ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಗುರುಗ್ರಾಮದ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳೆದ ಉದ್ಯಮಿ

ಐಟಿಸಿಗೆ ಶಕ್ತಿ ತುಂಬಿದ್ದ ದೇವೇಶ್ವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಐಟಿಸಿ ಸಂಸ್ಥೆಯ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದ ಕಾರ್ಪೊರೇಟ್‌ ದಿಗ್ಗಜ ವೈ.ಸಿ. ದೇವೇಶ್ವರ್‌ ಅವರು ಶನಿವಾರ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಪದ್ಮಭೂಷಣ ಪುರಸ್ಕೃತ 72 ವರ್ಷದ ದೇವೇಶ್ವರ್‌ ಅವರಿಗೆ ಪತ್ನಿ ಭಾರತಿ ದೇವೇಶ್ವರ್ ಮತ್ತು ಮಕ್ಕಳಾದ ಗೌರವ್‌ ಮತ್ತು ಗರಿಮಾ ಅವರು ಇದ್ದಾರೆ.

ಸಿಗರೇಟ್‌ ವಹಿವಾಟಿಗಷ್ಟೇ ಸೀಮಿತವಾಗಿದ್ದ ‘ಇಂಡಿಯಾ ಟೊಬ್ಯಾಕೊ ಕಂಪನಿ’ಯನ್ನು (ಐಟಿಸಿ) ದೇಶದ ಅತಿದೊಡ್ಡ ಬಹುಬಗೆಯ ವಹಿವಾಟಿನ ವಾಣಿಜ್ಯೋದ್ಯಮ ಸಂಸ್ಥೆಯನ್ನಾಗಿ ರೂಪಿದ ಶ್ರೇಯಸ್ಸು ಯೋಗೇಶ್‌ ಚಂದ್ರ ದೇವೇಶ್ವರ್ ಅವರಿಗೆ ಸಲ್ಲುತ್ತದೆ.

ಎಫ್‌ಎಂಸಿಜಿ, ಆತಿಥ್ಯ, ಐಟಿ ಮತ್ತು ಇತರೆ ವಲಯಗಳ ವಹಿವಾಟಿನಲ್ಲಿಯೂ ಕಂಪನಿಯ ಜನಪ್ರಿಯತೆಯನ್ನು ಉತ್ತುಂಗಕ್ಕೇರಿಸಿದ ಕೀರ್ತಿ ಇವರದ್ದು.

ಭಾರತದ ಕಾರ್ಪೊರೇಟ್‌ ವಲಯದಲ್ಲಿ ಒಂದೇ ಸಂಸ್ಥೆಯಲ್ಲಿ ಅತ್ಯಂತ ದೀರ್ಘ ಅವಧಿಯವರೆಗೆ ಉನ್ನತ ಹುದ್ದೆಯಲ್ಲಿದ್ದ ವಿಶೇಷ ಹೆಗ್ಗಳಿಕೆ ಇವರದ್ದು. ಟ್ರೈನಿಯಾಗಿ ಕೆಲಸಕ್ಕೆ ಸೇರಿದವರು ತಮ್ಮ ದೂರದೃಷ್ಟಿ, ಕಾರ್ಪೊರೇಟ್‌ ಕಾರ್ಯತಂತ್ರ ಮತ್ತು ಸಮಾಜಮುಖಿ ದೃಷ್ಟಿಕೋನದಿಂದ ಅಧ್ಯಕ್ಷಗಾದಿಯನ್ನೂ ಅಲಂಕರಿಸಿದ್ದರು. 

ದೇವೇಶ್ವರ್ ಅವರು ಅಧ್ಯಕ್ಷ ಹುದ್ದೆ ಅಲಂಕರಿಸಿದಾಗ ಕಂಪನಿ ಹಲವು ಸವಾಲಗಳನ್ನು ಎದುರಿಸುತ್ತಿತ್ತು. ಕಂಪನಿಯ ವಾರ್ಷಿಕ ವರಮಾನ ₹ 5,200 ಕೋಟಿಗಿಂತಲೂ ಕಡಿಮೆ ಇತ್ತು. ತೆರಿಗೆ ಪೂರ್ವ ಲಾಭ ₹ 452 ಕೋಟಿಗಳಷ್ಟಿತ್ತು. 2017–18ರಲ್ಲಿ ಕಂಪನಿಯ ನಿವ್ವಳ ಲಾಭ ₹ 44,330 ಕೋಟಿಗೆ ಏರಿಕೆಯಾಯಿತು. ನಿವ್ವಳ ಲಾಭ ₹ 11,223 ಕೋಟಿಗಳಿಗೆ ತಲುಪಿತು.

2017ರ ಫೆಬ್ರುವರಿ 5ರಿಂದ ಜಾರಿಗೆ ಬರುವಂತೆ ಕಂಪನಿಯು ಕಾರ್ಯನಿರ್ವಾಹಕ ಹುದ್ದೆಯಲ್ಲಿ ಬದಲಾವಣೆ ಜಾರಿಗೆ ತರಲಾಯಿತು. ಅದರಂತೆ, ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯನ್ನು ಅಧ್ಯಕ್ಷ ಮತ್ತು ಸಿಇಒ ಮಧ್ಯೆ ವಿಭಜಿಸಲಾಯಿತು. ಆಗ ದೇವೇಶ್ವರ್‌ ಅವರು ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಮುಂದುವರಿದರು. ಸಂಜೀವ್‌ ಪುರಿ ನೇತೃತ್ವದ ಕಾರ್ಯನಿರ್ವಾಹಕ ಮಂಡಳಿಗೆ ಉನ್ನತ ಮಟ್ಟದ ಸಲಹೆಗಳನ್ನು ನೀಡುವ ಕಾರ್ಯವನ್ನು ಮುಂದುವರಿಸಿದ್ದರು.

‘ಅವರ ನಾಯಕತ್ವದಲ್ಲಿ ಐಟಿಸಿಯು ಮೌಲ್ಯಯುತ ಮತ್ತು ಬಹುಬಗೆಯ ವಹಿವಾಟಿನ ವಾಣಿಜ್ಯೋದ್ಯಮ ಸಂಸ್ಥೆಯಾಗಿ ರೂಪುಗೊಂಡಿತು. ಎಫ್‌ಎಂಸಿಜಿ, ಹೋಟೆಲ್‌, ಪೇಪರ್‌ಬೋರ್ಡ್‌, ಪ್ಯಾಕೇಜಿಂಗ್‌ ಮತ್ತು ಕೃಷಿ ವಹಿವಾಟುಗಳು ಈ ಯಶಸ್ಸಿಗೆ ಕಾರಣವಾದವು’ ಎಂದು ಐಟಿಸಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ್‌ ಪುರಿ ಹೇಳಿದ್ದಾರೆ.

‘ಅವರ ಸಮಾಜಮುಖಿ ದೃಷ್ಟಿಕೋನದಿಂದಾಗಿ ಸುಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಐಟಿಸಿ ಕಂಪನಿ ಮೇಲ್ಪಂಕ್ತಿ ಹಾಕಿಕೊಡಲು ಸಾಧ್ಯವಾಯಿತು’ ಎಂದೂ ಪುರಿ ಅಭಿಪ್ರಾಯಪಟ್ಟಿದ್ದಾರೆ.

ಜವಾಬ್ದಾರಿಯುತ ಹುದ್ದೆಗಳು
* ಆರ್‌ಬಿಐನ ಆಡಳಿತ ಮಂಡಳಿಯ ನಿರ್ದೇಶಕ
* ನ್ಯಾಷನಲ್‌ ಫೌಂಡೇಷನ್‌ ಫಾರ್‌ ಕಾರ್ಪೊರೇಟ್‌ ಗವರ್ನೆನ್ಸ್‌ ಮತ್ತು ನ್ಯಾಷನಲ್‌ ಕೌನ್ಸಿಲ್‌ ಆಫ್‌ ಅಪ್ಲೈಡ್‌ ಇಕನಾಮಿಕ್‌ ರಿಸರ್ಚ್‌ನ ಸದಸ್ಯ
* ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ಮಂಡಳಿ ಸದಸ್ಯ
* ನ್ಯಾಷನಲ್‌ ಫುಡ್‌ ಪ್ರೊಸೆಸಿಂಗ್‌ ಡೆವಲಪ್‌ಮೆಂಟ್‌ ಕೌನ್ಸಿಲ್‌ನ ಸದಸ್ಯ
* ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಮಾಜಿ ಅಧ್ಯಕ್ಷ
* ಇಂಗ್ಲೆಂಡ್‌–ಭಾರತದ ಸಿಇಒ ವೇದಿಕೆ ಮತ್ತು ಅಮೆರಿಕ–ಭಾರತದ ಸಿಇಒ ವೇದಿಕೆ ಸದಸ್ಯ

ಸಾಧನೆಯ ಹಾದಿ
* 1947 ಫೆಬ್ರುವರಿ 4ರಂದು ಲಾಹೋರ್‌ನಲ್ಲಿ ಜನನ. ಐಐಟಿ ದೆಹಲಿ ಮತ್ತು ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ನಲ್ಲಿ ಉನ್ನತ ಪದವಿ
* 1968: ಐಟಿಸಿಯಲ್ಲಿ ಟ್ರೈನಿಯಾಗಿ ಉದ್ಯೋಗ ಆರಂಭ
* 1984 ಏಪ್ರಿಲ್‌ 11: ಆಡಳಿತ ಮಂಡಳಿ ನಿರ್ದೇಶಕರಾಗಿ ನೇಮಕ
* 1996 ಜನವರಿ 1: ಮುಖ್ಯ ಕಾರ್ಯನಿರ್ವಾಹಕ ಮತ್ತು ಅಧ್ಯಕ್ಷ ಹುದ್ದೆ
*  2017ರಲ್ಲಿ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಹುದ್ದೆಯಿಂದ ಕೆಳಗಿಳಿದರು. ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಕಂಪನಿಯಲ್ಲಿ ಮುಂದುವರಿಕೆ
1991–94: ಏರ್‌ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ
* 2011: ಪದ್ಮಭೂಷಣ 
* 2013: ಹಾರ್ವರ್ಡ್‌ ಬಿಸಿನೆಸ್‌ ರಿವ್ಯೂ ನಿಯತಕಾಲಿಕೆಯ ವಿಶ್ವದ ಪ್ರಮುಖ ಸಿಇಒಗಳ ಪಟ್ಟಿಯಲ್ಲಿ ದೇವೇಶ್ವರ್‌ ಅವರಿಗೆ 7ನೇ ಸ್ಥಾನ

**
ದೇಶದ ಉದ್ಯಮ ವಲಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ಪ್ರಯತ್ನದಿಂದಾಗಿ ಐಟಿಸಿ ಕಂಪನಿಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
-ನರೇಂದ್ರ ಮೋದಿ, ಪ್ರಧಾನಿ

**
ಉದ್ಯಮಿಯಾಗಿ ಸಂಸ್ಥೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ದರು. ಕಾರ್ಪೊರೇಟ್‌ ವೃತ್ತಿಪರತೆಯನ್ನು ಉತ್ತುಂಗಕ್ಕೇರಿಸಿದವರು.
-ಅರುಣ್‌ ಜೇಟ್ಲಿ, ಹಣಕಾಸು ಸಚಿವ

**
ದೇವೇಶ್ವರ್ ಅವರು ಕಾರ್ಪೊರೇಟ್‌ ಜಗತ್ತಿನ ದಿಗ್ಗಜ. ಉದ್ಯಮದ ಶ್ರೇಷ್ಠ ನಾಯಕ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

**
ಭಾರತದ ಉದ್ಯಮದ ಮಾರ್ಗದರ್ಶಕ. ಉದ್ಯಮದ ಸುಸ್ಥಿರ ಬೆಳವಣಿಗೆಯ ಬಗೆಗೆ ಅವರಿಗಿದ್ದ ಬದ್ಧತೆ ಮತ್ತು ಉತ್ಸಾಹ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ.
-ವಿಕ್ರಮ್‌ ಕಿರ್ಲೋಸ್ಕರ್‌, ಸಿಐಐ ಅಧ್ಯಕ್ಷ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು