ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಒ: 2022ರಲ್ಲಿ ₹1.5 ಲಕ್ಷ ಕೋಟಿ ಸಂಗ್ರಹ ನಿರೀಕ್ಷೆಯಲ್ಲಿ ಕಂಪನಿಗಳು

Last Updated 28 ಡಿಸೆಂಬರ್ 2021, 11:13 IST
ಅಕ್ಷರ ಗಾತ್ರ

ನವದೆಹಲಿ: ಹೊಸ ವರ್ಷದಲ್ಲಿಯೂ ಪ್ರಾಥಮಿಕ ಷೇರು ಮಾರುಕಟ್ಟೆಯ (ಐಪಿಒ) ಚಟುವಟಿಕೆಯು ಉತ್ಸಾಹದಿಂದ ಕೂಡಿರಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಂಪನಿಗಳು ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ₹1.5 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

2021ರಲ್ಲಿ ಐಪಿಒ ಮೂಲಕ ದಾಖಲೆಯ ಮಟ್ಟದಲ್ಲಿ ಬಂಡವಾಳ ಸಂಗ್ರಹ ಆಗಿದೆ. ಕೊರೊನಾ ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ಪರಿಣಾಮ ಉಂಟುಮಾಡಿದ್ದರೂ ಮಾರುಕಟ್ಟೆಯಲ್ಲಿ ಹೆಚ್ಚುವರಿ ನಗದು ಲಭ್ಯ ಇರುವುದು ಮತ್ತು ಸಣ್ಣ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಾಗಿರುವುದರಿಂದ ಈ ವರ್ಷದಲ್ಲಿ ಒಟ್ಟಾರೆ ₹ 1.20 ಲಕ್ಷ ಕೋಟಿ ಬಂಡವಾಳ ಸಂಗ್ರಹ ಆಗಿದೆ.

‘ಹಣದುಬ್ಬರ ನಿಯಂತ್ರಿಸಲು ಜಾಗತಿಕ ಮಟ್ಟದಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದಾಗಿ ಐಪಿಒ ಉತ್ಸಾಹ ತುಸು ತಗ್ಗಬಹುದಾದರೂ ಸಂಪೂರ್ಣ ಕುಸಿತ ಕಾಣುತ್ತದೆ ಎಂದು ನಾವು ನಿರೀಕ್ಷಿಸುವುದಿಲ್ಲ. ಸಾಂಕ್ರಾಮಿಕಕ್ಕೆ ಸಂಬಂದಿಸಿದಂತೆ ಯಾವುದೇ ಬದಲಾವಣೆಗಳು ಆದರೂ ಅದು ಐಪಿಒ ಚಟುವಟಿಕೆಯ ಮೇಲೆ ಸ್ವಲ್ಪ ಮಟ್ಟಿಗಿನ ಅಡ್ಡಿಯನ್ನಂತೂ ಉಂಟುಮಾಡಲಿದೆ’ ಎಂದು ಈಕ್ವಿರಸ್‌ ವ್ಯವಸ್ಥಾಪಕ ನಿರ್ದೇಶಕ ವೆಂಕಟರಾಘವನ್‌ ಎಸ್‌. ಹೇಳಿದ್ದಾರೆ.

2022ರಲ್ಲಿ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒ ನಡೆಯಬೇಕಿರುವುದರಿಂದ ಒಟ್ಟಾರೆ ಬಂಡವಾಳ ಸಂಗ್ರಹವು ₹1.25 ಲಕ್ಷ ಕೋಟಿಗಳಿಂದ ₹1.5 ಲಕ್ಷ ಕೋಟಿಗಳವರೆಗೆ ಇರುವ ಅಂದಾಜು ಮಾಡಬಹುದು ಎಂದಿದ್ದಾರೆ.

ಕೇಂದ್ರೀಯ ಬ್ಯಾಂಕ್‌ಗಳು ಎಲ್ಲಿಯವರೆಗೆ ಹೊಂದಾಣಿಕೆಯ ನಿಲುವು ಅನುಸರಿಸುತ್ತವೆಯೋ ಅಲ್ಲಿಯವರೆಗೆ ಷೇರು ಮಾರುಕಟ್ಟೆಯ ಮೌಲ್ಯವು ಸ್ಥಿರವಾಗಿ ಇರಲಿದ್ದು, ಐಪಿಒ ಮಾರುಕಟ್ಟೆಗೆ ವಿಶ್ವಾಸ ತುಂಬಲಿದೆ ಎಂದು ಷೇರು ವಹಿವಾಟು ವೇದಿಕೆ ‘ರೆಕರ್‌ ಕ್ಲಬ್‌’ನ ಸ್ಥಾಪಕ ಏಕಲವ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT