ಮೇ ಅಂತ್ಯಕ್ಕೆ ಹರಾಜು ಪ್ರಕ್ರಿಯೆ ಪೂರ್ಣ: ಜೆಟ್‌ ಏರ್‌ವೇಸ್‌ ಮಾರಲು ನಿರ್ಧಾರ

ಮಂಗಳವಾರ, ಏಪ್ರಿಲ್ 23, 2019
31 °C
ಎಸ್‌ಬಿಐ ನಿರೀಕ್ಷೆ

ಮೇ ಅಂತ್ಯಕ್ಕೆ ಹರಾಜು ಪ್ರಕ್ರಿಯೆ ಪೂರ್ಣ: ಜೆಟ್‌ ಏರ್‌ವೇಸ್‌ ಮಾರಲು ನಿರ್ಧಾರ

Published:
Updated:
Prajavani

ನವದೆಹಲಿ:  ಜೆಟ್‌ ಏರ್‌ವೇಸ್‌ಗೆ ಹಣಕಾಸು ನೆರವು ನೀಡಿರುವ ಬ್ಯಾಂಕ್‌ಗಳ ಒಕ್ಕೂಟವು ವಿಮಾನಯಾನ ಸಂಸ್ಥೆಯನ್ನು ಬೇರೆಯವರಿಗೆ ಮಾರಾಟ ಮಾಡಲು ಉದ್ದೇಶಿಸಿವೆ.

₹ 1,500 ಕೋಟಿಗಳ ನೆರವು ನೀಡಿ 11.4 ಕೋಟಿ ಹೊಸ ಷೇರುಗಳ ಮೂಲಕ ಸಂಸ್ಥೆಯಲ್ಲಿ ಶೇ 51ರಷ್ಟು ಪಾಲು ಬಂಡವಾಳ ಹೊಂದಿರುವ ಎಸ್‌ಬಿಐ ನೇತೃತ್ವದಲ್ಲಿನ ಒಕ್ಕೂಟವು ಮುಂದಿನ ತಿಂಗಳು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಿದೆ.

ಪ್ರವರ್ತಕ ನರೇಶ್‌ ಗೋಯಲ್‌ ಅವರ ಪಾಲು ಬಂಡವಾಳವು ಶೇ 50ರಿಂದ ಶೇ 25ಕ್ಕೆ ಮತ್ತು ಅಬುಧಾಬಿಯ ಎತಿಹಾದ್‌ ಏರ್‌ವೇಸ್‌ನ ಪಾಲು ಶೇ 24 ರಿಂದ ಶೇ 12ಕ್ಕೆ ಇಳಿಯಲಿದೆ. ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹೂಡಿಕೆದಾರರು ಮುಂದೆ ಬರಲಿದ್ದಾರೆ. ಹೊಸ ಹೂಡಿಕೆದಾರರಿಗೆ ಸಂಸ್ಥೆಯನ್ನು ಮಾರಾಟ ಮಾಡುವ ಪ್ರಕ್ರಿಯೆಯು ಜೂನ್‌ ತ್ರೈಮಾಸಿಕದ ವೇಳೆಗೆ ಪೂರ್ಣಗೊಳ್ಳಲಿದೆ ಎನ್ನುವುದು ಬ್ಯಾಂಕ್‌ಗಳ ಒಕ್ಕೂಟದ ನಿರೀಕ್ಷೆಯಾಗಿದೆ.

‘ಜೂನ್‌ ತಿಂಗಳಿಗಿಂತ ಮುಂಚೆಯೇ, ಮೇ ಅಂತ್ಯದ ವೇಳೆಗೆ ಹೊಸ ಹೂಡಿಕೆದಾರರು ಜೆಟ್‌ ಏರ್‌ವೇಸ್‌ ಖರೀದಿಸಲಿದ್ದಾರೆ. ಖರೀದಿಗೆ ಮುಂದೆ ಬರುವವರಿಗೆ ಮಾರುಕಟ್ಟೆ ಮುಕ್ತವಾಗಿರುತ್ತದೆ. ಏಪ್ರಿಲ್‌ 9ರ ವೇಳೆಗೆ ಖರೀದಿಗೆ ಇಂಗಿತ ವ್ಯಕ್ತಪಡಿಸಬೇಕು. ನಂತರ  ಹರಾಜಿನಲ್ಲಿ ಭಾಗವಹಿಸಬೇಕಾಗುತ್ತದೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಹೇಳಿದ್ದಾರೆ.

‘ಖರೀದಿದಾರರಲ್ಲಿ ಹಣಕಾಸು ಹೂಡಿಕೆದಾರರು, ಎತಿಹಾದ್‌ ಸೇರಿದಂತೆ ಇತರ ವಿಮಾನಯಾನ ಸಂಸ್ಥೆಗಳೂ ಇರಬಹುದು. ಖರೀದಿ ಹರಾಜಿನಲ್ಲಿ ಭಾಗವಹಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು ಯಾರೊಬ್ಬರಿಗೂ ನಿರ್ಬಂಧ ಇರುವುದಿಲ್ಲ. ಸಂಸ್ಥೆಯ ಸ್ಥಾಪಕ ನರೇಶ್‌ ಗೋಯಲ್‌ ಅವರೂ ಭಾಗವಹಿಸಬಹುದಾಗಿದೆ’ ಎಂದು ಹೇಳಿದ್ದಾರೆ.

‘ಸಿಬ್ಬಂದಿ, ಸಂಸ್ಥೆಯ ಹಿತಾಸಕ್ತಿಯೇ ಮುಖ್ಯ’
‘ವಿಮಾನ ಯಾನ ಸಂಸ್ಥೆಯ ಮತ್ತು 22 ಸಾವಿರ ಸಿಬ್ಬಂದಿಯ ಹಿತಾಸಕ್ತಿ ರಕ್ಷಣೆಯೇ ನನಗೆ ಮುಖ್ಯವಾಗಿತ್ತು. ಒಟ್ಟಾರೆ ಸಂಸ್ಥೆಯ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ನಾನು ಅಧ್ಯಕ್ಷ ಹುದ್ದೆ ತೊರೆಯುವ ನಿರ್ಧಾರಕ್ಕೆ ಬಂದಿರುವೆ’ ಎಂದು ಸ್ಥಾಪಕ ನರೇಶ್‌ ಗೋಯಲ್‌ ಪ್ರತಿಕ್ರಿಯಿಸಿದ್ದಾರೆ. 1992ರ ಏ‍ಪ್ರಿಲ್‌ನಲ್ಲಿ ಅವರು ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಬ್ಯಾಂಕ್‌ಗಳ ನಿರ್ಧಾರಕ್ಕೆ ಜೇಟ್ಲಿ ಹರ್ಷ
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಜೆಟ್‌ ಏರ್‌ವೇಸ್‌ಗೆ ಸಂಬಂಧಿಸಿದಂತೆ ಕೈಗೊಂಡ ನಿರ್ಧಾರಕ್ಕೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ಇದರಲ್ಲಿ ಬ್ಯಾಂಕ್‌ಗಳ ಮತ್ತು ಸಾರ್ವಜನಿಕರ ಹಿತಾಸಕ್ತಿಯೂ ಅಡಗಿದೆ. ದೇಶಕ್ಕೆ ಹೆಚ್ಚೆಚ್ಚು ವಿಮಾನಗಳು ಮತ್ತು ವಿಮಾನಯಾನ ಸಂಸ್ಥೆಗಳ ಅಗತ್ಯ ಇದೆ. ಜೆಟ್‌ ಏರ್‌ವೇಸ್‌ನ ಸಮರ್ಪಕ ಕಾರ್ಯನಿರ್ವಹಣೆಯಿಂದ ಬ್ಯಾಂಕ್‌ಗಳು ತಮ್ಮ ಬಾಕಿ ವಸೂಲಿ ಮಾಡಬಹುದು. ಅವುಗಳ ನಿರ್ಧಾರ ಕಂಡು ನನಗೆ ಸಂತಸವಾಗಿದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !