ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಆರ್‌ಸಿಟಿಸಿ: ಆಸ್ಕ್‌ದಿಶಾ ಚಾಟ್‌ಬೋಟ್

Last Updated 16 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ರೈಲುಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಒಂದು ಸಿಹಿ ಸುದ್ದಿ ಬಂದಿದೆ. ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (IRCTC) ಪ್ರಯಾಣಿಕರ ಅನುಕೂಲಕ್ಕಾಗಿ ಚಾಟ್‌ಬೋಟ್ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಈ ಸೌಲಭ್ಯ ಭಾರತೀಯ ರೈಲ್ವೆಯ ಐಆರ್‌ಸಿಟಿಸಿ ಅಂತರ್ಜಾಲ ತಾಣದಲ್ಲಿ ಮಾತ್ರ ಲಭ್ಯ ಇದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಚಾಟ್‌ಬೋಟ್ ವಿನ್ಯಾಸ ಮಾಡಲಾಗಿದ್ದು ಇದಕ್ಕೆ ’ಆಸ್ಕ್‌ದಿಶಾ’ ಎಂದು ಹೆಸರಿಡಲಾಗಿದೆ.

ಪ್ರಯಾಣಿಕರಿಗೆ ಒದಗಿಸುವ ಸೇವೆಗಳನ್ನು ಮತ್ತಷ್ಟು ಸುಧಾರಿಸುವ ಮತ್ತು ಸರಳೀಕರಣಗೊಳಿಸುವ ಉದ್ದೇಶದಿಂದ ‘ಆಸ್ಕ್‌ದಿಶಾ’ ಚಾಟ್‌ಬೋಟ್ ಪರಿಚಯಿಸಲಾಗಿದೆ. ಪ್ರಯಾಣಿಕರು ಚಾಟ್‌ಬೋಟ್ ಮೂಲಕ ಸಂವಹನ ನಡೆಸಬಹುದು. ಏನಾದರೂ ಸಮಸ್ಯೆ ಅಥವಾ ತೊಂದರೆ ಉಂಟಾದಲ್ಲಿ ದೂರು ಕೊಡಬಹುದು.

ಶೌಚಾಲಯ ಸ್ವಚ್ಛತೆ, ಆಹಾರ, ನೀರು, ವೈದ್ಯರ ಸೇವೆಗಳಿಗೂ ಚಾಟ್‌ಬೋಟ್ ಮೂಲಕ ಸಂಪರ್ಕಿಸಬಹುದು. ಪ್ರವಾಸಿ ಸ್ಥಳಗಳು, ಮುಂಬರುವ ರೈಲು ನಿಲ್ದಾಣಗಳು ಮತ್ತು ಹೋಟೆಲ್‌ಗಳ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯಬಹುದಾಗಿದೆ. ಈ ಸೇವೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುವುದು ಇದರ ಇನ್ನೊಂದು ವಿಶೇಷತೆಯಾಗಿದೆ.

ಇನ್ನು ಮುಂದೆ ಸಮಸ್ಯೆಗಳ ಬಗ್ಗೆ ದೂರು ಕೊಟ್ಟು ರೈಲ್ವೆ ಅಧಿಕಾರಿಗಳಿಂದ ಉತ್ತರಕ್ಕೆ ಕಾಯುವ ಪ್ರಮೇಯವೇ ರೈಲ್ವೆ ಪ್ರಯಾಣಿಕರಿಗೆ ಇರುವುದಿಲ್ಲ. ಪ್ರಯಾಣಿಕರ ಸಮಸ್ಯೆಗಳಿಗೆ ಚಾಟ್‌ಬೋಟ್ ಮೂಲಕ ತ್ವರಿತವಾಗಿ ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಮಾಹಿತಿಗೆ: www.irctc.co.in

ಜಿಯೊ,ವಾಟ್ಸ್‌ಆ್ಯಪ್‌ನಿಂದ ಜಾಗೃತಿ ಅಭಿಯಾನ
ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್ ಹಾಗೂ ದೇಶದ ದೊಡ್ಡ ಟೆಲಿಕಾಂ ಸಂಸ್ಥೆ ಜಿಯೊ ಕಂಪನಿ ಜಂಟಿಯಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಶಿಕ್ಷಣ ಅಭಿಯಾನ ಆರಂಭಿಸಿವೆ.

ಈ ಅಭಿಯಾನ ಅಕ್ಟೋಬರ್ 9ರಿಂದ ಆರಂಭವಾಗಿದೆ. ಈ ಅಭಿಯಾನ ಜಿಯೊ ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ.

ಬಳಕೆದಾರರು ಸುರಕ್ಷಿತ ಹಾಗೂ ಜವಾಬ್ದಾರಿಯುತವಾಗಿ ಯಾವ ರೀತಿ ವಾಟ್ಸ್ಆ್ಯಪ್ ಬಳಕೆ ಮಾಡಬೇಕು ಎಂದು ಜಾಗೃತಗೊಳಿಸುವುದೇ ಈ ಶಿಕ್ಷಣ ಅಭಿಯಾನದ ಆಶಯ. ಈಗಾಗಲೇ ಬಳಕೆಗೆ ಸಂಬಂಧಿಸಿದಂತೆ ವಿಡಿಯೊಗಳು, ಚಿತ್ರಗಳು ಮತ್ತು ಬರಹಗಳನ್ನು ಜಿಯೊ ಬಳಕೆದಾರರಿಗೆ ಕಳುಹಿಸಿಕೊಡಲಾಗುತ್ತಿದೆ. ಹಾಗೆಯೇ ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗುತ್ತಿದೆ. ಸುಳ್ಳು ಸುದ್ದಿ ಅಥವಾ ಸುಳ್ಳು ಸಂದೇಶ ರವಾನೆ ಬಗ್ಗೆ ಬಳಕೆದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ವಾಟ್ಸ್‌ಆ್ಯಪ್ ಹೇಳಿದೆ.

ಧ್ವನಿ ಮೂಲಕ ಸಕ್ಕರೆ ಪ್ರಮಾಣ ತಿಳಿದುಕೊಳ್ಳಿ
ವೈದ್ಯಕೀಯ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಅಂಬ್ರೊಶಿಯಾ ಕಂಪನಿ ಧ್ವನಿ ಮೂಲಕ ರಕ್ತದಲ್ಲಿನ ಸಕ್ಕರೆ (ಗ್ಲೂಕೋಸ್) ಪ್ರಮಾಣ ಪರೀಕ್ಷಿಸುವ ಆ್ಯಪ್ ಅಭಿವೃದ್ಧಿಪಡಿಸಿದೆ. ಇನ್ನು ಮುಂದೆ ಮಧುಮೇಹಿ ರೋಗಿಗಳು ಕ್ಲಿನಿಕ್ ಅಥವಾ
ಲ್ಯಾಬೊರೇಟರಿಗಳಿಗೆ ತೆರಳಿ ಸಕ್ಕರೆ ಪ್ರಮಾಣ ತಿಳಿದುಕೊಳ್ಳುವ ಅವಶ್ಯಕತೆ ಇರುವುದಿಲ್ಲ, ಧ್ವನಿ ಸಂಜ್ಞೆಗಳಿಂದ ತಮ್ಮ ಸ್ಮಾರ್ಟ್‌ಫೋನ್ ಮೂಲಕ ಸಕ್ಕರೆ ಪ್ರಮಾಣವನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಇದಕ್ಕೆ ಬ್ಲೂಕಾನ್ ಆ್ಯಪ್ ಎಂದು ಹೆಸರಿಡಲಾಗಿದೆ.

ಈ ಸೇವೆ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಮಾದರಿಯಲ್ಲಿ ಲಭ್ಯವಿದೆ. ವಿಶೇಷತೆ ಏನೆಂದರೆ ಅಮೆಜಾನ್ ಅಲೆಕ್ಸಾದಲ್ಲೂ ಕೂಡ ಬ್ಲೂಕಾನ್ ಸೇರಿಸಲಾಗಿದೆ. ಇದು ವ್ಯಕ್ತಿಯ ಧ್ವನಿ ಸಂಜ್ಞೆ ಮತ್ತು ಎಎಫ್‌ಎಲ್ ಸೆನ್ಸರ್ ತಂತ್ರಜ್ಞಾನದ ಮೂಲಕ ಕೆಲಸ
ಮಾಡುತ್ತದೆ. ಇದಕ್ಕೆ ಸಿಜಿಎಂ (Continuous Glucose Monitoring) ತಂತ್ರಜ್ಞಾನ ಎಂದು ಸಹ ಕರೆಯಲಾಗುವುದು. ಈ ಬ್ಲೂಕಾನ್ ಆ್ಯಪ್ ಸಕ್ಕರೆ ಪ್ರಮಾಣವನ್ನು ಮಾಪನ ಮಾಡುವುದರ ಜೊತೆಗೆ ಅದರ ದತ್ತಾಂಶಗಳನ್ನು ದಾಖಲಿಸುತ್ತದೆ.

ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿರುವ ಬಳಕೆದಾರರು ಪ್ರತಿ ಐದು ನಿಮಿಷಕ್ಕೆ ಒಮ್ಮೆ ಪರೀಕ್ಷೆ ಮಾಡಿಕೊಂಡು ಸಕ್ಕರೆ ಪ್ರಮಾಣದ ಏರಿಳಿತವನ್ನು ಗಮನಿಸಬಹುದು. ಮಾಹಿತಿಗೆ: www.ambrosiasys.com ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.

ಹೊಸ ತಲೆಮಾರಿಗೆ ಸವೇರಾ ಆ್ಯಪ್
ಈ ತಲೆಮಾರಿನ ಯುವ ಪೀಳಿಗೆಗಾಗಿ ಸವೇರಾ ಆ್ಯಪ್ ಎಮೋಜಿಗಳು, ಅವತಾರ್ ಮತ್ತು ಸ್ಟಿಕ್ಕರ್‌ಗಳನ್ನು ಹೊತ್ತು ತಂದಿದೆ. ಸವೇರಾ ಅಪ್ಲಿಕೇಷನ್ ಮೂಲಕ ಬಳಕೆದಾರರು ತಮ್ಮ ಗುರುತು, ಭಾವನೆ ಮತ್ತು ಶುಭಾಶಯಗಳನ್ನು ಚಿತ್ರಗಳಲ್ಲಿ ವ್ಯಕ್ತಪಡಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಸವೇರಾ, ಯುವ ಸಮುದಾಯದ ಪ್ರೀತಿ ಮತ್ತು ಸಹಭಾಗಿತ್ವದ ಒಂದು ದೃಶ್ಯ ಭಾಷೆಯಾಗಿದೆ. ಪ್ರಸ್ತುತ ಈ ಸೇವೆ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಲಭ್ಯವಿದೆ. ಸವೇರಾದಲ್ಲಿ ವೈವಿಧ್ಯಮಯವಾದ ಅವತಾರ್‌ಗಳು, ಸ್ಟಿಕ್ಕರ್‌ಗಳು ಮತ್ತು ಎಮೋಜಿಗಳು ಇವೆ. ‘ದಿಲ್ ಕಿ ಬಾತ್, ಎಮೋಜಿ ಕೆ ಸಾತ್’ ಎಂಬ ಘೋಷ ವಾಕ್ಯದ ಅಡಿಯಲ್ಲಿ ಸವೇರಾ ಮಾರುಕಟ್ಟೆಗೆ ದಾಂಗುಡಿ ಇಟ್ಟಿದೆ.

ಲಿಂಗ, ಜನಾಂಗ, ವರ್ಗ, ಜಾತಿ, ಧರ್ಮ ಮುಂತಾದವುಗಳನ್ನು ಆಧರಿಸಿ ಜನರನ್ನು ವಿಭಜಿಸಲು ತಂತ್ರಜ್ಞಾನವನ್ನು ಬಳಸುವುದರ ಬದಲು, ಸವೇರಾ ನಮ್ಮ ನಡುವಿನ ಭಿನ್ನತೆಗಳನ್ನು ತೊಡೆದುಹಾಕುವಂತೆ ವಿನ್ಯಾಸ ಮಾಡಲಾಗಿದೆ. ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಸವೇರಾ ದೊರೆಯಲಿದೆ. ಐಒಎಸ್‍ ಮತ್ತು ಆಂಡ್ರಾಯ್ಡ್ ಮಾದರಿಗಳಲ್ಲಿ ಈ ಆ್ಯಪ್ ದೊರೆಯಲಿದೆ.
ಮಾಹಿತಿಗೆ: https://saveyra.com

ವೊಡಾಫೋನ್‌ ಸಖಿ
ದೂರಸಂಪರ್ಕ ಸೇವಾ ಸಂಸ್ಥೆ ವೊಡಾಫೋನ್‌ ಐಡಿಯಾ ಲಿಮಿಟೆಡ್ ಮಹಿಳೆಯರ ಸುರಕ್ಷತೆಗಾಗಿ ವೊಡಾಫೋನ್‌ ಸಖಿ ಎಂಬ ಸೌಲಭ್ಯ ಪ್ರಕಟಿಸಿದೆ. ತುರ್ತು ಸೇವೆಯ ಸಖಿ ಯೋಜನೆಯನ್ನು ವೋಡಾಪೋನ್ ಮಹಿಳಾ ಗ್ರಾಹಕರು ಮಾತ್ರ ಬಳಕೆ ಮಾಡಬಹುದು. ದೇಶದ ಎಲ್ಲಾ ಭಾಗಗಳಲ್ಲೂ ಈ ಯೋಜನೆ ಚಾಲ್ತಿಯಲ್ಲಿರುತ್ತದೆ.

ಏನಿದು ಸಖಿ ಯೋಜನೆ: ಮಹಿಳೆಯರು ತೊಂದರೆಗೆ ಸಿಲುಕಿದಾಗ ತುರ್ತು ಸೇವೆಯ ಸಖಿ ಯೋಜನೆಯನ್ನು ಬಳಸಿಕೊಳ್ಳಬಹುದು. ಇದರಲ್ಲಿ ಮೂರು ಮುಖ್ಯ ಸೇವೆಗಳಿವೆ. ಉದಾಹರಣೆಗೆ ಮಹಿಳೆಯೊಬ್ಬರು ತೊಂದರೆಗೆ ಸಿಲುಕಿದ್ದಾರೆ, ಅವರ ಬಳಿ ಇರುವ ಮೊಬೈಲ್‌ನಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲ ಹಾಗೂ ಇಂಟರ್ನೆಟ್ ಸಂಪರ್ಕವೂ ಇಲ್ಲ ಎಂದಿಟ್ಟುಕೊಳ್ಳಿ, ಇಂತಹ ಸಂದರ್ಭದಲ್ಲಿ ವೋಡಾಪೋನ್ ಸಖಿ ಸೇವೆ ನೆರವಿಗೆ ಬರುತ್ತದೆ.

ಕುಟುಂಬದವರು, ಗೆಳೆಯರು ಮತ್ತು ಆಪ್ತರು ಸೇರಿದಂತೆ ಹತ್ತು ಜನರಿಗೆ ತುರ್ತು ಕರೆ ಹೋಗುವುದರ ಜತೆಗೆ ಆ ಮಹಿಳೆ ಸಂಕಷ್ಟದಲ್ಲಿ ಸಿಲುಕಿರುವ ಸ್ಥಳದ ಮಾಹಿತಿಯೂ ರವಾನೆಯಾಗುತ್ತದೆ. ಶೂನ್ಯ ಬ್ಯಾಲೆನ್ಸ್ ಇದ್ದರೂ ಸಹಿತ ಹತ್ತು ನಿಮಿಷಗಳ ಕಾಲ ಉಚಿತವಾಗಿ ತುರ್ತು ಕರೆ ಮಾಡಬಹುದು. ಇದರ ಜತೆಗೆ ಇಂಟರ್ನೆಟ್ ಅನ್ನು ಉಚಿತವಾಗಿ ಬಳಸಬಹುದು. ತಮ್ಮ ವೈಯಕ್ತಿಕ ಫೋನ್‌ ಸಂಖ್ಯೆಗೆ ರಿಟೇಲ್ ಮಳಿಗೆಗಳ ಮೂಲಕ ರಿಚಾರ್ಜ್ ಮಾಡಿಕೊಳ್ಳಬಹುದು. ಈ ಸೇವೆ ಎಲ್ಲಾ ರೀತಿಯ ಸ್ಮಾರ್ಟ್‌ಫೋನ್ ಮತ್ತು ಫೀಚರ್‌ ಫೋನ್‌ಗಳಲ್ಲಿ ಲಭ್ಯವಿದೆ.
ಗೂಗಲ್ ಪ್ಲೇಸ್ಟೋರ್: Vodafone Sakhi

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT