ಜೆಟ್‌: ವಿದೇಶ ಸೇವೆ ಸ್ಥಗಿತ

ಶನಿವಾರ, ಏಪ್ರಿಲ್ 20, 2019
27 °C
ಬಿಡ್‌ ಸಲ್ಲಿಕೆಗೆ ಬ್ಯಾಂಕ್‌ನಲ್ಲಿ ಷೇರು ಅಡವು ಇಟ್ಟ ನರೇಶ್ ಗೋಯಲ್‌

ಜೆಟ್‌: ವಿದೇಶ ಸೇವೆ ಸ್ಥಗಿತ

Published:
Updated:
Prajavani

ಮುಂಬೈ: ತೀವ್ರ ಸ್ವರೂಪದ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಖಾಸಗಿ ವಿಮಾನ ಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ನ ಬಿಕ್ಕಟ್ಟು ಗುರುವಾರ ಉಲ್ಬಣಗೊಂಡಿದ್ದು, ತನ್ನೆಲ್ಲ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ.

ಗುತ್ತಿಗೆ ಬಾಡಿಗೆ ಪಾವತಿಸದ ಕಾರಣಕ್ಕೆ ದೇಶಿ ಸೇವೆಗೆ ಬಳಸುತ್ತಿದ್ದ ಇನ್ನೂ 10 ವಿಮಾನಗಳ ಹಾರಾಟವನ್ನು ಸಂಸ್ಥೆಯು ಕೈಬಿಟ್ಟಿದೆ. ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಶುಕ್ರವಾರದ ಹಾರಾಟವನ್ನು ರದ್ದುಪಡಿಸಲಾಗಿದೆ. ಸಂಸ್ಥೆಯ ಬಳಿ ಇದ್ದ ವಿಮಾನಗಳ ಪೈಕಿ ಮೂರು ನಾಲ್ಕಾಂಶದಷ್ಟು ವಿಮಾನಗಳ ಸೇವೆ ಸ್ಥಗಿತಗೊಂಡಂತಾಗಿದೆ.

ಪಾಲು ಬಂಡವಾಳ ಮಾರಾಟ: ಸಂಸ್ಥೆಯ ಪಾಲು ಬಂಡವಾಳವನ್ನು ಇತರರಿಗೆ ಮಾರಾಟ ಮಾಡಲು ಎಸ್‌ಬಿಐ ನೇತೃತ್ವದಲ್ಲಿನ ಬ್ಯಾಂಕ್‌ ಒಕ್ಕೂಟ ನಿರ್ಧರಿಸಿದೆ.

ಈಗಾಗಲೇ ಬಿಡ್‌ಗಳನ್ನು ಆಹ್ವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿ ಇದೆ. ಹರಾಜು ನಿಯಮಗಳ ಪ್ರಕಾರ, ಪಾಲು ಬಂಡವಾಳ ಮಾರಾಟದಲ್ಲಿ ಗೋಯಲ್‌ ಅವರೂ ಭಾಗವಹಿಸಲು ಅವಕಾಶ ಇದೆ.

ಸಂಸ್ಥೆಯ ಪಾಲು ಬಂಡವಾಳ ಖರೀದಿಸಲು ಗೋಯಲ್‌ ಅವರೂ ಆರಂಭಿಕ ಬಿಡ್‌ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಡ್‌ ಸಲ್ಲಿಕೆಯ ಗಡುವನ್ನು ಎಸ್‌ಬಿಐ ಕ್ಯಾಪ್ಸ್‌, ಈಗಾಗಲೇ  ಈ ತಿಂಗಳ 12ರವರೆಗೆ ಮುಂದೂಡಿದೆ.

‘ಹರಾಜು  ಪ್ರಕ್ರಿಯೆಯಲ್ಲಿ ಭಾಗವಹಿಸಲು ಯಾರೊಬ್ಬರಿಗೂ ನಿರ್ಬಂಧ ಇಲ್ಲ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.

ವಿಮಾನ ಯಾನ ಸಂಸ್ಥೆಯು ಸದ್ಯಕ್ಕೆ ಬ್ಯಾಂಕ್‌ಗಳಿಗೆ ₹ 8 ಸಾವಿರ ಕೋಟಿಗಳಷ್ಟು ಸಾಲ ಮರುಪಾವತಿಸಬೇಕಾಗಿದೆ.

ಸಂಸ್ಥೆಯು ಸದ್ಯಕ್ಕೆ ಎಸ್‌ಬಿಐ ನೇತೃತ್ವದಲ್ಲಿನ ಬ್ಯಾಂಕ್‌ ಒಕ್ಕೂಟದ ನಿಯಂತ್ರಣದಲ್ಲಿದೆ. ಹಣ ಪಾವತಿ ಮಾಡದ ಕಾರಣಕ್ಕೆ ಸಂಸ್ಥೆಯ
ಬಹುತೇಕ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.

ಗೋಯಲ್‌ ಷೇರು ಅಡಮಾನ
ಸಂಸ್ಥೆಯ ಸ್ಥಾಪಕ ನರೇಶ್‌ ಗೋಯಲ್‌ ಅವರು, ಸಾಲ ಪಡೆಯಲು ಸಂಸ್ಥೆಯಲ್ಲಿನ  ಶೇ 26ರಷ್ಟು ಷೇರುಗಳನ್ನು ಬ್ಯಾಂಕ್‌ನಲ್ಲಿ ಅಡಮಾನ ಇರಿಸಿದ್ದಾರೆ.

ಸಂಸ್ಥೆಯಲ್ಲಿನ ಪಾಲು ಬಂಡವಾಳ ಮಾರಾಟದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಉದ್ದೇಶಕ್ಕೆ ಪಡೆಯುವ ಸಾಲಕ್ಕೆ ಖಾತರಿಯಾಗಿ ತಮ್ಮ ಷೇರುಗಳನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಅಡಮಾನ ಇರಿಸಲು ಗೋಯಲ್‌ ಮುಂದಾಗಿದ್ದಾರೆ.

ಶೇ 26.01ರಷ್ಟು ‍ಪಾಲು ಬಂಡವಾಳದ 2.95 ಕೋಟಿ ಷೇರುಗಳನ್ನು ಗೋಯಲ್‌ ಅವರು ಬ್ಯಾಂಕ್‌ನಲ್ಲಿ ಅಡಮಾನ ಇರಿಸಿದ್ದಾರೆ ಎಂದು ಸಂಸ್ಥೆಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಬ್ಯಾಂಕ್‌ಗಳು ಮುಂದಿಟ್ಟ ಸಾಲ ಮರು ಹೊಂದಾಣಿಕೆ ಸೂತ್ರದ ಅನ್ವಯ, ನರೇಶ್‌ ಗೋಯಲ್‌ ಮತ್ತು ಅವರ ಪತ್ನಿ ಅನಿತಾ ಗೋಯಲ್‌ ಅವರು ಹಿಂದಿನ ತಿಂಗಳು ನಿರ್ದೇಶಕ ಮಂಡಳಿಯಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !