ಸೋಮವಾರ, ಮೇ 16, 2022
27 °C
ಕೈಗಾರಿಕಾ ಉತ್ಪಾದನಾ ಕುಸಿತದೊಂದಿಗೆ ಕೊನೆಗೊಂಡ ಹಣಕಾಸು ವರ್ಷ

ಕೈಗಾರಿಕಾ ತಯಾರಿಕಾ ಸೂಚ್ಯಂಕ: 21 ತಿಂಗಳ ಕನಿಷ್ಠ ಮಟ್ಟಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾರ್ಚ್‌ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 0.1ರಷ್ಟು ಕುಸಿತ ಕಂಡು 21 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಹಿಂದಿನ ಹಣಕಾಸು ವರ್ಷವು, ಕೈಗಾರಿಕಾ ಉತ್ಪಾದನಾ  ಕುಸಿತ ದೊಂದಿಗೆ ಕೊನೆಗೊಂಡಿದೆ. ತಯಾರಿಕಾ ವಲಯದಲ್ಲಿನ ಗಮನಾರ್ಹ ಪ್ರಮಾಣದ ಕುಸಿತವೇ ಇದಕ್ಕೆ ಕಾರಣ ಎನ್ನುವುದು ಸರ್ಕಾರದ ಅಧಿಕೃತ ಅಂಕಿ ಅಂಶಗಳಿಂದ ದೃಢಪಟ್ಟಿದೆ.

ಕೈಗಾರಿಕಾ ಚಟುವಟಿಕೆಗೆ ಸಂಬಂಧಿಸಿದ ಎಲ್ಲ ವಲಯಗಳು ಕಳಪೆ ಸಾಧನೆ ಪ್ರದರ್ಶಿಸಿವೆ. ಚುನಾವಣಾ ಫಲಿತಾಂಶದ ಅನಿಶ್ಚಿತತೆಯ ಕಾರಣಕ್ಕೆ ಹೊಸ ಬೇಡಿಕೆಗಳು ನಿಧಾನಗೊಂಡಿವೆ. ವಾಹನ ಮಾರಾಟ ಹಾಗೂ ಉಕ್ಕು, ಸಿಮೆಂಟ್‌ ಸೇರಿದಂತೆ ಇತರ ಮೂಲಸೌಕರ್ಯ ವಲಯಗಳಲ್ಲಿ ಪ್ರಗತಿ ಕುಸಿತ ದಾಖಲಿಸಿದೆ.

ಕೈಗಾರಿಕಾ ತಯಾರಿಕಾ ಸೂಚ್ಯಂಕದಲ್ಲಿ (ಐಐಪಿ) ಅಳೆಯಲಾಗುವ ಕೈಗಾರಿಕೆಗಳ ಉತ್ಪಾದನೆಯು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 5.3ರಷ್ಟು ಹೆಚ್ಚಳಗೊಂಡಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಈ ವರ್ಷದ ಫೆಬ್ರುವರಿ ತಿಂಗಳಲ್ಲಿನ ‘ಐಐಪಿ’ ಬೆಳವಣಿಗೆಯನ್ನೂ ಈ ಹಿಂದಿನ ಶೇ 0.1ರ ಬದಲಿಗೆ ಶೇ 0.07ಕ್ಕೆ ಪರಿಷ್ಕರಿಸಲಾಗಿದೆ. ‘ಐಐಪಿ’ನ ಹಿಂದಿನ ಕನಿಷ್ಠ ಮಟ್ಟವು 2017ರ ಜೂನ್‌ನಲ್ಲಿ ಶೇ 0.3ರಷ್ಟು ದಾಖಲಾಗಿತ್ತು.

ವಾರ್ಷಿಕ ಆಧಾರದಲ್ಲಿ, ಐಐಪಿ ಬೆಳವಣಿಗೆಯು 2018–19ನೆ ಹಣಕಾಸು ವರ್ಷದಲ್ಲಿ ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇ 3.6ಕ್ಕೆ ಇಳಿದಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು ಶೇ 4.4ರಷ್ಟಿತ್ತು.

‘ಐಐಪಿ’ಯಲ್ಲಿ ಶೇ 77.63ರಷ್ಟು ಪಾಲು ಹೊಂದಿರುವ ತಯಾರಿಕಾ ವಲಯವು ಮಾರ್ಚ್‌ ತಿಂಗಳಲ್ಲಿ ಶೇ 0.4ರಷ್ಟು ಕುಸಿತ ಕಂಡಿದೆ. ವರ್ಷದ ಹಿಂದೆ ಇದು ಶೇ 5.7ರಷ್ಟು ಏರಿಕೆ ದಾಖಲಿಸಿತ್ತು. ಭಾರಿ ಯಂತ್ರೋಪಕರಣ (ಶೇ 8.7), ವಿದ್ಯುತ್‌ ವಲಯ (ಶೇ 2.2) ಮತ್ತು ಗಣಿಗಾರಿಕೆ ವಲಯವು ಶೇ 0.8ರಷ್ಟು ಕುಸಿತ ಕಂಡಿದೆ.

ವಿವಿಧ ಕೈಗಾರಿಕಾ ವಲಯಗಳಿಗೆ ಸಂಬಂಧಿಸಿ ಹೇಳುವುದಾದರೆ,23 ಕೈಗಾರಿಕಾ ಸಮೂಹಗಳ ಪೈಕಿ 12 ವಲಯಗಳು ಮಾರ್ಚ್‌
ತಿಂಗಳಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು