ಸೋಮವಾರ, ಜುಲೈ 4, 2022
25 °C

ಇಂಡಿಗೊ ಸಹಸಂಸ್ಥಾಪಕ ರಾಕೇಶ್‌ ಗಂಗ್ವಾಲ್‌ ರಾಜೀನಾಮೆ; ಷೇರು ವಿಕ್ರಯಕ್ಕೆ ನಿರ್ಧಾರ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂಡಿಗೊ ಸಹಸಂಸ್ಥಾಪಕರಾದ ರಾಕೇಶ್‌ ಗಂಗ್ವಾಲ್‌ ಅವರು ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ವಿಮಾನ ಸಂಸ್ಥೆಯಲ್ಲಿರುವ ಪಾಲುದಾರಿಕೆಯನ್ನು ಮುಂದಿನ ಐದು ವರ್ಷಗಳಲ್ಲಿ ಕಡಿತಗೊಳಿಸಲು ಉದ್ದೇಶಿಸಿದ್ದಾರೆ ಎಂದು ಇಂಡಿಗೊದ ಮಾತೃ ಸಂಸ್ಥೆ ಇಂಟರ್‌ಗ್ಲೋಬ್‌ ಏವಿಯೇಷನ್‌ ಶುಕ್ರವಾರ ತಿಳಿಸಿದೆ.

ಕಾರ್ಯನಿರ್ವಾಹಕೇತರ ನಿರ್ದೇಶಕ ರಾಕೇಶ್‌ ಗಂಗ್ವಾಲ್‌ ಮತ್ತು ಅವರ ಕುಟುಂಬವು ಇಂಟರ್‌ಗ್ಲೋಬ್‌ ಏವಿಯೇಷನ್‌ನಲ್ಲಿ ಶೇಕಡ 36.61ರಷ್ಟು ಪಾಲು ಹೊಂದಿದ್ದರೆ, ಮತ್ತೊಬ್ಬ ಸಹಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಹುಲ್‌ ಭಾಟಿಯಾ ಹಾಗೂ ಅವರ ಕುಟುಂಬವು ಶೇಕಡ 37.8ರಷ್ಟು ಪಾಲುದಾರಿಕೆ ಹೊಂದಿದ್ದಾರೆ.

ಕಂಪನಿ ಆಡಳಿತದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತರುವಂತೆ ರಾಕೇಶ್‌ ಗಂಗ್ವಾಲ್‌ ಪ್ರಸ್ತಾಪ ಮುಂದಿಟ್ಟ ನಂತರದಲ್ಲಿ ಗಂಗ್ವಾಲ್‌ ಮತ್ತು ರಾಹುಲ್‌ ಭಾಟಿಯಾ ತಿಕ್ಕಾಟ ಶುರುವಾಗಿದೆ. 2020ಕ್ಕೂ ಮುಂಚಿನಿಂದ ಇಬ್ಬರೂ ಸಹಸಂಸ್ಥಾಪಕರ ನಡುವೆ ಜಟಾಪಟಿ ನಡೆದಿದೆ.


ರಾಹುಲ್‌ ಭಾಟಿಯಾ ಮತ್ತು ರಾಕೇಶ್‌ ಗಂಗ್ವಾಲ್‌

ಸಾರ್ವಜನಿಕ ವಹಿವಾಟಿಗೆ ತೆರೆದುಕೊಂಡಿರುವ ಇಂಟರ್‌ಗ್ಲೋಬ್‌ ಕಂಪನಿಯ ಷೇರುಗಳನ್ನು ಖರೀದಿಸಲು ಸಹಸಂಸ್ಥಾಪಕರಿಗೆ ಅಡ್ಡಿಯಾಗಿರುವ ಕಾರ್ಪೊರೇಟ್‌ ಆಡಳಿತ ವ್ಯವಸ್ಥೆಯ ನಿಯಮಗಳಲ್ಲಿ ಬದಲಾವಣೆ ತರುವಂತೆ ಗಂಗ್ವಾಲ್‌ ಪಟ್ಟು ಹಿಡಿದಿದ್ದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಂಪನಿಯ ಷೇರುದಾರರು ನಿಯಮಗಳಲ್ಲಿ ಬದಲಾವಣೆ ತರಲು ಸಮ್ಮತಿ ಸೂಚಿಸಿದರು. ಆ ಮೂಲಕ ಸಹಸಂಸ್ಥಾಪಕರು ಷೇರುಗಳನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡುವುದು ಅಥವಾ ವರ್ಗಾಯಿಸುವುದು ಸಾಧ್ಯವಾಗಿದೆ.

'ನಾನು 15 ವರ್ಷಕ್ಕೂ ಹೆಚ್ಚು ಅವಧಿಯಿಂದ ಕಂಪನಿಯ ಷೇರುದಾರನಾಗಿದ್ದೇನೆ, ಸಹಜವಾಗಿಯೇ ಷೇರು ವಿಕ್ರಯಗೊಳಿಸುವ ಬಗ್ಗೆ ಒಂದಲ್ಲಾ ಒಂದು ದಿನ ಯೋಚಿಸಬೇಕಾಗುತ್ತದೆ,' ಎಂದು ಗಂಗ್ವಾಲ್‌ ಆಡಳಿತ ಮಂಡಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಕೇಶ್‌ ಗಂಗ್ವಾಲ್‌ ಅವರು ಯುನೈಟೆಡ್‌ ಏರ್‌ಲೈನ್ಸ್‌ ಹಾಗೂ ಯು.ಎಸ್‌. ಏರ್‌ವೇಸ್‌ನಲ್ಲಿ ಹಲವು ವರ್ಷಗಳು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು