾಟುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಅದು ತಿಳಿಸಿದೆ.

ಸೇವಾ ವಲಯದ ಚಟುವಟಿಕೆಗಳನ್ನು ತಿಳಿಸುವ ಪಿಎಂಐ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ನವೆಂಬರ್‌ನಲ್ಲಿ 56.4ರಷ್ಟು ಇದ್ದಿದ್ದು ಡಿಸೆಂಬರ್‌ನಲ್ಲಿ 58.5ಕ್ಕೆ ಏರಿಕೆ ಆಗಿದೆ. ಇದು 2022ರ ಮಧ್ಯಭಾಗದ ನಂತರದಲ್ಲಿ ಕಂಡುಬಂದಿರುವ ಅತ್ಯಂತ ವೇಗದ ಬೆಳವಣಿಗೆ.

ಡಿಸೆಂಬರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ಸೃಷ್ಟಿಯಾಗಿವೆ. ಕಂಪನಿಗಳು 2023ರಲ್ಲಿ ತಮ್ಮ ವಹಿವಾಟಿನ ಬೆಳವಣಿಗೆಯ ಬಗ್ಗೆ ಹೆಚ್ಚಿನ ಆಶಾವಾದ ಹೊಂದಿವೆ. ಬೆಳವಣಿಗೆಯಲ್ಲಿ ಏರಿಕೆ ಕಂಡುಬರಲಿದೆ ಎಂದು ಶೇಕಡ 31ರಷ್ಟು ಕಂಪನಿಗಳು ಹೇಳಿದ್ದರೆ, ಇಳಿಕೆ ಕಾಣಲಿದೆ ಎನ್ನುವುದು ಶೇ 2ರಷ್ಟು ಕಂಪನಿಗಳ ನಿರೀಕ್ಷೆಯಾಗಿದೆ ಎಂದು ಎಸ್‌ ಅ್ಯಂಡ್‌ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ.

ಕೆಲಸಗಾರರ ಮೇಲೆ ಮಾಡುತ್ತಿರುವ ವೆಚ್ಚ ಹೆಚ್ಚಾಗುತ್ತಿರುವುದು, ವಿದ್ಯುತ್‌, ಆಹಾರ ಮತ್ತು ಸಾಗಣೆ ವೆಚ್ಚದಲ್ಲಿ ಆಗುತ್ತಿರುವ ಏರಿಕೆಯಿಂದಾಗಿ ಕಂಪನಿಗಳ ವೆಚ್ಚವು ಡಿಸೆಂಬರ್‌ನಲ್ಲಿ ಇನ್ನಷ್ಟು ಹೆಚ್ಚಾಗಿದೆ.

ತಯಾರಿಕೆ ಮತ್ತು ಸೇವಾ ವಲಯಗಳ ಒಟ್ಟು ಬೆಳವಣಿಗೆಯನ್ನು ಸೂಚಿಸುವ ಕಂಪೊಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ ನವೆಂಬರ್‌ನಲ್ಲಿ 56.7ರಷ್ಟು ಇದ್ದಿದ್ದು, ಡಿಸೆಂಬರ್‌ನಲ್ಲಿ 59.4ಕ್ಕೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT