ವಿಶ್ವಬ್ಯಾಂಕ್‌ ಅಧ್ಯಕ್ಷ ಹುದ್ದೆಗೆ ಇಂದ್ರಾ ನೂಯಿ?

7
ಆಯ್ಕೆ ಪ್ರಕ್ರಿಯೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ಪಾತ್ರಕ್ಕೆ ಟೀಕೆ

ವಿಶ್ವಬ್ಯಾಂಕ್‌ ಅಧ್ಯಕ್ಷ ಹುದ್ದೆಗೆ ಇಂದ್ರಾ ನೂಯಿ?

Published:
Updated:
Prajavani

ನ್ಯೂಯಾರ್ಕ್‌: ವಿಶ್ವಬ್ಯಾಂಕ್‌ನ ಅಧ್ಯಕ್ಷ ಹುದ್ದೆಗೆ, ಪೆಪ್ಸಿಕೊದ ಮಾಜಿ ಸಿಇಒ ಆಗಿರುವ ಭಾರತದ ಸಂಜಾತೆ ಇಂದ್ರಾ ನೂಯಿ (63) ಅವರ ಹೆಸರೂ ಕೇಳಿ ಬರುತ್ತಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಭಾವಿ ಪುತ್ರಿ ಇವಾಂಕಾ ಟ್ರಂಪ್‌ ಅವರು ನೂಯಿ ಅವರ ಹೆಸರನ್ನು ತೇಲಿ ಬಿಟ್ಟಿದ್ದಾರೆ. ಬ್ಯಾಂಕ್‌ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಇವಾಂಕಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಟ್ರಂಪ್‌ ಆಡಳಿತವು ಒಂದು ವೇಳೆ ನೂಯಿ ಅವರನ್ನು ಆಯ್ಕೆ ಮಾಡಿದರೆ, ಅದನ್ನು ಇಂದ್ರಾ ಅವರು ಒಪ್ಪಿಕೊಳ್ಳುವರೆ ಎನ್ನುವುದು ಸದ್ಯಕ್ಕೆ ಖಚಿತಪಟ್ಟಿಲ್ಲ. ನೂಯಿ ಅವರು 12 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಪೆಪ್ಸಿಕೊ ಸಂಸ್ಥೆಯನ್ನು ತೊರೆದಿದ್ದರು.

ವಿಶ್ವಬ್ಯಾಂಕ್‌ನ ಉನ್ನತ ಹುದ್ದೆ ನೇಮಕ ಪ್ರಕ್ರಿಯೆಯಲ್ಲಿ ಸದ್ಯಕ್ಕೆ ಮುಂಚೂಣಿಯಲ್ಲಿ ಇರುವವರು, ಟ್ರಂಪ್‌ ಅವರು ತಮ್ಮ ಆಯ್ಕೆಯನ್ನು ಅಂತಿಮಗೊಳಿಸುತ್ತಿದ್ದಂತೆ ತೆರೆಮರೆಗೆ ಸರಿಯಲಿದ್ದಾರೆ.

ವಿಶ್ವಬ್ಯಾಂಕ್, ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಹಿಂದಿನ ವಾರವೇ ಚಾಲನೆ ನೀಡಿದೆ. ಬ್ಯಾಂಕ್‌ನಲ್ಲಿ ಅಮೆರಿಕವು ಅತಿ ಹೆಚ್ಚಿನ ಪ್ರಮಾಣದ ಪಾಲು ಬಂಡವಾಳ ಹೊಂದಿರುವುದರಿಂದ ಅಧ್ಯಕ್ಷ ಟ್ರಂಪ್‌ ಅವರು ಬ್ಯಾಂಕ್‌ನ ಅಧ್ಯಕ್ಷ ಹುದ್ದೆಗೆ
ತಮ್ಮ ಅಭ್ಯರ್ಥಿಯ ಹೆಸರನ್ನು ಸೂಚಿಸುತ್ತಾರೆ. ಬ್ಯಾಂಕ್‌ನ ನಿರ್ದೇಶಕ ಮಂಡಳಿಯು ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸುತ್ತದೆ.

ವಿಶ್ವಸಂಸ್ಥೆಯಲ್ಲಿನ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಅವರ ಹೆಸರೂ ಅಧ್ಯಕ್ಷ ಹುದ್ದೆಗೆ ಕೇಳಿ ಬರುತ್ತಿದೆ. 2024ರ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ದೇಶಿಸಿರುವ ಹ್ಯಾಲೆ, ಈ ಬಗ್ಗೆ ಹೆಚ್ಚಿನ ಒಲವು ತೋರಿಸಿಲ್ಲ. ಕೆಲ ಸಮಯದವರೆಗೆ ಖಾಸಗಿ ವಲಯದಲ್ಲಿ ಕೆಲಸ ಮಾಡಲು ಉದ್ದೇಶಿಸಿದ್ದಾರೆ.

ಅಂತರರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದ ಟ್ರೆಸರಿ ಉಪ ಕಾರ್ಯದರ್ಶಿ ಡೇವಿಡ್‌ ಮಿಲ್ಪಾಟಸ್‌ ಅವರೂ ಸ್ಪರ್ಧೆಯಲ್ಲಿ ಇದ್ದಾರೆ.

ಜಿಮ್‌ ಯಾಂಗ್‌ ಕಿಮ್‌ ರಾಜೀನಾಮೆ: ಫೆಬ್ರುವರಿಯಲ್ಲಿ ಹುದ್ದೆ ತೊರೆಯುವುದಾಗಿ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಜಿಮ್‌ ಯಾಂಗ್‌ ಕಿಮ್‌ ಅವರು ಈಗಾಗಲೇ ಪ್ರಕಟಿಸಿದ್ದಾರೆ.

ಖಾಸಗಿ ಮೂಲಸೌಕರ್ಯ ಹೂಡಿಕೆ ಸಂಸ್ಥೆ ಸೇರಲು ಅವರು ಬಯಸಿದ್ದಾರೆ. ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಮೂರು ವರ್ಷಗಳು ಬಾಕಿ ಇರುವಾಗಲೇ ಅವರು ತಮ್ಮ ಈ ಹಠಾತ್‌ ನಿರ್ಧಾರ ಪ್ರಕಟಿಸಿದ್ದಾರೆ.

ಟೀಕೆ: ಕಿಮ್‌ ಅವರ ಉತ್ತರಾಧಿಕಾರಿ ನೇಮಿಸಲು ರಚಿಸಲಾಗಿರುವ ಸಮಿತಿಗೆ ಇವಾಂಕಾ ಅವರನ್ನು ನೇಮಕ ಮಾಡಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

ಅಂತರರಾಷ್ಟ್ರೀಯ ಆರ್ಥಿಕ ವಿಷಯಗಳಲ್ಲಿ ಅಮೆರಿಕ ಅಧ್ಯಕ್ಷರ ಮಗಳು  ಭಾಗಿಯಾಗುವುದರಿಂದ ಹಿತಾಸಕ್ತಿ ಸಂಘರ್ಷಕ್ಕೆ
ಎಡೆಮಾಡಿಕೊಡಲಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !